ಮ್ಯಾಜಿಕ್ ನಂಬರ್ 113 ತಲುಪಲು ಮತ್ತೊಮ್ಮೆ ಆಪರೇಷನ್ ಕಮಲ
News

ಮ್ಯಾಜಿಕ್ ನಂಬರ್ 113 ತಲುಪಲು ಮತ್ತೊಮ್ಮೆ ಆಪರೇಷನ್ ಕಮಲ

August 25, 2022

ಬೆಂಗಳೂರು, ಆ.24(ಕೆಎಂಶಿ)- ಮುಂಬ ರುವ ವಿಧಾನಸಭೆ ಚುನಾವಣೆ ಯಲ್ಲಿ ಮ್ಯಾಜಿಕ್ ಸಂಖ್ಯೆ 113ರ ಗಡಿ ತಲುಪಲು ಬಿಜೆಪಿ ಮತ್ತೊಮ್ಮೆ ಆಪರೇಷನ್
ಕಮಲಕ್ಕೆ ಮುಂದಾಗಿದೆ.

ಜೆಡಿಎಸ್‍ನ ಆಯ್ದ ಶಾಸಕರನ್ನು ಗುರಿ ಯಾಗಿಸಿಕೊಂಡು ನಿರಂತರವಾಗಿ ಅವರ ಮನವೊಲಿಸುವ ಕಾರ್ಯ ನಡೆದಿದೆ.ವಿಧಾನಸಭೆ ಚುನಾವಣೆ ಇತಿಹಾಸದಲ್ಲೇ ಬಿಜೆಪಿ ನೂರು ಕ್ಷೇತ್ರದಲ್ಲಿ ಖಾತೆ ತೆರೆದಿಲ್ಲ. ಇಂತಹ ಕ್ಷೇತ್ರಗಳಲ್ಲಿ ವರ್ಚಸ್ವಿ ಮತ್ತು ಪ್ರಭಾವ ಹೊಂದಿರುವ ಜೆಡಿಎಸ್‍ನ 12ಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿದೆ. ಜೆಡಿಎಸ್, ಅಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿಗೂ ಗಾಳ ಹಾಕಿದೆ. ಇವರನ್ನು ಸೆಳೆಯಲು ಪಕ್ಷದ ಹಿರಿಯ ಮುಖಂಡರು ಹಾಗೂ ಸಚಿವರ ತಂಡ ರಚಿಸಲಾಗಿದೆ. ಜೆಡಿಎಸ್, ಕಾಂಗ್ರೆಸ್ ತೊರೆದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರುವ ಭರವಸೆ ನೀಡಿದರೆ, ಅವರವರ ಕ್ಷೇತ್ರದಲ್ಲಿ ಅಭಿವೃದ್ಧಿಗೆ 200 ಕೋಟಿ ರೂ. ಬಿಡುಗಡೆ ಮಾಡುವುದರ ಜತೆಗೆ ಪಕ್ಷವೇ ಚುನಾವಣಾ ವೆಚ್ಚ ಭರಿಸಲಿದೆ.

ಕೆಲವರಿಗೆ ಅವರು ಪ್ರತಿನಿಧಿಸುವ ಜಿಲ್ಲೆ ವಿಭಜಿಸಿ ಅವರ ಕ್ಷೇತ್ರವನ್ನೇ ಜಿಲ್ಲೆ ಮಾಡುವ ಭರವಸೆ ನೀಡಲಾಗಿದೆ. ಈಗಲೇ ಸರ್ಕಾರದಿಂದ ನಿಮ್ಮೆಲ್ಲಾ ಕೆಲಸ ಮಾಡುತ್ತೇವೆ ಎಂಬ ವಿಶ್ವಾಸ ಮೂಡಿ ಸಲಾಗುತ್ತಿದೆ. ಅಧಿಕಾರಕ್ಕೆ ಬಂದ ಸಂದರ್ಭ ದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಒಂದಲ್ಲ ಒಂದು ಅಧಿಕಾರ ನೀಡುತ್ತೇವೆ. ಈಗಾ ಗಲೇ ಬಂದವರಿಗೆ ಈ ರೀತಿ ಅವಕಾಶ ಕಲ್ಪಿಸಲಾಗಿದೆ. ಹೀಗೆ ಕೋರಿಕೆ, ಒತ್ತಡ ಹೇರುವ ಮೂಲಕ ಸೆಳೆಯುವ ಪ್ರಯತ್ನ ನಡೆಸಲಾಗಿದೆ.

ವೀರಭದ್ರಯ್ಯ( ಮಧುಗಿರಿ), ಜಿ.ಟಿ.ದೇವೇಗೌಡ(ಚಾಮುಂಡೇಶ್ವರಿ), ಎ.ಟಿ.ರಾಮಸ್ವಾಮಿ (ಅರಕಲಗೂಡು), ವೆಂಕಟರಾವ್ ನಾಡಗೌಡ(ಸಿಂಧನೂರು), ರಾಜ ವೆಂಕಟಪ್ಪನಾಯಕ್ (ಮಾನ್ವಿ), ಕೃಷ್ಣಾರೆಡ್ಡಿ(ಚಿಂತಾಮಣಿ), ಡಾ.ಶ್ರೀನಿವಾಸಮೂರ್ತಿ (ನೆಲಮಂಗಲ), ನಿಸರ್ಗ ನಾರಾಯಣಸ್ವಾಮಿ(ದೇವನಹಳ್ಳಿ) ಸೇರಿದಂತೆ ಬಹುತೇಕ ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಹಾಸನ ತುಮಕೂರು, ಬೆಂಗಳೂರು ಜಿಲ್ಲೆಯ 12-13ಕ್ಕೂ ಹೆಚ್ಚು ಜೆಡಿಎಸ್ ಶಾಸಕರಿಗೆ ಬಿಜೆಪಿ ನಾಯಕರು ದುಂಬಾಲು ಬಿದ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ವಚನಭ್ರಷ್ಟತೆಯ ಆರೋಪ ಹೊರಿಸಿ 2008ರಲ್ಲಿ ನಡೆದ ವಿಧಾನ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು 110 ಸ್ಥಾನಗಳನ್ನು ಮಾತ್ರ. ಆಗ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಪಕ್ಷ ಮತ್ತು ಅಧಿಕಾರವನ್ನು ಗಟ್ಟಿ ಮಾಡಲು ಕಾಂಗ್ರೆಸ್, ಜೆಡಿಎಸ್‍ನ 18 ಶಾಸಕರನ್ನು ಆಪರೇಷನ್ ಕಮಲಕ್ಕೆ ಒಳಪಡಿಸಿತ್ತು. ಎರಡನೇ ಬಾರಿಗೆ ಮುಖ್ಯ ಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸರ್ಕಾರವನ್ನು ಉಳಿಸಿ ಕೊಳ್ಳಲು ಮೊದಲ ಬಾರಿಗೆ ಆಪರೇಷನ್ ಕಮಲ ನಡೆಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತವಾದ 113 ಸ್ಥಾನಗಳು ಗಳಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಗಳಿಸಿದ್ದು 104 ಮಾತ್ರ. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲು ಮತ್ತೆ ಎರಡನೇ ಬಾರಿಗೆ ಆಪರೇಷನ್ ಕಮಲ ನಡೆಸಬೇಕಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು.

2023ರ ವಿಧಾನಸಭೆ ಚುನಾವಣೆಯಲ್ಲಿ 113 ಸ್ಥಾನಗಳನ್ನು ಗಳಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಅಗತ್ಯವಿರುವ ಸರಳ ಬಹುಮತ ದೊರೆಯುವುದಿಲ್ಲ ಎಂಬುದು ಈಗಾಗಲೇ ನಡೆಸಿರುವ ಸಮೀಕ್ಷೆಗಳ ಮೂಲಕ ಖಾತ್ರಿಯಾಗಿದೆ. ಹೀಗಾಗಿ ಪ್ರಭಾವಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲಕ್ಕೆ ಒಳಪಡಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೇಂದ್ರದ ಬಿಜೆಪಿ ವರಿಷ್ಠರ ನಿರ್ದೇಶನದ ಮೇರೆಗೆ ಸಚಿವರೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಆಪರೇಷನ್ ಕಮಲ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಅಸಮಾದಾನಗೊಂಡಿರುವ ಶಾಸಕರನ್ನು ಗುರುತಿಸಿ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ, ತಮ್ಮ ಗುರಿ ಸಾಧನೆಗೆ ಪ್ರಯತ್ನಿಸಲಾಗುತ್ತಿದೆ. ಜೆಡಿಎಸ್ ಕೆಲವು ಶಾಸಕರು ಈ ವಿಚಾರವನ್ನು ತಮ್ಮ ನಾಯಕ ಹೆಚ್.ಡಿ.ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾರೆ. ಅವರು ಈ ವಿಚಾರ ಗೊತ್ತಿದೆ. ಸುಮ್ಮಿನಿರಿ ಎಂದು ಹೇಳಿದ್ದಾರೆ. ಇದೇ ರೀತಿ ಕಾಂಗ್ರೆಸ್‍ನಲ್ಲೂ ಕೂಡ ಆಪರೇಷನ್ ಕಮಲ ನಡೆಸಿ, ಖಾತೆ ತೆರೆಯುವ ಗುರಿ ಹಾಕಿಕೊಂಡಿದೆ.

Translate »