ಅಭಿಮಾನಿಗಳಿಂದ ಭಾರೀ ಸಂಭ್ರಮ
ಮೈಸೂರು

ಅಭಿಮಾನಿಗಳಿಂದ ಭಾರೀ ಸಂಭ್ರಮ

January 30, 2023

ಮೈಸೂರು,ಜ.29(ಆರ್‍ಕೆಬಿ)- ಮೈಸೂ ರಿನ ಹೆಚ್.ಡಿ.ಕೋಟೆ ರಸ್ತೆ ಉದ್ಬೂರು ಗೇಟ್ ಬಳಿ ಹಾಳಾಳು ಗ್ರಾಮದಲ್ಲಿ ಕನ್ನಡದ ಮೇರುನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಪ್ರದೇಶ ಭಾನುವಾರ ಸಾವಿರಾರು ಅಭಿಮಾನಿ ಗಳಿಂದ ತುಂಬಿ, ವಿಷ್ಣುವರ್ಧನ್ ಪರ ಘೋಷಣೆಗಳು ಗಗನ ಮುಟ್ಟಿದವು. ತಮ್ಮ ಅಭಿಮಾನಿ ನಟನ ಭಾವಚಿತ್ರ ಹಿಡಿದು, ಸಂಭ್ರಮಿಸಿದರು.

ಹಾಲಾಳು ಗ್ರಾಮದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿದೆ. ಡಾ.ವಿಷ್ಣು ವರ್ಧನ್ ಪ್ರತಿಷ್ಠಾನ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸರ್ಕಾರ ದಿಂದ ಮಂಜೂರಾದ ಒಟ್ಟು 5 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ವಾಗಿದೆ. ಉದ್ಘಾಟನಾ ಸಮಾರಂಭ ಕ್ಕೆಂದು ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಯಲ್ಲಿ 2 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತಾದರೂ, ಅದಕ್ಕೂ ಮೀರಿ ಅಭಿಮಾನಿಗಳ ದಂಡು, ಸುಡು ಬಿಸಿಲಿನಲ್ಲಿಯೇ ನಿಂತು ಮುಖ್ಯಮಂತ್ರಿ ಗಳಿಂದ ಉದ್ಘಾಟನಾ ಕಾರ್ಯಕ್ರಮವನ್ನು ವೀಕ್ಷಿಸಿತು. ನಡು ನಡುವೆ ವಿಷ್ಣು ಪರ ಘೋಷಣೆಗಳನ್ನು ಕೂಗಿ ಅಭಿಮಾನ ಪ್ರದರ್ಶಿಸಿದರು. ಅಭಿಮಾನಿಗಳು ಬೈಕ್, ಕಾರ್ ರ್ಯಾಲಿಗಳ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದರು. ಪ್ರತಿಯೊಬ್ಬರ ಕೈಯ್ಯಲ್ಲೂ ಅಭಿಮಾನಿ ನಟದ ಭಾವಚಿತ್ರ ಇದ್ದರೆ, ನೂರಾರು ಮಂದಿ ವಿಷ್ಣು ಭಾವಚಿತ್ರ ಇರುವ ಟೀ ಶರ್ಟ್ ಧರಿಸಿದ್ದರು. ತಮ್ಮ ಅಭಿಮಾನಿ ನಟನ ಸ್ಮಾರಕದ ಕನಸು ನನಸಾಗರಲು 13 ವರ್ಷಗಳು ಬೇಕಾಯಿತು. ಕೊನೆಗೂ ಸ್ಮಾರಕ ನಿರ್ಮಾಣವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಸ್ಮಾರಕದ ಲೋಕಾರ್ಪಣೆಯನ್ನು ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಆಚರಿಸಿದ್ದ ರಿಂದ ಸ್ಮಾರಕ ಪ್ರದೇಶದ ಸುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ಕನ್ನಡ ಧ್ವಜ ಮತ್ತು ನಟನ ಭಾವಚಿತ್ರ ಮುದ್ರಿಸಿದ ಬಿಳಿ ಬಾವುಟಗಳನ್ನು ಬೀಸುತ್ತಿದ್ದರು. ಇನ್ನೂ ಅನೇಕರು ವಿಷ್ಣುವಿನ ತದ್ರೂಪು ವೇಷ ಧರಿಸಿ, ಅಭಿಮಾನ ಮೆರೆದರು. ನಟನ ಬೃಹತ್ ಗಾತ್ರದ ಕಟೌಟ್‍ಗಳನ್ನು ಹಾಕಿ, ಅದಕ್ಕೆ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಸ್ಮಾರಕದ ಹಿಂಬದಿಯಲ್ಲಿರುವ ಸಾಹಸಸಿಂಹ ಸಭಾಂಗಣದಲ್ಲಿ ವಿಷ್ಣುವರ್ಧನ್ ಅವರ ಚಲನಚಿತ್ರದ ಹಿಟ್ ಹಾಡುಗಳು ಮತ್ತು ಸಂಭಾಷಣೆಯ ದೃಶ್ಯಗಳ ಪ್ರದರ್ಶನ ಅಭಿಮಾನಿಗಳಲ್ಲಿ ಮತ್ತಷ್ಟು ಸಂಭ್ರಮಿಸುವಂತೆ ಮಾಡಿತು.

ಪ್ರತಿಮೆಯ ಪ್ರಮುಖ ಆಕರ್ಷಣೆ: 7 ಅಡಿ ಎತ್ತರದ ನಟನ ಪ್ರತಿಮೆಯನ್ನು ರಾಜನ `ಆಪ್ತಮಿತ್ರ’ ಚಿತ್ರದ ರಾಜನ ಉಡುಗೆಯಲ್ಲಿದ್ದ ಪ್ರತಿಮೆ ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ಸ್ಮಾರಕದ ಪ್ರತಿಮೆ ತಳಭಾಗದಲ್ಲಿ ವಿಷ್ಣುವರ್ಧನ್‍ರ ಚಿತಾಭಸ್ಮದದ ಮೇಲೆ ಪೀಠ ನಿರ್ಮಿಸಿ, ಅದರ ಮೇಲೆ ಆಕರ್ಷಕ ಪ್ರತಿಮೆ ನಿರ್ಮಿಸಲಾಗಿದೆ. ಸ್ಮಾರಕದ ಸುತ್ತ 600ಕ್ಕೂ ಹೆಚ್ಚು ವಿಷ್ಣುವರ್ಧನ್ ನಟಿಸಿದ ಚಿತ್ರಗಳ ಫೋಟೋ ಗ್ಯಾಲರಿ ಒಳಗೊಂಡಿದೆ. ವಿಷ್ಣು ಅವರ ಜೀವನ ಚರಿತ್ರೆಯನ್ನು ಚಿತ್ರಿಸುವಂತಿದೆ. ವಿಷ್ಣು ಪ್ರತಿಮೆಯ ಹಿಂಬದಿಯಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಸಾಹಸಸಿಂಹ ಸಭಾಂಗಣ, ಎರಡು ತರಗತಿ ಕೊಠಡಿ, ಸುಸಜ್ಜಿತ ಶೌಚಾಲಯವಿದೆ. ಸ್ಮಾರಕದ ಸುತ್ತಲೂ ಉದ್ಯಾನವನ್ನೂ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಹಲವು ಚಿತ್ರಗಳಲ್ಲಿ ನಟರೊಂದಿಗೆ ತೆರೆ ಹಂಚಿಕೊಂಡಿರುವ ಜನಪ್ರಿಯ ನಟ ರಮೇಶ್ ಭಟ್, ಕಿರುತೆರೆ ಧಾರಾವಾಹಿ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ಶ್ರುತಿ ನಾಯ್ಡು, ನಿರ್ಮಾಪಕ, ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಇನ್ನಿತರರು ಉಪಸ್ಥಿತರಿದ್ದರು.

Translate »