ಅಲಂಕಾರಿಕ ಹೂ ಗಿಡಗಳೀಗ ಅಂದಹೀನ… ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು…!
ಮೈಸೂರು

ಅಲಂಕಾರಿಕ ಹೂ ಗಿಡಗಳೀಗ ಅಂದಹೀನ… ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು…!

February 16, 2022

ಮೈಸೂರು,ಫೆ.15- ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು! ಹೌದು, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ವಿಭಜಕದಲ್ಲಿ ಇಟ್ಟಿರುವ ಗಿಡದ ಕುಂಡಗಳು, ಸೂಕ್ತ ನಿರ್ವಹಣೆ ಇಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಒಡೆದು ಮಣ್ಣು ಪಾಲಾಗಿವೆ. ಉಳಿದಿರುವ ಬಹುಪಾಲು ಕುಂಡಗಳಲ್ಲಿ ಗಿಡಗಳು ಒಣಗುತ್ತಿದ್ದರೆ, ಹಲವು ಕುಂಡಗಳಲ್ಲಿ ಗಿಡಗಳೇ ಇಲ್ಲವಾಗಿವೆ. ಈ ರೀತಿ ಸಸ್ಯ ಸಂಪತ್ತಿನ ಹಾನಿಗೆ ಕಾರಣರಾದವರ ವಿರುದ್ಧ ಕ್ರಮವೇನು? ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಎದ್ದಿದೆ.
ಮೈಸೂರಿನ ಜೆಎಲ್‍ಬಿ ರಸ್ತೆ, ವಿನೋಬಾ ರಸ್ತೆ, ಹುಣಸೂರು ರಸ್ತೆಯೂ ಸೇರಿದಂತೆ ಜೋಡಿ ರಸ್ತೆಗಳಿರುವೆಡೆ ಇಟ್ಟಿರುವ ಕುಂಡಗಳಲ್ಲಿನ ಸಸ್ಯ ಸಂಹಾ ರವೇ ಆಗಿದೆ. ಇದು ನಿಜಕ್ಕೂ ಪರಿಸರ ಪ್ರೇಮಿಗಳಲ್ಲಿ ನೋವು ತಂದಿದೆ. ಲಕ್ಷಾಂತರ ಹಣ ವ್ಯಯಿಸಿ, ಸದುದ್ದೇಶದಿಂದ ಮಾಡಿದ ಕಾರ್ಯ ನಿರ್ವಹಣೆ ಇಲ್ಲದೆ ಮಣ್ಣುಪಾಲಾಗಿದೆ ಎಂಬುದು ಪರಿಸರವಾದಿಗಳ ಆಕ್ರೋಶ.

2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಹಿನ್ನೆಲೆಯಲ್ಲಿ ನಗರದ ಸೌಂದರ್ಯ ವೃದ್ಧಿಸಲು ಅದೇ ವರ್ಷದ ಮಾರ್ಚ್‍ನ ಕೊನೆಯಲ್ಲಿ ಈ ಕುಂಡಗಳನ್ನು ಪ್ರಮುಖ ಜೋಡಿ ರಸ್ತೆಗಳ ವಿಭಜಕದಲ್ಲಿ ಇಡಲಾಗಿತ್ತು. ಹೀಗೆ ಇಟ್ಟಿದ್ದ ಬಣ್ಣ ಬಣ್ಣದ ಹೂ ಬಿಡುವ ಹಾಗೂ ಅಲಂಕಾರಿಕ ಗಿಡಗಳು ಪಾಲಿಕೆ ನಿರ್ಲಕ್ಷ್ಯಕ್ಕೆ ಸೊರಗುವಂತಾಗಿವೆ. ಅಷ್ಟು ಮಾತ್ರವಲ್ಲದೆ, ಅಲಂಕಾರಿಕ ಗಿಡಗಳ ಮೂಲಕ ನಗರದ ಸೌಂದರ್ಯ ವೃದ್ಧಿಸುವಂತೆ ಮಾಡುವ ಉದ್ದೇಶವೂ ಈಡೇರದೇ ಮತ್ತಷ್ಟು ಅಂದಹೀನ ಸ್ಥಿತಿಗೆ ತಂದು ನಿಲ್ಲಿಸಿದಂತಾಗಿದೆ.

ಜೆಎಲ್‍ಬಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತ ಮತ್ತು ರೈಲ್ವೆ ನಿಲ್ದಾಣದ ವೃತ್ತದ (ಬಾಬು ಜಗಜೀವನರಾಂ ವೃತ್ತ) ನಡುವೆ ರಸ್ತೆ ವಿಭಜಕದಲ್ಲಿ ಐದಾರು ಅಡಿಗಳ ಅಂತರದಲ್ಲಿ ಗಿಡಗಳ ಕುಂಡಗಳನ್ನು ಇಡಲಾಗಿದೆ. ಅದೇ ರೀತಿ ವಿನೋಬಾ ರಸ್ತೆ-ಹುಣಸೂರು ರಸ್ತೆಯಲ್ಲೂ ಕುಂಡಗಳನ್ನು ಇಟ್ಟಿದ್ದು, ಇಟ್ಟವರ ಬೇಜವಾಬ್ದಾರಿಯಿಂದ ಹಲವೆಡೆ ಕುಂಡಗಳು ಒಡೆದು ಮಣ್ಣಲ್ಲಿ ಮಣ್ಣಾಗಿವೆ.

ವಿನೋಬಾ ರಸ್ತೆಯ ವಿಭಜಕದಲ್ಲಿ ಕೇಬಲ್ ಅಳವಡಿಕೆ ಸೇರಿದಂತೆ ಯಾವುದೋ ಕಾಮಗಾರಿಗಾಗಿ ಇತ್ತೀಚೆಗೆ ಮಣ್ಣು ಅಗೆದಿದ್ದು (ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‍ವರೆಗೆ), ಈ ವೇಳೆಯೂ ಅಲ್ಲಲ್ಲಿ ಕುಂಡಗಳು ಮತ್ತು ಅದರಲ್ಲಿದ್ದ ಗಿಡಗಳು ನಾಶವಾಗಿವೆ. ಜೊತೆಗೆ ಈ ಕುಂಡದಲ್ಲಿದ್ದ ಗಿಡಗಳಲ್ಲಿ ಅದೆಷ್ಟೋ ಬಿಡಾಡಿ ಜಾನುವಾರುಗಳ ಪಾಲಾಗಿವೆ.

ಸ್ವಚ್ಛ ಸರ್ವೇಕ್ಷಣಾ ಸಂದರ್ಭದಲ್ಲಿ ಮಾತ್ರ ಇಂತಹ ಕಾರ್ಯ ಮಾಡಿ, ಬಳಿಕ ಅವುಗಳ ನಿರ್ವಹಣೆಯನ್ನೇ ಮರೆಯುತ್ತಾರೆ ಎಂದು ಇದನ್ನು ನೋಡಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಾರೆ. ಬಿಸಿಲಿಗೆ ಬಾಡುತ್ತಿರುವ ಗಿಡಗಳ ಬಗ್ಗೆ ಕಾಳಜಿ ವಹಿಸದೇ ಈ ರೀತಿ ಬೇಜವಾಬ್ದಾರಿತನ ಸರಿಯಲ್ಲ. ಈ ಕಾರ್ಯಗಳನ್ನು ಕೇವಲ ಹಣ ಹೊಡೆಯಲು ಮಾಡಲಾಗುತ್ತದೆ ಎಂಬ ಸಂದೇಹ ಬರುವುದಿಲ್ಲವೆ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.
ಒಂದೆಡೆ ಗಿಡಗಳು ಒಣಗಿದ್ದರೆ, ಅವುಗಳ ಕುಂಡದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ತುಂಡು ಬಟ್ಟೆಗಳು ಸಿಲುಕಿರುವುದೂ ಅಲ್ಲಲ್ಲಿ ಕಂಡು ಬರುತ್ತಿದೆ. ವಿನೋಬಾ ರಸ್ತೆಯ ಡಿಸಿ ನಿವಾಸದ ಎದುರೂ ಒಂದೆರಡು ಕುಂಡಗಳು ಒಡೆದಿದ್ದರೆ, ಇಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನೇಕ ತ್ಯಾಜ್ಯಗಳು ವಿಭಜಕದಲ್ಲಿ ಬೆಳೆದಿರುವ ಗಿಡಗಂಟಿಗಳಿಗೆ ಸಿಲುಕಿಗೊಂಡಿವೆ. ಇನ್ನು ಜಲದರ್ಶಿನಿ ಅತಿಥಿಗೃಹದತ್ತ ಮುಂದೆ ಸಾಗಿದರೆ, ವಾಲ್ಮೀಕಿ ರಸ್ತೆಯ ಜಂಕ್ಷನ್, ಅಲ್ಲಿಂದ ಐಶ್ವರ್ಯ ಪೆಟ್ರೋಲ್ ಬಂಕ್‍ವರೆಗೂ ಕುಂಡಗಳು ಒಡೆದಿರುವುದು ಮಾತ್ರವಲ್ಲದೆ, ರಾಶಿ ರಾಶಿ ಯಾಗಿ ಬೆಳೆದು ನಿಂತಿರುವ ಪಾರ್ಥೇನಿಯಂ ಗಿಡಗಳು ಕಾಣಸಿಗಲಿವೆ.

ಒಡೆದು ಚೂರಾದ ಕುಂಡಗಳು ಅಲ್ಲಲ್ಲಿ ರಸ್ತೆಯಲ್ಲಿಯೂ ಚೆಲ್ಲಾಪಿಲ್ಲಿ ಯಾಗಿ ಬಿದ್ದಿವೆ. ಹೀಗೆ ಕುಂಡಗಳನ್ನು ರಸ್ತೆ ವಿಭಜಕದಲ್ಲಿ ತಂದಿಟ್ಟು ನಿರ್ವಹಣೆ ಯನ್ನು ಸಮರ್ಪಕವಾಗಿ ನಿಭಾಯಿಸದೇ ಇರುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಪ್ರಜ್ಞಾವಂತ ನಾಗರಿಕರಿಂದ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಸ್ಥಳವಾದ ರಸ್ತೆ ವಿಭಜಕದಲ್ಲಿ ಕುಂಡಗಳಿಟ್ಟರೆ ಕಾರ್ಯಸಾಧುವೇ? ಎಂದೂ ಹಲವು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ. ಅಲ್ಲದೆ, ನಗರದ ಹಸರೀಕರಣ ಹಾಗೂ ಸೌಂದ ರ್ಯೀಕರಣ ವೃದ್ಧಿಸುವ ನೆಪದಲ್ಲಿ ಯಾವುದಾದರೂ ಒಂದು ಇಂತಹ ಯೋಜನೆ ರೂಪಿಸಿ, ತಮ್ಮ ಜೇಬು ತುಂಬಿಸಿಕೊಳ್ಳುವ ತಂತ್ರದಲ್ಲಿ ಇದೂ ಒಂದಾಗಿದೆಯೇ? ಎಂದು ಪ್ರಜ್ಞಾವಂತರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಗಳಲ್ಲಿ ಹಲವೆಡೆ ವಿಭಜಕದಲ್ಲಿ ಬೆಳೆದಿರುವ ಗಿಡಗಳು ಒಣಗಿ ಹೋಗಿವೆ. ಆರಂಭದಲ್ಲಿ ಆಸಕ್ತಿ ವಹಿಸಿ ಆನಂತರದಲ್ಲಿ ಅಲಕ್ಷ್ಯ ತೋರಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಒಟ್ಟಾರೆ ಕುಂಡದ ಗಿಡಗಳ ಪಾಲನೆ ಮರೆತ ಪಾಲಿಕೆಗೆ ಪ್ರಜ್ಞಾ ವಂತ ನಾಗರಿಕರು ಹಾಗೂ ಪರಿಸರವಾದಿಗಳು ಹಿಡಿಶಾಪ ಹಾಕುತ್ತಿದ್ದು, ಗುಂಡಿ ಬಿದ್ದ ನಗರದ ರಸ್ತೆಗಳ ಜೊತೆಗೆ ರಸ್ತೆ ವಿಭಜಕದ ಗಿಡದ ಕುಂಡಗಳು ಮಂಕಾಗಿ ಮೈಸೂರಿನ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇನ್ನಾದರೂ ಪಾಲಿಕೆ ಇವುಗಳ ಪಾಲನೆಗೆ ಮುಂದಾಗುವುದೇ ಕಾದು ನೋಡಬೇಕಿದೆ.

Translate »