ಹಾಲಾಳು ಗ್ರಾಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಸ್ಮಾರಕ ನಿರಂತರ ಚಟುವಟಿಕೆಯ ಕೇಂದ್ರವಾಗಲೆಂಬುದು ನಮ್ಮ ಉದ್ದೇಶ: ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು

ಹಾಲಾಳು ಗ್ರಾಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಸ್ಮಾರಕ ನಿರಂತರ ಚಟುವಟಿಕೆಯ ಕೇಂದ್ರವಾಗಲೆಂಬುದು ನಮ್ಮ ಉದ್ದೇಶ: ಸಿಎಂ ಬಸವರಾಜ ಬೊಮ್ಮಾಯಿ

January 30, 2023

ಮೈಸೂರು, ಜ.29(ಆರ್‍ಕೆಬಿ)- ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಗೌರವ ತರುವ ರೀತಿ ಯಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರಂತರ ಚಟು ವಟಿಕೆಯ ಕೇಂದ್ರವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕೆ ತಕ್ಕಂತೆ ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದರು.

ಮೈಸೂರಿನ ಹೆಚ್.ಡಿ.ಕೋಟೆ ರಸ್ತೆ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದಲ್ಲಿ 11 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ಅವರು ಚಲನಚಿತ್ರದಲ್ಲಿ ಮಾಡಿದ ಸಾಧನೆ ಕಣ್ಣ ಮುಂದಿದೆ. ನಾನು ವಿಷ್ಣುವರ್ಧನ್ ಅಭಿಮಾನಿ ಯಾಗಿ ಇಲ್ಲಿಗೆ ಬಂದಿದ್ದೇನೆ. 70ರ ದಶಕದಲ್ಲಿ ಪ್ರಜಾ ಮತದ ಮುಖಪುಟದಲ್ಲಿ ನಾಗರಹಾವು ಚಿತ್ರದಲ್ಲಿನ ಹೊಸ ನಾಯಕನಾಗಿ ವಿಷ್ಣುವರ್ಧನ್‍ರ ಭಾವಚಿತ್ರ ಪ್ರಕಟವಾಗಿತ್ತು. ಅದನ್ನು ಯಾರಾದರೂ ಮೊದಲ ಬಾರಿ ನೋಡಿದವರು ವಿಷ್ಣುವರ್ಧನ್‍ರ ಅಭಿಮಾನಿ ಯಾಗುತ್ತಾರೆ ಎಂಬ ರೀತಿಯಲ್ಲಿತ್ತು. ನಾಗರ ಹಾವು ಮೊದಲ ಚಿತ್ರದಲ್ಲೇ ನಾಯಕ ನಟರಾಗಿ ಕನ್ನಡಗರ ಜನಮನ ಗೆದ್ದ ವಿಷ್ಣುವರ್ಧನ್, ಅನೇಕ ಪೌರಾಣಿಕ, ಸಾಮಾಜಿಕ, ಸಾಹಸಮಯ ಚಿತ್ರಗಳಲ್ಲಿ ನಟಿಸಿ `ಸಾಹಸಸಿಂಹ’ರಾಗಿ ನಾಲ್ಕು ದಶಕಗಳ ಕಾಲ ಕನ್ನಡಿಗರ, ಮನೆ ಮನದಲ್ಲಿ ನೆಲೆಸಿದ್ದಾರೆ. ಹಲವು ಭಾಷೆಗಳಲ್ಲಿ ನಟಿಸಿ, ರಾಜ್ಯದ ಧ್ವಜವನ್ನು ಎತ್ತಿ ಹಿಡಿದವರು. ಯಾವುದೇ ಪಾತ್ರ ನೀಡಿದರೂ ನೈಜವಾಗಿ ಅಭಿನಯಿಸಿ ದವರು. ಅವರ ಪ್ರತಿಯೊಂದು ನಟನೆ, ಸಂಭಾಷಣೆÉಗಳು ಇಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ ಎಂದು ನುಡಿದರು. ಹಿರಿಯ ನಟಿ ಭಾರತಿ ಅವರನ್ನು ಬಾಳ ಸಂಗಾತಿಯಾದ ಬಳಿಕ ವಿಷ್ಣುವರ್ಧನ್ ಬಹಳ ದೊಡ್ಡ ಸಾಧನೆ ಮಾಡಿದರು. ವಿಷ್ಣು ಭಾವುಕ ಜೀವಿ. ಮಾನವೀಯತೆ ಮೆರೆದವರು. ವಿಷ್ಣು ಸ್ಮಾರಕದ ಸ್ಥಳದ ವಿಚಾರ ದೊಡ್ಡ ವಿವಾದವಾಗಿತ್ತು. ಆಗ ವಿಷ್ಣು ಸ್ಮಾರಕ ಮೈಸೂರಿನಲ್ಲೇ ಆಗಬೇಕೆಂದು ಭಾರತಿ ದಿಟ್ಟ ನಿಲುವು ಹೊಂದಿದ್ದರು. ನಂತರ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿ ಯೂರಪ್ಪ 11 ಕೋಟಿ ರೂ. ನೀಡಿ, ಸ್ಮಾರಕ ನಿರ್ಮಾಣವಾಗಿದೆ. ಇದಕ್ಕಾಗಿ ಯಡಿಯರೂಪ್ಪ ಅವರಿಗೆ ಮತ್ತು ಬಿಜೆಪಿ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಅಪ್ಪಾವ್ರ ಆಸೆ ಈಡೇರಿದೆ: ಅನಿರುದ್ಧ ಹರ್ಷ: ಕೊನೆಗೂ ಅಪ್ಪಾವ್ರ (ಡಾ.ವಿಷ್ಣು ವರ್ಧನ್) ಆಶಯ ನಿಜವಾಯಿತು. ಇದು 13 ವರ್ಷಗಳ ನಿರಂತರ ಹೋರಾಟದ ಫಲ. ಸುಂದರ ಜಗತ್ತಿಗೆ ಮಾದರಿಯಾಗಬಹುದಾದಂತಹ ಸ್ಮಾರಕವಾಗಿದೆ ಎಂದು ವಿಷ್ಣುವರ್ಧನರ ಅಳಿಯ ಅನಿರುದ್ಧ್ ಹರ್ಷ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಂದ ಸ್ಮಾರಕ ಲೋಕಾರ್ಪಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡ ಲಾಗಿದ್ದು, ಇನ್ನುಳಿದ ಎರಡು ಎಕರೆ ಜಾಗವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಸಾಹಸ ಸಿಂಹ ಸಭಾಂಗಣದಲ್ಲಿ ಚಲನಚಿತ್ರೋತ್ಸವಗಳ ಜೊತೆಗೆ ಅವರ ಜನ್ಮ ವಾರ್ಷಿಕೋತ್ಸವನ್ನು ಆಯೋಜಿಸಲಾಗುವುದು. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಕಲಾ ಶಿಬಿರವನ್ನು ನಡೆಸಲು ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು. ಸಾಹಸಸಿಂಹ ಸಭಾಂಗಣದಲ್ಲಿ ಕೇವಲ ಚಲನಚಿತ್ರೋತ್ಸವ ಗಳನ್ನು ಆಯೋಜಿಸುವುದಷ್ಟೇ ಅಲ್ಲ, ಅಪ್ಪಾಜಿಯವರ ಜನ್ಮ ವಾರ್ಷಿಕೋತ್ಸವವನ್ನೂ ಆಯೋಜಿಸಲಾಗುತ್ತದೆ. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಕಲಾ ಶಿಬಿರಗಳನ್ನು ನಡೆಸಲು ಎರಡು ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಷ್ಣುವರ್ಧನ್ ಅವರ ಆಶಯದಂತೆ ಕಲಾ ತರಬೇತಿಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದರು. ಅಪ್ಪಾವ್ರ (ವಿಷ್ಣುವರ್ಧನ್) ಕನಸುಗಳನ್ನು ಮೆಲುಕು ಹಾಕುವ ಮೂಲಕ ನಾವು ಕಲ್ಪಿಸಿಕೊಂಡಂತೆ ಸ್ಮಾರಕ ಬಂದಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಒತ್ತಡದಿಂದಾಗಿ ನಾವು ಚಲನಚಿತ್ರ ತಾರೆಯ ರನ್ನು ಇಲ್ಲಿಗೆ ಕರೆಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಚಲನಚಿತ್ರೋತ್ಸವ, ವಿಷ್ಣು ಜನ್ಮೋತ್ಸವದ ಸಂದರ್ಭದಲ್ಲಿ ಆಯೋಜಿಸುವ ಕಾರ್ಯಕ್ರಮಗಲಿಗೆ ಎಲ್ಲಾ ಕಲಾವಿದರನ್ನು ಆಹ್ವಾನಿಸಲಾಗುವುದು ಎಂದು ನಟ ಅನಿರುದ್ಧ ಹೇಳಿದರು.

Translate »