ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಯತ್ನ: ವ್ಯಕ್ತಿ ಬಂಧನ 47 ಲೀಟರ್ ಜಂಬೂ ಸಿಲಿಂಡರ್ ವಶ
ಮೈಸೂರು

ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಯತ್ನ: ವ್ಯಕ್ತಿ ಬಂಧನ 47 ಲೀಟರ್ ಜಂಬೂ ಸಿಲಿಂಡರ್ ವಶ

May 5, 2021

ಮೈಸೂರು,ಮೇ4(ಎಸ್‍ಬಿಡಿ)-ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿ ತರ ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಕಾಳಸಂತೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕು, ಎಸ್.ಹೊಸಕೋಟೆ ಗ್ರಾಮದ ಮಧುಕುಮಾರ್(37) ಬಂಧಿತ ಆರೋಪಿ. ಈತ ಮಾರಾಟ ಮಾಡಲು ಇಟ್ಟುಕೊಂಡಿದ್ದ 47 ಲೀ. ಸಾಮಥ್ರ್ಯದ ಜಂಬೂ ಸಿಲಿಂಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಸರಕು ಸಾಗಣೆ ವಾಹನ ಹೊಂದಿರುವ ಮಧುಕುಮಾರ್, ಮೈಸೂರಿನಲ್ಲಿರುವ ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಯಿಂದ ಕಡಕೊಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ. ಆದರೆ ಈತ ಆಸ್ಪತ್ರೆ ಹಾಗೂ ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಯವರ ಕಣ್ಣಿಗೆ ಮಣ್ಣೆರಚಿ ಕಾಳಸಂತೆಯಲ್ಲಿ ಸಿಲಿಂಡರ್ ಮಾರುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಸೋಮವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಜೆ.ಪಿ.ನಗರದ ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ಹಾಗೂ ರಿಂಗ್‍ರಸ್ತೆ ಜಂಕ್ಷನ್‍ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಆಕ್ಸಿಜನ್ ಜಂಬೂ ಸಿಲಿಂಡರ್ ಅನ್ನು ಯಾವುದೇ ದಾಖಲಾತಿಗಳಿಲ್ಲದೆ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುವಾಗ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ 2ನೇ ಅಲೆ ತಲ್ಲಣ ಸೃಷ್ಟಿಸಿದ್ದು, ಆಕ್ಸಿಜನ್ ಸಿಲಿಂಡರ್‍ಗೆ ಪರಿತಪಿಸು ವಂತಾಗಿದೆ. ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಒಂದೊಂದು ಸಿಲಿಂಡರ್ ವ್ಯವಸ್ಥೆಗೂ ಅಧಿಕಾರಿಗಳು ಹರಸಾಹಸ ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಹಾಗೂ ರೀಫಿಲ್ಲಿಂಗ್ ಕಂಪನಿಗಳು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುತ್ತಿವೆ. ವಾಣಿಜ್ಯ ಉದ್ದೇ ಶಕ್ಕೆ ಸಿಲಿಂಡರ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯವರು ಮೌಖಿಕವಾಗಿ ಆರ್ಡರ್ ನೀಡಿದರೂ ಸಿಲಿಂಡರ್ ಒದಗಿಸಲಾಗುತ್ತಿದೆ. ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು ಒಂದು, ಎರಡು ಸಿಲಿಂಡರ್‍ಗಳನ್ನು ಹೆಚ್ಚುವರಿಯಾಗಿ ಪಡೆದು, ಸಾವಿರಾರು ರೂ.ಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Translate »