`ನನಗೇ ಧೈರ್ಯ ತುಂಬಿದ ಅಭಿಮನ್ಯು’
ಮೈಸೂರು

`ನನಗೇ ಧೈರ್ಯ ತುಂಬಿದ ಅಭಿಮನ್ಯು’

October 28, 2020

ಮೊದಲ ಅನುಭವ ಹಂಚಿಕೊಂಡ ಮಾವುತ ವಸಂತ್
ಮೈಸೂರು: ಅಂಬಾರಿ ಆನೆ ನಡೆಸಿದ ಅನುಭವ ನನಗಂತೂ ಇರಲಿಲ್ಲ. ಅಭಿ ಮನ್ಯುವೇ ಧೈರ್ಯ ತುಂಬಿದ, ನನ್ನ ಕಾರ್ಯ ಯಶಸ್ವಿಯಾಗುವಂತೆ ಮಾಡಿದ…

ಮೊದಲ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯುವನ್ನು ಯಶಸ್ವಿಯಾಗಿ ಮುನ್ನ ಡೆಸಿದ ಮಾವುತ ವಸಂತ್ `ಮೈಸೂರು ಮಿತ್ರ’ನೊಂದಿಗೆ ತಮ್ಮ ಅನುಭವ ಹಂಚಿ ಕೊಂಡರು. `ಅಂಬಾರಿ ಕಟ್ಟಿದ ಬಳಿಕ ಮೊದಲಿಗೆ ಕೆಲ ನಿಮಿಷ ಭಯ ಕಾಡುತ್ತಿತ್ತು. ಹಿಂದೆ ಅಂಬಾರಿ ಹೊತ್ತ ಆನೆಗಳನ್ನು ಮಾವುತರಿಗೆ ಅವರ ತಂದೆಯ ಅನುಭವ ನೆರವಾಗಿತ್ತು. ಹಾಗಾಗಿ ಅಂಬಾರಿ ಆನೆ ಯನ್ನು ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಮುನ್ನಡೆಸಿದ್ದರು. 1977ರಲ್ಲಿ ಸೆರೆ ಹಿಡಿದ ದಿನದಿಂದ ಅಭಿಮನ್ಯುವಿಗೆ ನನ್ನ ತಂದೆ ಸಣ್ಣಪ್ಪ ಮಾವುತ. ಅವರ ನಿವೃತ್ತಿ ನಂತರ ನಾನು ಬಂದಿದ್ದೇನೆ. ಅಂಬಾರಿ ಹೊತ್ತ ಆನೆಯನ್ನು ಮುನ್ನಡೆಸಿದ್ದು ಇದೇ ಮೊದಲು. ಹಾಗಾಗಿ ಭಯವಿತ್ತು. ಆದರೆ ಡಿಸಿಎಫ್ ಅಲೆಗ್ಸಾಂಡರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು ಮತ್ತಿತರ ಹಿರಿಯ ಅಧಿಕಾರಿಗಳು ನನಗೆ ಧೈರ್ಯ ತುಂಬಿದರು. ಪುಂಡಾನೆ ಸೆರೆ, ಹುಲಿಸೆರೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಅನುಭವ ನಿನಗಿದೆ. ಭಯ ಪಡಬೇಡ ಎಂದು ಉತ್ತೇಜಿಸಿದರು. ಅದು ಆತ್ಮ ವಿಶ್ವಾಸ ಮೂಡಿಸಿತು’ ಎಂದರು.

ತಾನೇ ಕರೆದೊಯ್ದ: ಅಂಬಾರಿ ಕಟ್ಟುವ ವೇಳೆ ಅಭಿಮನ್ಯು ತಾನಾಗಿಯೇ ಸಹಕರಿಸಿದ. ನಾನು ಕಮಾಂಡ್ ಮಾಡುವ ಮುನ್ನವೇ ಅರ್ಥ ಮಾಡಿಕೊಳ್ಳುತ್ತಿದ್ದ. ಅಂಬಾರಿ ಕಟ್ಟುವ ಸಂದರ್ಭದಲ್ಲಿಯೂ ಸ್ವಲ್ಪವೂ ಅಲು ಗಾಡಲಿಲ್ಲ. ಸೆಲ್ಯೂಟ್ 5 ನಿಮಿಷ ಹೊಡೆ ಯುವಂತೆ ಸೂಚಿಸಿದರೆ 10 ನಿಮಿಷ ಗಳವರೆಗು ಸೊಂಡಿಲೆತ್ತಿ ನಮಸ್ಕಾರ ಮಾಡುತ್ತಿದ್ದ. ಒಂದು ಲೆಕ್ಕದಲ್ಲಿ ನನಗೆ ಅಭಿಮನ್ಯುವೇ ಧೈರ್ಯ ತುಂಬಿದ. ಅಂಬಾರಿಯನ್ನು ಸುರಕ್ಷಿತವಾಗಿ ಕೊಂಡೊ ಯ್ಯಲು ಆಶೀರ್ವದಿಸು ತಾಯಿ ಎಂದು ಹರಕೆ ಹೊತ್ತಿದ್ದೆ. ಊಟ ಮಾಡದೆ ಭಕ್ತಿ ಪ್ರದರ್ಶಿಸಿದ್ದೆ. ತಾಯಿ ಚಾಮುಂಡೇಶ್ವರಿಯ ದಯೆಯಿಂದ ಜಂಬೂಸವಾರಿಯಲ್ಲಿ ಯಶಸ್ವಿಯಾದೆ ಎಂದು ವಸಂತ್ ಸಂತಸ ವ್ಯಕ್ತಪಡಿಸಿದರು.

ನಿಯಂತ್ರಣವೂ ಇತ್ತು: ಅಂಬಾರಿ ಹೊತ್ತ ಅಭಿಮನ್ಯುವನ್ನು ನಿಧಾನವಾಗಿ ಮುನ್ನಡೆಸಬೇಕಿತ್ತು. ಅಂಬಾರಿ ಬೆನ್ನ ಮೇಲೆ ಕಟ್ಟಿದ ಮೇಲೆ ಅಭಿಮನ್ಯು ತನ್ನಷ್ಟಕ್ಕೆ ನಿಧಾನವಾಗಿ ಸಾಗಿದ. ನನ್ನ ಕೆಲಸ ಹಗುರ ಮಾಡಿದ.

ದಸರಾದಲ್ಲಿ ಈವರೆಗೂ ಅಂಬಾರಿ ಹೊರದೇ ಇರಬಹುದು, ಆದರೆ, ಅಭಿ ಮನ್ಯುವಿಗೆ ಕೆ.ಆರ್.ನಗರದ ದೇವರ ಮೆರವಣಿಗೆ, ಶ್ರೀರಂಗಪಟ್ಟಣದ ದಸರಾ, ಹಂಪಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಅನುಭವವಿದೆ. ಅಂಬಾರಿ ಕಟ್ಟಿ ದ್ದರೂ, ನಾನು ಕೆಳಗೆ ನಿಂತೇ ಕಮಾಂಡ್ ಮಾಡಿಕೊಂಡು ಕರೆದೊಯ್ಯಲು ಪ್ರಯತ್ನಿ ಸಿದರೂ ಅಭಿಮನ್ಯು ಸುಮ್ಮನೆ ಬರುತ್ತಿತ್ತು. ಅವನ ಮೇಲೆ ಅಷ್ಟೊಂದು ಅಚಲ ನಂಬಿಕೆ ನನಗಿದೆ. ದೇವರ ದಯೆ ಯಿಂದ ದಸರಾ ಸುರಕ್ಷಿತವಾಗಿ, ಯಶಸ್ವಿಯಾಗಿ ಪೂರ್ಣ ಗೊಂಡಿದೆ. ಅವಕಾಶ ನೀಡಿದ ದಸರಾ ಸಮಿತಿ, ನನಗೆ ಶುಭಕೋರಿದ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುವೆ ಎಂದು ಮಾವುತ ವಸಂತ್ ಮಾತು ಕೊನೆಗೊಳಿಸಿದರು.

 

Translate »