ವಿಪಕ್ಷ ನಾಯಕ ಸಿದ್ದರಾಮಯ್ಯ-ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಸ್ಪರ ವಾಗ್ಬಾಣ
ಮೈಸೂರು

ವಿಪಕ್ಷ ನಾಯಕ ಸಿದ್ದರಾಮಯ್ಯ-ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಸ್ಪರ ವಾಗ್ಬಾಣ

October 23, 2020

ಬೆಂಗಳೂರು, ಅ.22(ಕೆಎಂಶಿ)- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ವಾಕ್ಸಮರ ಬೀದಿಗೆ ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ `ಒಬ್ಬ ಕಾಡು ಮನುಷ್ಯ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದರೆ, ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರನ್ನು `ವಿದೂಷಕ’ ಎಂದು ಬಣ್ಣಿಸಿದೆ.

ಉಪಚುನಾವಣೆಯ ನಂತರ ಹುಲಿಯಾ (ಸಿದ್ದರಾಮಯ್ಯ) ಕಾಡಿಗೆ ಹೋಗುತ್ತಾರೆ ಎಂದು ಕಟೀಲು ಜರಿದಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಕಟೀಲ್ `ಒಬ್ಬ ಕಾಡು ಮನುಷ್ಯ’. ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿ ಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿ ಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಡಬೇಕು.

ತಮ್ಮ ಪಕ್ಷ ಸೇರಬೇಕಾದರೆ ಹತ್ತು ವರ್ಷ ಪಕ್ಷದ ಕಚೇರಿಯ ಕಸ ಗುಡಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಈ ನಳಿನ್ ಕುಮಾರ್ ಕಟೀಲನ್ನು ಇನ್ನು ಒಂದು ಹತ್ತು ವರ್ಷ ಕಚೇರಿಯ ಕಸಗುಡಿಸಲು ಹಚ್ಚಿದರೆ ಏನಾದರೂ ಸ್ವಲ್ಪ ಬುದ್ಧಿ ಬರಬಹುದೇನೋ. ನಳೀನ್ ಕುಮಾರ್ ಕಟೀಲು ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡ್ತಾರೆ.

ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳೀನ್ ಕುಮಾರ್ ಕಟೀಲ್‍ನನ್ನು ಯಾರೋ ತಮ್ಮ `ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್. ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ.

ಈಗ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಅದರ ಹೊಣೆಯನ್ನು ಯಡಿಯೂರಪ್ಪನವರ ತಲೆ ಮೇಲೆ ಕಟ್ಟಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಬೇಕು. ಇದು ನಳೀನ್ ಕುಮಾರ್ ಕಟೀಲು ಅವರಿಗೆ ಪಕ್ಷ ದೊಳಗಿನ ಕೆಲವು ನಾಯಕರೇ ಕೊಟ್ಟಿರುವ ಟಾಸ್ಕ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಈ ನಳೀನ್ ಕುಮಾರ್ ಕಟೀಲ್ ಅವರಿಗೆ ಸ್ವಲ್ಪ ಬುದ್ಧಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ಕಿಡಿಕಾರಿದ್ದು, ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಚಾಮುಂಡೇಶ್ವರಿಯ ಮತದಾರರು ಬೀದಿಯಲ್ಲಿ ಅಲೆಯುವಂತೆ ಮಾಡಿ ದ್ದಾರೆ. ಚುನಾವಣೆಯಲ್ಲಿ ಸ್ವಾರ್ಥ ಕ್ಕಾಗಿ ಡಾ.ಪರಮೇಶ್ವರ್ ಅವರನ್ನೇ ಸೋಲಿಸಿದ್ದು ನೀವಲ್ಲವೆ? ಎಂದು ಪ್ರಶ್ನಿಸಿದೆ. ಕಟೀಲ್ ನಾಯಕತ್ವ ದಲ್ಲಿ 15 ವಿಧಾನಸಭಾ ಕ್ಷೇತ್ರ ಗಳಿಗೆ ನಡೆದ ಉಪಚುನಾವಣೆ ಯಲ್ಲಿ 12 ಸ್ಥಾನ ಗೆದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನವರ ಗದ್ದುಗೆ ಬಲಪಡಿಸಿದೆ. ಈ ಉಪಚುನಾವಣೆಯಲ್ಲೂ ಬಿಜೆಪಿಯದ್ದೇ ಗೆಲುವು. ಕಟೀಲ್ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಜನತೆ ನಿಮ್ಮ ಬೆನ್ನು ಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ನೀವು ಗೆದ್ದಿದ್ದು ಕೇವಲ 1696 ಮತಗಳಿಂದ. ಸ್ವಲ್ಪ ವ್ಯತ್ಯಾಸವಾಗಿದ್ದರೂ, ನೀವು ಕಾಡು ಮನುಷ್ಯರಂತೆ ಜೀವನ ಮಾಡಬೇಕಾಗಿತ್ತು. ಕಾಂಗ್ರೆಸ್ ಸೇರುವುದಕ್ಕೂ ಮುನ್ನ ಜೆಡಿಎಸ್‍ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೆ ನಾಮ ಹಾಕಿದ ಮಹಾನುಭಾವರಲ್ಲವೇ? ಎಂದು ಪ್ರಶ್ನಿಸಿದೆ.

Translate »