ಕೌಟುಂಬಿಕ ಕಲಹ; ಪತ್ನಿ ಕೊಲೆ, ಆರೋಪಿ ಪತಿಗಾಗಿ ಶೋಧ
ಮೈಸೂರು

ಕೌಟುಂಬಿಕ ಕಲಹ; ಪತ್ನಿ ಕೊಲೆ, ಆರೋಪಿ ಪತಿಗಾಗಿ ಶೋಧ

May 5, 2021

ಮೈಸೂರು, ಮೇ4(ಎಂಕೆ)-ಮೈಸೂರಿನ ಜಯನಗರದಲ್ಲಿ ಸೋಮವಾರ ರಾತ್ರಿ ಕೌಟುಂಬಿಕ ಕಲಹದಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪತಿ ಆರೋಪಿ ಯಾಗಿದ್ದಾನೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಮಾದಪ್ಪ ಎಂಬುವರ ಮಗಳು ನಳಿನಿ (32) ಕೊಲೆಯಾದ ದುರ್ದೈವಿ. ಮೃತಳ ಪತಿ ರಾಜೇಶ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕೌಟುಂಬಿಕ ಕಲಹದಿಂದ ಮನೆಯಲ್ಲಿ ಸೋಮವಾರ ರಾತ್ರಿ ರಾಜೇಶ್ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ನಡೆದಿದೆ ಎಂದು ಅಶೋಕಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ. 13 ವರ್ಷಗಳ ಹಿಂದೆ ಮೈಸೂರಿನ ನಂಜುಮಳಿಗೆ ನಿವಾಸಿ ಲಿಂಗಯ್ಯ ಹಾಗೂ ಪುಷ್ಪಲತಾ ಅವರ ಮಗ ರಾಜೇಶ್ ಜೊತೆಗೆ ನಳಿನಿ ವಿವಾಹವಾಗಿತ್ತು. ರಾಜೇಶ್ ಸ್ಕೂಟರ್ ಮೆಕ್ಯಾನಿಕ್ ಆಗಿದ್ದರೆ, ನಳಿನಿ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ದಂಪತಿಗಳಿಗೆ 10 ವರ್ಷದ ಓರ್ವ ಪುತ್ರ ಮತ್ತು 11 ವರ್ಷದ ಓರ್ವ ಪುತ್ರಿ ಇದ್ದು, ಜಯನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.
ಇಬ್ಬರ ನಡುವೆ ಆಗಾಗ ಜಗಳವಾಗುತ್ತಿದ್ದು, ಈ ಹಿಂದೆಯೇ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಸೋಮವಾರ ರಾತ್ರಿ 9.30ಕ್ಕೆ ಕರೆ ಮಾಡಿ ಮಾತನಾಡಿ ದ್ದರು. ಮಂಗಳವಾರ ಬೆಳಗ್ಗೆ ಮಗಳಿಗೆ ಕರೆ ಮಾಡಿದಾಗ ಸ್ವೀಚ್ ಆಫ್ ಬಂದಿದ್ದು, ಗಾಬರಿಯಿಂದ ಬಂದು ನೋಡಿದಾಗ ಮಂಚದ ಮೇಲೆ ಮಗಳ ದೇಹ ರಕ್ತಸಿಕ್ತವಾಗಿತ್ತು. ಶವದ ಪಕ್ಕದಲ್ಲಿಯೇ ಮಚ್ಚು ಬಿದ್ದಿದ್ದು, ಅಳಿಯ ರಾಜೇಶ್ ಮಚ್ಚಿನಿಂದ ನನ್ನ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ನಳಿನಿ ತಂದೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »