ಪೂರ್ವಾಭಿಮುಖ ಅಂಬಾರಿ ಕಟ್ಟಿಸಿಕೊಂಡು ಸಂಪ್ರದಾಯ ಮತ್ತೆ ಬದಲಿಸಿದ ಅಭಿಮನ್ಯು
ಮೈಸೂರು

ಪೂರ್ವಾಭಿಮುಖ ಅಂಬಾರಿ ಕಟ್ಟಿಸಿಕೊಂಡು ಸಂಪ್ರದಾಯ ಮತ್ತೆ ಬದಲಿಸಿದ ಅಭಿಮನ್ಯು

October 28, 2020

34 ವರ್ಷಗಳಿಂದ ಪಶ್ಚಿಮ ದಿಕ್ಕಿಗೆ ಆನೆ ನಿಲ್ಲಿಸಿ ಅಂಬಾರಿ ಕಟ್ಟುವ ಕ್ರಮ ಈ ಬಾರಿ ಬದಲಾಯಿತು!
ಮೈಸೂರು, ಅ.27-ಪುಂಡಾನೆ ಸೆರೆ, ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿಗಳ ಸೆರೆ ಕಾರ್ಯಾ ಚರಣೆಯಲ್ಲಿ ಧೈರ್ಯದಿಂದ ಮುನ್ನುಗ್ಗಿ ಸೈ ಎನಿಸಿಕೊಂಡಿದ್ದ, `ಕೂಂಬಿಂಗ್ ಸ್ಪೆಷಲಿಸ್ಟ್’ `ಅಭಿಮನ್ಯು’, ಕಡೆಗೂ ಅಂಬಾರಿ ಆನೆ ಎನಿಸಿಕೊಂಡ!

ಅಭಿಮನ್ಯು, ಇದೇ ಮೊದಲ ಬಾರಿಗೆ 750 ಕೆಜಿ ಚಿನ್ನದ ಅಂಬಾರಿಯನ್ನು ಸಮರ್ಥವಾಗಿ ಹೊತ್ತು ಸಾಗುವ ಮೂಲಕ 34 ವರ್ಷಗಳ ಹಿಂದೆ ಅನಿ ವಾರ್ಯವಾಗಿ ಮಾರ್ಪಾಡಾಗಿದ್ದ ಸಂಪ್ರ ದಾಯವೊಂದನ್ನು ಮತ್ತೆ ಸರಿಪಡಿಸಿದ್ದಾನೆ.

ಕರ್ನಾಟಕ, ಮಹಾರಾಷ್ಟ್ರ, ಛತ್ತೀಸ್ ಗಡ್, ಕೇರಳ, ಆಂಧ್ರಪ್ರದೇಶ, ತಮಿಳು ನಾಡು ಮೊದಲಾದ ರಾಜ್ಯಗಳಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂ ಡಿರುವ 53 ವರ್ಷಗಳ ಅಭಿಮನ್ಯು ಈವರೆಗೂ 150ಕ್ಕೂ ಹೆಚ್ಚು ಪುಂಡಾನೆ, 15 ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾನೆ. ಅಭಿಮನ್ಯು ಸರ್ಕಾರಿ ನಿಯಮಾನುಸಾರ ಇನ್ನೂ 7 ವರ್ಷ (2027ರವರೆಗೂ) ಅಂಬಾರಿ ಹೊರಬಲ್ಲ.

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ 60 ವರ್ಷ ದಾಟಿದ ಹಿನ್ನೆಲೆ ಯಲ್ಲಿ ನಿವೃತ್ತಿಯಾದ. ಪರಿಣಾಮ 22 ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅನುಭವ ಹೊಂದಿದ್ದ ಅಭಿ ಮನ್ಯುವಿಗೆ ಈ ವರ್ಷದಿಂದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಜವಾಬ್ದಾರಿ ದೊರೆತಿತ್ತು. ಮೊದಲ ಪ್ರಯತ್ನ ದಲ್ಲಿಯೇ ಅತ್ಯಂತ ರಾಜಗಾಂಭಿರ್ಯದ ನಡೆ ಪ್ರದರ್ಶಿಸಿ ಎಲ್ಲರ ಪ್ರೀತಿಗೆ ಪಾತ್ರನಾದ. ಅಷ್ಟೆ ಅಲ್ಲದೇ, ಅಭಿಮನ್ಯು ಮೂರೂವರೆ ದಶಕಗಳ ಹಿಂದೆ ಬದಲಾಗಿದ್ದ ಸಂಪ್ರ ದಾಯವೊಂದನ್ನು ಈಗ ಸರಿಪಡಿಸಿ, ಶುಭ ಸೂಚಕ ಎನಿಸಿದ್ದಾನೆ.

ಪೂರ್ವಾಭಿಮುಖ: ಹಿಂದೂ ಸಂಪ್ರ ದಾಯದಲ್ಲಿ ಧಾರ್ಮಿಕ ಆಚರಣೆಗಳು, ಶುಭಕಾರ್ಯಗಳು ಪೂರ್ವಾಭಿ ಮುಖವಾಗಿಯೇ ನಡೆಯುವುದು ಸಂಪ್ರ ದಾಯ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದಲ್ಲಿಯೂ ಆನೆ ಮೇಲೆ ಅಂಬಾರಿಯನ್ನು ಮೊದಲೆಲ್ಲಾ ಪೂರ್ವಾ ಭಿಮುಖವಾಗಿಯೇ ಆನೆ ನಿಲ್ಲಿಸಿ ಕಟ್ಟುವ ಸಂಪ್ರದಾಯವಿತ್ತು. 34 ವರ್ಷಗಳÀ ಹಿಂದೆ ಜಂಬೂಸವಾರಿ ಅರಮನೆ ಆವರಣದಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಜನರನ್ನು ಕಂಡು ಅಂಬಾರಿ ಆನೆ ಗಾಬರಿಗೊಂಡು ಓಡಿಹೋಗಿತ್ತಂತೆ. ಬಳಿಕ ಸುರಕ್ಷತೆಯ ದೃಷ್ಟಿಯಿಂದ ಅಂಬಾರಿ ಕಟ್ಟುವುದನ್ನು ಪಶ್ಚಿಮ ದಿಕ್ಕಿಗೆ ಬದಲಿಸಲಾಗಿತ್ತು. ಪಶ್ಚಿಮ ದಿಕ್ಕಿನಲ್ಲಿ ಎತ್ತರದ ಗೋಡೆ ಇರುವು ದರಿಂದ ಆನೆಗೆ ಜನ ಕಾಣುವುದಿಲ್ಲ. ಅಲ್ಲದೆ ಓಡಿ ಹೋಗಲೂ ಸ್ಥಳ ಇರುವುದಿಲ್ಲ ಎಂಬುದೇ ಈ ನಿರ್ಧಾರಕ್ಕೆ ಕಾರಣ.

ಧೈರ್ಯ ಮಾಡಿರಲಿಲ್ಲ: 3 ದಶಕದಿಂದ ಕ್ರಮಬದ್ಧವಾಗಿ ದ್ರೋಣ, ಬಲರಾಮ, ಅರ್ಜುನ ಸತತ ಅಂಬಾರಿ ಹೊತ್ತು ಸಾಗಿ ಸೈ ಎನಿಸಿಕೊಂಡಿವೆ. ಆದರೆ ಈ ಆನೆ ಗಳಿಗೆ ಅಂಬಾರಿ ಕಟ್ಟುವಾಗ ಪೂರ್ವಾ ಭಿಮುಖವಾಗಿ ನಿಲ್ಲಿಸುವ ಧೈರ್ಯ ಮಾಡಿರಲಿಲ್ಲ. ಗೋಡೆಗೆ ತಾಗಿಕೊಂಡಂತೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ನಿಲ್ಲಿಸಿಯೇ ಅಂಬಾರಿ ಕಟ್ಟಲಾಗಿತ್ತು. ಕೆಲ ವರ್ಷಗಳಿಂದ ಜನಜಂಗುಳಿ ಕಾಣದಂತೆ ಅಂಬಾರಿ ಕಟ್ಟುವ ಸ್ಥಳದ ಸುತ್ತ ಪೆಂಡಾಲ್ ಹಾಕಲಾಗುತ್ತಿತ್ತು. ಈ ಬಾರಿ ಅಂಬಾರಿ ಕಟ್ಟುವ ಸ್ಥಳದಲ್ಲಿ ಪೆಂಡಾಲ್ ಹಾಕಿರಲಿಲ್ಲ. ಆದರೂ ಅಭಿಮನ್ಯು ಕಿಂಚಿತ್ತೂ ಆತಂಕಗೊಳ್ಳದೇ ಅಂಬಾರಿಗೆ ಬೆನ್ನೊಡ್ಡಿ ತನ್ನ ಜವಾಬ್ದಾರಿ ನಿಭಾಯಿಸಿದ.

ಡೇರ್ ಅಂಡ್ ಡೆವಿಲ್: ಮಹಾಭಾರತದಲ್ಲಿ ಚಕ್ರವ್ಯೂಹ ಭೇದಿಸಿದ್ದ ಅಭಿಮನ್ಯುವಿನ ಪರಾಕ್ರಮದಂತೆಯೇ ದಸರಾ ಆನೆ ಅಭಿಮನ್ಯುವೂ ವಿಶಿಷ್ಟ ಗುಣ ಹೊಂದಿದ್ದಾನೆ. ತನಗಿಂತ ದೈತ್ಯಾಕಾರದ ಕಾಡಾನೆಯನ್ನೇ ಹಿಮ್ಮೆಟ್ಟಿಸುವ ಪರಾಕ್ರಮಶಾಲಿಯೂ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಎಲ್ಲಿ ಬೇಕಾದರೂ, ಯಾವ ದಿಕ್ಕಿಗೆ ಬೇಕಾದರೂ ನಿಲ್ಲಿಸಿಕೊಂಡು ಅಂಬಾರಿ ಕಟ್ಟಿದರೂ ಸ್ವಲ್ವವೂ ವಿಚಲಿತನಾಗುವುದಿಲ್ಲ. ಅಭಿಮನ್ಯುವಿನ ಈ ಗುಣವೇ 34 ವರ್ಷಗಳ ಹಿಂದೆ ಮಾರ್ಪಾಡು ಮಾಡಿದ್ದ ಸಂಪ್ರದಾಯವನ್ನು ಮತ್ತೆ ಸರಿದಿಕ್ಕಿನತ್ತ ತರಲು ಕಾರಣವಾಗಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »