ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದೇಶಿಗರ ಅನಧಿಕೃತ ವಾಸ!
ಮೈಸೂರು

ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದೇಶಿಗರ ಅನಧಿಕೃತ ವಾಸ!

March 2, 2020

ಮೈಸೂರು, ಮಾ. 1 (ಆರ್‍ಕೆ)- ನಂಜನಗೂಡಿನ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಅನಧಿಕೃತವಾಗಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.

ವೀಸಾ, ಪಾಸ್‍ಪೋರ್ಟ್ ಇಲ್ಲದೆಯೇ ಪಶ್ಚಿಮ ಬಂಗಾಳ ಗಡಿ ಮೂಲಕ ನುಸುಳಿ ಬಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯ, ಅಡಕನಹಳ್ಳಿ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶ ಗಳಲ್ಲಿರುವ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ ಎಂದು ರಾಜ್ಯ ಗುಪ್ತ ವಾರ್ತಾ ವಿಭಾಗದ ಮೂಲಗಳು ತಿಳಿಸಿವೆ.

ಬಹುತೇಕ ಮಂದಿ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಮೂಲದ ಸುಮಾರು 20ರಿಂದ 28 ವರ್ಷ ವಯಸ್ಸಿನ ಯುವಕರು ಕೆಲಸಕ್ಕಾಗಿ ಬಂದು ನಂಜನಗೂಡು ಭಾಗದ ಕೈಗಾರಿಕೆಗಳಲ್ಲಿ ಸೇರಿಕೊಂಡು ನೆಲೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರ ಬಳಿ ಪಾಸ್‍ಪೋರ್ಟ್ ಆಗಲೀ, ವೀಸಾ ಆಗಲೀ ಅಥವಾ ಬೇರೆ ಯಾವ ಗುರುತಿನ ಚೀಟಿಯೂ ಸಹ ಇಲ್ಲ. ಆದರೆ ದಾಖಲಾತಿಗಳಿಲ್ಲದೆ ದೇಶದೊ ಳಗೆ ನುಸುಳಿದ್ದಾದರೂ ಹೇಗೆ ಎಂದರೆ, ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರಿಗಳಿಗೆ ಲಂಚ ಕೊಟ್ಟು ಬಂದಿದ್ದಾರೆ ಎಂಬ ಆತಂಕಕಾರಿ ವಿಷಯವೂ ಸಹ ಬೆಳಕಿಗೆ ಬಂದಿದೆ.

ಕೆಲಸಗಾರರ ಕೊರತೆ ಇರುವುದರಿಂದ ಹಾಗೂ ಸ್ಥಳೀಯರನ್ನು ಸೇರಿಸಿಕೊಂಡರೆ ಬೇರೆ ಬೇರೆ ಕಾರಣ ಗಳನ್ನೇಳಿ ಪದೇ ಪದೆ ರಜೆ ಕೇಳುವುದಲ್ಲದೆ, ಕಾರ್ಮಿಕ ಕಾನೂನುಗಳನ್ನು ಮಾತನಾಡಿ ಅನಗತ್ಯ ಅಡಚಣೆ ಮಾಡುವುದರಿಂದ ಅವರ ಮೂಲಕ ಕೆಲಸ ಮಾಡಿ ಸುವುದು ಕಷ್ಟ ಎಂದು ವಿದೇಶಿ ಯುವಕರಿಗೆ ಕೈಗಾ ರಿಕೆಗಳಲ್ಲಿ ಸುಲಭವಾಗಿ ಕೆಲಸ ಕೊಡುತ್ತಿರುವುದು ಅನಧಿಕೃತವಾಗಿ ವಿದೇಶಿ ಪ್ರಜೆಗಳು ನೆಲೆಸಲು ಕಾರಣ ಎಂಬ ಮಾಹಿತಿಯೂ ಪೊಲೀಸರಿಗೆ ತಿಳಿದಿದೆ.

ಇಬ್ಬರ ಸೆರೆ: ತಮಗೆ ಬಂದ ಖಚಿತ ಮಾಹಿತಿ ಯನ್ವಯ ಮೈಸೂರು ಸಿಸಿಬಿ ಪೊಲೀಸರು ಶುಕ್ರ ವಾರ ಸಂಜೆ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಅನ ಧಿಕೃತವಾಗಿ ವಾಸವಾಗಿದ್ದ ಇಬ್ಬರು ಬಾಂಗ್ಲಾ ದೇಶದ ಯುವಕರನ್ನು ಬಂಧಿಸಿದ್ದಾರೆ.

ಬಾಂಗ್ಲಾ ದೇಶದ ಸಾತ್ಕಿರ್ ಜಿಲ್ಲೆ, ಸಾಮನಗರ ದವರೆನ್ನಲಾದ ಮಹಮದ್ ಅಬ್ದುಲ್ಲಾ(26) ಮತ್ತು ಮೊಹಮದ್ ಹಬೀಬುಲ್ಲಾ(22) ಎಂಬ ಸಹೋ ದರರೇ ಬಂಧಿತರು. 2018ರಲ್ಲೇ ಬಂದಿರುವ ಸಹೋ ದರರು, ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದು, ತಾಂಡ್ಯ ಕೈಗಾರಿಕಾ ಪ್ರದೇಶದ ಚೀಲ ತಯಾರಿಸುವ ರಿಷಿ ಫ್ಯಾಬ್ರಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ನಂಜನಗೂಡು ಗ್ರಾಮಾಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದವರಾದ ಈ ಸಹೋದರರ ಬಳಿ ವೀಸಾ-ಪಾಸ್‍ಪೋರ್ಟ್ ಇಲ್ಲದಿರುವುದು ತಿಳಿಯಿತು ಎಂದು ಸಿಸಿಬಿ ಪೊಲೀ ಸರು ತಿಳಿಸಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿರುವ ಹೊರದೇಶದ ಪ್ರಜೆಗಳಿಗೆ ಸ್ಥಳೀಯವಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್ ಗಳನ್ನೂ ಮಾಡಿಕೊಡಲಾಗಿದೆ ಎಂಬುದು ಸಹ ಪೊಲೀಸರಿಗೆ ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »