ಮೈಸೂರು, ಆ.20(ಪಿಎಂ)- ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರವಾಸಿ ಬಸ್ ಮತ್ತಿತರೆ ವಾಹನ ಗಳಿಗೆ ಕನಿಷ್ಠ 6 ತಿಂಗಳು ತೆರಿಗೆ ವಿನಾಯಿತಿ ನೀಡಬೇಕು ಹಾಗೂ ಬ್ಯಾಂಕ್, ಫೈನಾನ್ಸ್ ಸಂಸ್ಥೆಗಳಿಗೆ ಸಾಲದ ಕಂತು ಪಾವತಿಗೂ 6 ತಿಂಗಳು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀ ಕರ ಸಂಘ ಹಾಗೂ ನಮ್ಮ ಚಾಲಕರ ಟ್ರೇಡ್ ಯೂನಿಯನ್‍ನಿಂದ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಉಪ ತಹಸಿಲ್ದಾರ್ ಬೋರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಜಮಾವಣೆಗೊಂಡ ಪ್ರವಾಸಿ ಬಸ್ ಮಾಲೀಕರು-ಚಾಲಕರು, ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದೆ ಕಂಗೆಟ್ಟಿದ್ದೇವೆ. ಈಗ ಲಾಕ್‍ಡೌನ್ ಮುಕ್ತವಾದರೂ ಸೋಂಕಿನ ಭೀತಿಯಿಂದ ಪ್ರವಾಸಿ ತಾಣಗಳತ್ತ ಜನತೆ ಮುಖ ಮಾಡದ ಹಿನ್ನೆಲೆಯಲ್ಲಿ ಪ್ರವಾಸಿ ವಾಹನಗಳು ಚಲಿಸದೇ ಸ್ಥಗಿತಗೊಂಡಿವೆ. ಇದರಿಂದ ಪ್ರವಾಸಿ ಬಸ್ ಮಾಲೀಕರು-ಚಾಲಕರು ಆರ್ಥಿಕವಾಗಿ ಕಷ್ಟ ಅನುಭವಿಸು ವಂತಾಗಿದೆ ಎಂದು ಅಳಲು ತೋಡಿ ಕೊಂಡರು. ನಮ್ಮಲ್ಲಿ ಹಲವರು ತಮ್ಮ ವಾಹನಗಳಿಗೆ ತಾವೇ ಚಾಲಕರಾಗಿದ್ದಾರೆ. ಹದಗೆಟ್ಟಿರುವ ನಮ್ಮ ಆರ್ಥಿಕ ಸ್ಥಿತಿ ಸುಧಾರಿ ಸಲು ಕನಿಷ್ಠ 2 ವರ್ಷಗಳಾದರೂ ಬೇಕು. ಈ ಹಿನ್ನೆಲೆಯಲ್ಲಿ 6 ತಿಂಗಳ ತೆರಿಗೆಗೆ ವಿನಾಯಿತಿ ನೀಡಬೇಕು. ಸಾಲದ ಮೊತ್ತಕ್ಕೆ ಯಾವುದೇ ರೀತಿಯ ಬಡ್ಡಿ ವಿಧಿಸ ಬಾರದು. ಕೇಂದ್ರ ಸರ್ಕಾರದ ಆದೇಶದಂತೆ ಎಂಎಸ್‍ಎಂಇ ಕಂಪನಿಗಳಿಗೆ ನಮ್ಮ ಹಳದಿ ಬೋರ್ಡ್ ವಾಹನಗಳನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎ.ವಿ.ಪೃಥ್ವಿರಾಜ್ ಮಾತ ನಾಡಿ, ನಮ್ಮ ಒಂದು ಬಸ್‍ಗೆ ತೆರಿಗೆ, ವಿಮೆ ಸೇರಿ ವಾರ್ಷಿಕ 4 ಲಕ್ಷ ರೂ. ವೆಚ್ಚ ಮಾಡಬೇಕು. ಬೇರಾವ ರಾಜ್ಯದಲ್ಲೂ ಇಷ್ಟು ದುಬಾರಿ ತೆರಿಗೆ ಇಲ್ಲ. ಹಾಗಾಗಿ ತೆರಿಗೆ ತಗ್ಗಿಸಿ, ಪಾವತಿಗೆ ಹೆಚ್ಚು ಕಾಲಾ ವಕಾಶ ನೀಡಬೇಕು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಬಸ್‍ಗಳ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘದ ಗೌರವಾಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಹೆಚ್.ಎನ್.ರಾಜಶೇಖರ್, ಸದಸ್ಯ ಪ್ರಕಾಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.