ಅಂತೂ ಐದು ತಿಂಗಳ ನಂತರ ಮೀಸಲಾತಿ ಪ್ರಕಟಿಸಿದ ಸರ್ಕಾರ ಸಾಮಾನ್ಯ ವರ್ಗಕ್ಕೆ ಮೈಸೂರು ಮೇಯರ್
ಮೈಸೂರು

ಅಂತೂ ಐದು ತಿಂಗಳ ನಂತರ ಮೀಸಲಾತಿ ಪ್ರಕಟಿಸಿದ ಸರ್ಕಾರ ಸಾಮಾನ್ಯ ವರ್ಗಕ್ಕೆ ಮೈಸೂರು ಮೇಯರ್

August 25, 2022

ಮೈಸೂರು, ಆ.24(ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಗಾದಿಗೆ ಭಾರೀ ಪೈಪೋಟಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಮೇಯರ್ ಸ್ಥಾನ `ಸಾಮಾನ್ಯ’ ವರ್ಗಕ್ಕೆ ಮೀಸಲಾಗಿರುವ ಕಾರಣ ಎಲ್ಲಾ 65 ಕಾರ್ಪೊರೇಟರ್‍ಗಳೂ ಅರ್ಹರಾಗಿದ್ದು, `ಬಿಸಿಎ ಮಹಿಳೆ’ಗೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಿದ್ದಾರೆ. ಯಾವ ಪಕ್ಷಗಳಿಗೂ ನಿರ್ದಿಷ್ಟ ಬಹುಮತ ಇಲ್ಲದಿರುವುದರಿಂದ ಮೈತ್ರಿ ಅನಿವಾರ್ಯ. ಈ ನಿಟ್ಟಿನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಚಟುವಟಿಕೆ ಚುರುಕುಗೊಳ್ಳಲಿದೆ. ಎಲ್ಲಾ ಪಕ್ಷಗಳ ರಾಜ್ಯ ಮಟ್ಟದ ನಾಯಕರು ನೀಡುವ ಸೂಚನೆಯಂತೆ `ಮೈತ್ರಿ’ ಪ್ರಕ್ರಿಯೆ ನಡೆಯಲಿದೆ.

`ಮೇಯರ್’ ಜೆಡಿಎಸ್‍ಗೆ?: ಮೈಸೂರು ನಗರ ಪಾಲಿಕೆ ಪ್ರಥಮ ಬಾರಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಪಾತ್ರ ಮಹತ್ವದಾಗಿತ್ತು. ಬಿಜೆಪಿಯ ಸುನಂದಾ ಪಾಲನೇತ್ರ ಅವರು ಮೇಯರ್ ಆಗಲು ಪರೋಕ್ಷವಾಗಿ ಜೆಡಿಎಸ್ ಕಾರಣವಾಗಿತ್ತು. ಕಾಂಗ್ರೆಸ್ ಜೊತೆಗಿನ ಸ್ನೇಹ ಕಳಚಿಕೊಂಡು ಚುನಾವಣೆಯಲ್ಲಿ ತಟಸ್ಥವಾಗಿ ಉಳಿ ಯುವ ಮೂಲಕ ಬಿಜೆಪಿ ಗೆಲುವಿಗೆ ಸಹಕರಿಸಿತು. ಬಿಜೆಪಿ ಸುನಂದಾ ಪಾಲನೇತ್ರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ಸದಸ್ಯೆ ಶಾಂತಕುಮಾರಿ ಕಣಕ್ಕಿಳಿದಿದ್ದರು. ಕಡೇ ಗಳಿಗೆಯಲ್ಲಾದರೂ ಜೆಡಿಎಸ್ ಸದಸ್ಯರು `ಕೈ’ ಹಿಡಿಯಬಹುದೆಂಬ ನಿರೀಕ್ಷೆ ಸುಳ್ಳಾಗಿತ್ತು. ಜೆಡಿಎಸ್ ಸದಸ್ಯರು ಶಾಂತಕುಮಾರಿಗೆ ಬೆಂಬಲ ನೀಡಿದ ಪರಿಣಾಮ ಸುನಂದಾ ಪಾಲನೇತ್ರ ವಿಜಯಿಯಾಗಿದ್ದರು. ಇದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಪ್ಪಂದವಾಗಿತ್ತು ಎನ್ನಲಾಗಿದೆಯಾದರೂ ಈವರೆಗೂ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಈ ಬಾರಿಯೂ ಬಿಜೆಪಿ-ಜೆಡಿಎಸ್ ಸ್ನೇಹ ಮುಂದು ವರೆಯುವ ಸಾಧ್ಯತೆ ಇದ್ದು, ಜೆಡಿಎಸ್ ಮೇಯರ್ ಪಟ್ಟವೇರಬಹುದು ಎನ್ನಲಾಗುತ್ತಿದೆ.

ಅಭ್ಯರ್ಥಿ ಆಯ್ಕೆಯೂ ಜಟಿಲ: ಮೈತ್ರಿ ಯಶಸ್ವಿಯಾಗಿ ಜೆಡಿಎಸ್‍ಗೆ ಮೇಯರ್ ಹಾಗೂ ಬಿಜೆಪಿಗೆ ಉಪಮೇಯರ್ ಎಂದಾದರೆ ಅಭ್ಯರ್ಥಿ ಆಯ್ಕೆಯೂ ಉಭಯ ಪಕ್ಷಗಳಿಗೆ ಜಟಿಲವಾಗುತ್ತದೆ. ಜೆಡಿಎಸ್‍ನಲ್ಲಿ ಕೆ.ವಿ.ಶ್ರೀಧರ್, ಎಸ್‍ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಅಶ್ವಿನಿ ಅನಂತು, ಎಂ.ಡಿ.ನಾಗರಾಜ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇನ್ನುಳಿದ ಎಲ್ಲಾ ಸದಸ್ಯರೂ ಆಕಾಂಕ್ಷಿಗಳಾಗಬಹುದು. ಇನ್ನು ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ಮತ್ತೆ ಮೇಯರ್ ಸ್ಥಾನ ಲಭಿಸುವಂತಾದರೆ ಶಿವಕುಮಾರ್, ಬಿ.ವಿ.ಮಂಜುನಾಥ್ ಹೆಸರು ಮುಂಚೂಣಿಗೆ ಬರಬಹುದು. ಉಳಿದ ಸದಸ್ಯರೂ ಪ್ರಯತ್ನ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏನಾದರೂ ಕಾಂಗ್ರೆಸ್ ಮತ್ತೆ ಜೆಡಿಎಸ್‍ನೊಂದಿಗೆ ಬಾಂಧವ್ಯ ಗಿಟ್ಟಿಸಿ ಮೇಯರ್ ಸ್ಥಾನ ಪಡೆದರೆ ಹಿರಿಯ ಸದಸ್ಯೆ ಶಾಂತಕುಮಾರಿ, ಎಂ.ಶಿವಕುಮಾರ್, ರಜನಿ ಅಣ್ಣಯ್ಯ ಪ್ರಬಲ ಆಕಾಂಕ್ಷಿಗಳಾಗಿ ಒತ್ತಡ ತರಬಹುದು.

ಉಪ ಮೇಯರ್‍ಗೂ ಪೈಪೋಟಿ: ಎಲ್ಲಾ ಪಕ್ಷಗಳಲ್ಲೂ ಬಿಸಿಎ ಮಹಿಳೆ ಮೀಸಲಾತಿಗೆ ಒಳಪಡುವ ಹಲವು ಸದಸ್ಯರಿದ್ದಾರೆ. ಬಿಜೆಪಿಯಿಂದ ಗೀತಾ ಯೋಗಾನಂದ, ಚಂಪಕಾ, ಛಾಯಾದೇವಿ, ರೂಪಾ, ಸೌಮ್ಯಾ ಉಮೇಶ್, ಕಾಂಗ್ರೆಸ್‍ನಿಂದ ಪುಟ್ಟನಿಂಗಮ್ಮ, ಹಾಸಿರಾ ಸೀಮಾ, ಶೋಭಾ ಸುನಿಲ್, ಜೆಡಿಎಸ್‍ನಿಂದ ಕೆ.ನಿರ್ಮಲಾ, ರೇಷ್ಮಾಬಾನು ಸೇರಿದಂತೆ ಹಲವು ಸದಸ್ಯರು ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಿದ್ದಾರೆ. ಹಾಗಾಗಿ ಉಪ ಮೇಯರ್ ಅಭ್ಯರ್ಥಿಯನ್ನು ಸುಲಭವಾಗಿ ಆಯ್ಕೆ ಮಾಡಲಾಗದು. ಒಟ್ಟಾರೆ ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡರು, ಯಾವ ಪಕ್ಷಕ್ಕೆ ಮೇಯರ್ ಅಥವಾ ಉಪ ಮೇಯರ್ ಸ್ಥಾನ ಸಿಕ್ಕರೂ ಅಭ್ಯರ್ಥಿ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಎಲ್ಲಾ ಪಕ್ಷಗಳೂ ಆಂತರಿಕ ಅಸಮಾಧಾನವನ್ನು ಶಮನ ಮಾಡಲು ಹರಸಾಹಸ ಮಾಡಬೇಕಾಗುತ್ತದೆ. ಪಕ್ಷಗಳ ದೊಡ್ಡ ನಾಯಕರೇ ಮೇಯರ್ ಚುನಾವಣಾ ಅಖಾಡಕ್ಕಿಳಿದು ಕ್ಷಣ ಕ್ಷಣದ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಸಾರ್ವತ್ರಿಕಾ ಚುನಾವಣಾ ವರ್ಷವಾಗಿರುವುದರಿಂದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಎಲ್ಲಾ ಪಕ್ಷಗಳಿಗೂ ಮಹತ್ವದ್ದಾಗಿದೆ. ಹಾಗೆಯೇ ಅಂತಿಮ ಕ್ಷಣದವರೆಗೂ ಯಾವ ರೀತಿಯ ಬದಲಾವಣೆಯಾದರೂ ಅಚ್ಚರಿಪಡಬೇಕಿಲ್ಲ.ಮೈಸೂರು ನಗರ ಪಾಲಿಕೆ ಕೌನ್ಸಿಲ್‍ಗೆ ಚುನಾವಣೆ ನಡೆದು ಮುಂದಿನ ತಿಂಗಳಿಗೆ 4 ವರ್ಷವಾಗಲಿದೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಮೇಯರ್ ಹಾಗೂ ಜೆಡಿಎಸ್‍ನ ಶಫಿ ಉಪಮೇಯರ್ ಆಗಿದ್ದರು. 2ನೇ ಅವಧಿಯಲ್ಲಿ ಜೆಡಿಎಸ್‍ನ ತಸ್ನೀಂ ಮೇಯರ್ ಹಾಗೂ ಕಾಂಗ್ರೆಸ್‍ನ ಸಿ.ಶ್ರೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. 3ನೇ ಅವಧಿಗೆ ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ ಮೇಯರ್ ಹಾಗೂ ಕಾಂಗ್ರೆಸ್‍ನ ಅನ್ವರ್ ಬೇಗ್ ಉಪ ಮೇಯರ್ ಆದರು. ಆದರೆ ತಪ್ಪು ಪ್ರಮಾಣ ಪತ್ರ ನೀಡಿದ ಆರೋಪದಿಂದ ಅವಧಿ ಮಧ್ಯೆಯೇ ರುಕ್ಮಿಣಿ ಮಾದೇಗೌಡ ಅಧಿಕಾರದಿಂದ ಇಳಿದರು. ಈ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾದರೆ ಉಪಮೇಯರ್ ಅನ್ವರ್ ಬೇಗ್ ಅಧಿಕಾರ ಮುಂದುವರೆಸಿದ್ದರು. ಇದೀಗ 4ನೇ ಅವಧಿ ಮೇಯರ್ ಹಾಗೂ ಉಪಮೇಯರ್‍ಗೆ ಮೀಸಲಾತಿ ಪ್ರಕಟವಾಗಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟವಾಗಬೇಕಿದೆ.

ಮೈಸೂರು, ಆ.24(ಆರ್‍ಕೆ)-ಅಂತೂ, ಸರ್ಕಾರ ಮೈಸೂರು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸ ಲಾತಿ ಪ್ರಕಟಿಸಿದೆ. ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್, ಮೈಸೂರು ಸೇರಿದಂತೆ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ ಪಡಿಸಿರುವ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯಪತ್ರ ದಲ್ಲೂ ಪ್ರಕಟಿಸಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ (ಉeಟಿeಡಿಚಿಟ) ಹಾಗೂ ಉಪ ಮೇಯರ್ ಸ್ಥಾನ ಹಿಂದು ಳಿದ ವರ್ಗಗಳ
ಮಹಿಳೆ (ಃಅಂ Womeಟಿ)ಗೆ ಮೀಸಲಾಗಿದೆ. ಅದರಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಅಧಿಸೂಚನೆ ಹೊರಡಿಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದ್ದಾರೆ.

ಇದರಿಂದಾಗಿ ಮೈಸೂರಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆ ಅಲಂಕರಿ ಸಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದು, ಈ ಬಾರಿಯ ದಸರಾ ನಾಡಹಬ್ಬಕ್ಕೆ ಹೊಸ ಮೇಯರ್, ಉಪ ಮೇಯರ್ ಆಯ್ಕೆಯಾಗುವುದು ಖಚಿತವಾಗಿದೆ. ಉಳಿದಂತೆ ಬಳ್ಳಾರಿ ಪಾಲಿಕೆಗೆ ಬಿಸಿಎ ಮಹಿಳೆ ಮೇಯರ್, ಸಾಮಾನ್ಯ ಮಹಿಳೆ ಉಪ ಮೇಯರ್, ಬೆಳಗಾವಿಯಲ್ಲಿ ಸಾಮಾನ್ಯ ಮಹಿಳೆ ಮೇಯರ್, ಪರಿಶಿಷ್ಟ ಜಾತಿ ಮಹಿಳೆ ಉಪ ಮೇಯರ್, ದಾವಣಗೆರೆಯಲ್ಲಿ ಮೇಯರ್‍ಗೆ ಸಾಮಾನ್ಯ ಮಹಿಳೆ, ಉಪ ಮೇಯರ್‍ಗೆ ಹಿಂದುಳಿದ ವರ್ಗ ಮಹಿಳೆ, ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಮೇಯರ್ ಸಾಮಾನ್ಯ ಮಹಿಳೆ, ಉಪ ಮೇಯರ್‍ಗೆ ಸಾಮಾನ್ಯ, ಕಲಬುರ್ಗಿಯಲ್ಲಿ ಮೇಯರ್‍ಗೆ ಪರಿಶಿಷ್ಟ ಜಾತಿ, ಉಪ ಮೇಯರ್‍ಗೆ ಸಾಮಾನ್ಯ, ಮಂಗಳೂರಲ್ಲಿ ಮೇಯರ್ ಸ್ಥಾನ ಸಾಮಾನ್ಯ, ಉಪ ಮೇಯರ್ ಸಾಮಾನ್ಯ ಮಹಿಳೆ, ಶಿವಮೊಗ್ಗದಲ್ಲಿ ಬಿಸಿಎ ಮೇಯರ್, ಸಾಮಾನ್ಯ ಮಹಿಳೆ ಉಪ ಮೇಯರ್, ತುಮಕೂರಲ್ಲಿ ಪರಿಶಿಷ್ಟ ಜಾತಿ ಮಹಿಳೆ, ಬಿಸಿಎ ಉಪ ಮೇಯರ್ ಹಾಗೂ ವಿಜಯಪುರ ಪಾಲಿಕೆಯಲ್ಲಿ ಪರಿಶಿಷ್ಟ ಪಂಗಡ ಮೇಯರ್ ಮತ್ತು ಬಿಸಿಎ, ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ.

ಐದು ತಿಂಗಳು ವಿಳಂಬ: 2022ರ ಫೆಬ್ರವರಿ 24ಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ಹಾಗೂ ಉಪ ಮೇಯರ್ ಅನ್ವರ್ ಬೇಗ್ ಅಧಿಕಾರಾವಧಿ ಮುಕ್ತಾಯವಾಗಿದ್ದು, ಸರ್ಕಾರ ಮೀಸಲಾತಿ ಪ್ರಕಟಿಸುವುದು ವಿಳಂಬವಾಗಿದ್ದರಿಂದಾಗಿ ಹಂಗಾಮಿಯಾಗಿ ಸ್ಥಾನಗಳಲ್ಲಿ ಮುಂದುವರಿಯುತ್ತಿದ್ದಾರೆ.

ಹಾಗಾಗಿ ಅವರು, ನೂತನ ಮೇಯರ್, ಉಪ ಮೇಯರ್ ಆಯ್ಕೆಯಾಗುವವರೆಗೆ ಯಾವುದೇ ಸಭೆ ನಡೆಸುವುದು, ಪ್ರಮುಖ ನಿರ್ಣಯ ಕೈಗೊಳ್ಳುವುದಕ್ಕೆ ಅವಕಾಶವಿರಲಿಲ್ಲ. 2022-23ನೇ ಸಾಲಿನ ಬಜೆಟ್‍ಗೆ ಒಪ್ಪಿಗೆ ಪಡೆಯಬೇಕಾಗಿದ್ದ ಕಾರಣ, ಮುಖ್ಯಮಂತ್ರಿಗಳಿಂದ ವಿಶೇಷ ಅನುಮತಿ ಪಡೆದು, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಏಪ್ರಿಲ್ ತಿಂಗಳಲ್ಲಿ ಬಜೆಟ್ ಸಭೆ ನಡೆಸಿದ್ದರು. ಮೀಸಲಾತಿ ಪ್ರಕಟವಾಗುತ್ತಿ ದ್ದಂತೆಯೇ ಇದೀಗ ಮೂರೂ ಪಕ್ಷಗಳಲ್ಲಿ ಮೇಯರ್ ಮತ್ತು ಉಪ ಮೇಯರ್‍ಗಾದಿ ಹಿಡಿಯಲು ಆಯಾ ವರ್ಗದ ಪಾಲಿಕೆ ಸದಸ್ಯರು ಬಿರುಸಿನ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ. ಸದ್ದಿಲ್ಲದೇ ಕೆಲವರು ತಮಗೆ ಅನುಕೂಲವಾಗುವಂತೆ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮೂಲಕ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಮೇಲೂ ಒತ್ತಡ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಮತ್ತೊಂದೆಡೆ 2022ರ ದಸರಾ ಮಹೋತ್ಸವ ಮುಗಿಯುವವರೆಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಬಾರದೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂಲಕ ಕೆಲವರು ಒತ್ತಡ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ. ಮಹಾಪೌರರ ಚುನಾವಣೆಗೆ ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಂಕಿತಕ್ಕೆ ಕಳುಹಿಸುತ್ತಿದ್ದಂತೆಯೇ ಯಡಿಯೂರಪ್ಪ ರಂಗ ಪ್ರವೇಶ ಮಾಡಿದ್ದರಿಂದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರ ಸ್ಥಿತಿ ಅಡಿಕೆ ಕತ್ತರಿಯಲ್ಲಿ ಸಿಲುಕಿದಂತಾಗಿತ್ತು ಎಂದು ಕೆಲವರು ಹೇಳುತ್ತಿದ್ದರು.
ಮೀಸಲಾತಿ ವಿಳಂಬವಾದ ಕಾರಣ ಸುನಂದಾ ಪಾಲನೇತ್ರ ಅವರಿಗೆ 5 ತಿಂಗಳು ಹೆಚ್ಚುವರಿ ಅಧಿಕಾರ ಸಿಕ್ಕಂತಾಗಿದೆ. ಆದರೆ ನಾಡಹಬ್ಬ ದಸರಾ ಮಹೋತ್ಸವ ಮುಗಿಯುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಇನ್ನೊಂದು ತಿಂಗಳು ಅವರಿಗೆ ಅವಕಾಶ ನೀಡಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Translate »