ಜಂಬೂಪಡೆ ಮಾವುತ-ಕಾವಾಡಿಗಳಿಗೆ `ಅರಮನೆಯಿಂದ ಗೌರವ ಧನ’
ಮೈಸೂರು

ಜಂಬೂಪಡೆ ಮಾವುತ-ಕಾವಾಡಿಗಳಿಗೆ `ಅರಮನೆಯಿಂದ ಗೌರವ ಧನ’

October 28, 2020
  • 25 ಮಂದಿಗೆ ತಲಾ 10 ಸಾವಿರ ರೂ. ಗೌರವಧನ ವಿತರಿಸಿ ಶುಭ ಕೋರಿದ ಎಸ್‍ಟಿಎಸ್
  • ಜಂಬೂಸವಾರಿ ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ನೀಡಿ ನಮನ ಸಲ್ಲಿಸಿದ ಸಚಿವರು

ಮೈಸೂರು,ಅ.27(ಎಂಟಿವೈ)-ಜಂಬೂಸವಾರಿ ಮೆರ ವಣಿಗೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಅಭಿಮನ್ಯು ನೇತೃತ್ವದ ಗಜಪಡೆಯ ಮಾವುತ, ಕಾವಾಡಿ ಹಾಗೂ ವಿಶೇಷ ಮಾವುತರಿಗೆ ಸಂಪ್ರದಾಯದಂತೆ ಅರಮನೆ ಆಡಳಿತ ಮಂಡಳಿಯಿಂದ ತಲಾ 10 ಸಾವಿರ ರೂ. ಗೌರವಧನ ವಿತರಿಸಲಾಯಿತು.

ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 5 ಆನೆಗಳ ಜತೆ ಆಗಮಿಸಿದ್ದ 10 ಮಂದಿ ಮಾವುತ-ಕಾವಾಡಿ ಗಳು, 6 ಮಂದಿ ವಿಶೇಷ ಮಾವುತರು, ನಾಲ್ವರು ಅಡುಗೆ ಸಿಬ್ಬಂದಿ, ಮೂವರು ಆರೋಗ್ಯ ಸಿಬ್ಬಂದಿ, ಇಬ್ಬರು ಚಾಲಕರು ಸೇರಿದಂತೆ ಒಟ್ಟು 25 ಮಂದಿಗೆ ತಲಾ 10 ಸಾವಿರ ರೂ. ಗೌರವ ಧನವನ್ನು ಅರಮನೆ ಆವ ರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿತರಿಸಿದರು. ಅದಕ್ಕೂ ಮುನ್ನ ಆನೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ನೀಡಿ ನಮಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ನಿರ್ಧರಿಸಿದ್ದರಿಂದ ಈ ಬಾರಿ 5 ಆನೆಗಳನ್ನಷ್ಟೇ ಕರೆತರ ಲಾಗಿತ್ತು. ಪ್ರತಿವರ್ಷದ ದಸರಾಗೆ ಒಟ್ಟು 12 ಆನೆಗಳು ಬರುತ್ತಿದ್ದವು. ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ಮೆರವಣಿಗೆಯಲ್ಲಿ ಸಾಗಿದ. ಜಂಬೂಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಮಾವುತರು-ಕಾವಾಡಿಗರಿಗೆ ಗೌರವಧನ ವಿತರಿಸಲಾಗಿದೆ. ಕಳೆದ ವರ್ಷ ತಲಾ 7500 ರೂ. ನೀಡಲಾಗಿತ್ತು. ಈ ಬಾರಿ ತಲಾ 10 ಸಾವಿರ ರೂ. ನೀಡಲಾಗಿದೆ ಎಂದರು. ಈ ಸಂದರ್ಭ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್, ಗಜಪಡೆ ವೈದ್ಯ ಡಾ.ನಾಗರಾಜ್ ಇತರರು ಉಪಸ್ಥಿತರಿದ್ದರು.

 

 

 

Translate »