ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಳಗಿದ  ಪಂಚಮಸಾಲಿ ‘2ಎ’ ಮೀಸಲಾತಿ ಕೂಗು
ಮೈಸೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಳಗಿದ ಪಂಚಮಸಾಲಿ ‘2ಎ’ ಮೀಸಲಾತಿ ಕೂಗು

August 27, 2021

ಚಾಮರಾಜನಗರ, ಆ.೨೬(ಎಸ್‌ಎಸ್/ಸೋಮು)- ‘೨ಎ ಮೀಸಲಾತಿ ಕೊಡಿರಿ-ಹೇಳಿದಂತೆ ನಡೆಯಿರಿ’ ಎಂಬ ಘೋಷವಾಕ್ಯದೊಂದಿಗೆ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಪ್ರತಿಜ್ಞಾ ಪಂಚಾಯತ್’ ಅಭಿಯಾನಕ್ಕೆ ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಅಭಿಯಾನದಡಿ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಜಾಗೃತಿ ಸಭೆಗಳು ನಡೆಯಲಿದ್ದು, ಅ. ೧ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಸಮಾವೇಶದ ಮೂಲಕ ಅಭಿಯಾನಕ್ಕೆ ತೆರೆ ಬೀಳಲಿದೆ.

‘೨ಎ’ ಮೀಸಲಾತಿ ನೀಡುವ ಪಕ್ಷಕ್ಕೆ ಬೆಂಬಲ: ಅಭಿಯಾನಕ್ಕೆ ಚಾಲನೆ ನೀಡಿದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಗೌಡ ಲಿಂಗಾಯತ, ಪಂಚಮಸಾಲಿ ಲಿಂಗಾಯತ, ದೀಕ್ಷಾ ಲಿಂಗಾಯತ ಮತ್ತು ಮಲೆ ಗೌಡ ಲಿಂಗಾಯಿತರಿಗೆ ೨ಎ ಮೀಸಲಾತಿ ನೀಡಲು ಯಾವ ವ್ಯಕ್ತಿ ಮತ್ತು ಯಾವ ಪಕ್ಷ ಭರವಸೆ ನೀಡುತ್ತಾರೋ ಅಂತಹ ವ್ಯಕ್ತಿ ಮತ್ತು ಪಕ್ಷಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ವೇಳೆ ಸೆ. ೧೫ರೊಳಗೆ ೨ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಪ್ರಸ್ತುತ ಆ ಗಡುವು ಮುಗಿಯುತ್ತಿದ್ದು, ರಾಜ್ಯ ಸರ್ಕಾರವನ್ನು ಎಚ್ಚರಿಸಲು ಈ ಅಭಿಯಾನ ಆರಂಭಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ನಮ್ಮ ಜನಾಂಗಕ್ಕೆ ೨ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಪಂಚಮಸಾಲಿ ಗೌಡ ಲಿಂಗಾಯತರನ್ನು ಕೂಡಲೇ ೨ಎ ಮೀಸಲಾತಿಗೆ ಸೇರಿಸಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಘಟನೆಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಈ ಬಾರಿ ಮಲೆ ಮಹದೇಶ್ವರಸ್ವಾಮಿ ಬೆಟ್ಟದಿಂದ ಬಸವ ಕಲ್ಯಾಣದ ವರೆಗೆ ನಾವು ಜನರನ್ನು ಸಂಘಟಿಸುತ್ತೇವೆ. ಹೋರಾಟಕ್ಕೆ ಮತ್ತಷ್ಟು ಬಲ ತುಂಬುತ್ತೇವೆ ಎಂದರು. ನಮಗೆ ಅಧಿಕಾರ ಶಾಶ್ವತವಲ್ಲ. ನಮ್ಮ ಜನಾಂಗಕ್ಕೆ ಅಧಿಕಾರ ಬರುತ್ತೆ, ಹೋಗುತ್ತದೆ. ಆದರೆ, ಅಧಿಕಾರಕ್ಕಾಗಿ ಅಂಟಿಕೊAಡು ನಮ್ಮ ಜನರಿಗೆ ದ್ರೋಹ ಮಾಡಲು ನಾವು ಬಿಡುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ನಮ್ಮ ಮತಗಳು ಬೇಕಿದ್ದಲ್ಲಿ, ಕೂಡಲೇ ನಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ವಿಜಯಾನಂದ ಕಾಶಪ್ಪ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಕೊಟ್ಟಿರುವ ಮಾತನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಗತಗೊಳಿಸಬೇಕು. ನಮ್ಮ ಜನಾಂಗಕ್ಕೆ ೨ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಹೊಸ ಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ, ಹರಿಹರ ಕ್ಷೇತ್ರದ ಮಾಜಿ ಶಾಸಕ ಶಿವಶಂಕರ್, ಮಾಜಿ ಸಂಸದ ದ್ಯಾವನೂರು ಮಂಜುನಾಥ್ ಕುನ್ನೂರ್, ಪಂಚಮಸಾಲಿ ರಾಜ್ಯಾಧ್ಯಕ್ಷ ದಾವಣಗೆರೆಯ ಅಜಯ್‌ಕುಮಾರ್, ಮಾದಾಪುರ ಗೌಡ ಲಿಂಗಾಯತ ಪಂಚಮಸಾಲಿ ಸಮನ್ವಯ ಸಮಿತಿಯ ಸಂಚಾಲಕ ಮಲ್ಲೇಶ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಕಾರ್ಯದರ್ಶಿ ಕೇಬಲ್ ಮಹೇಶ್, ಯುವ ಘಟಕದ ಅಧ್ಯಕ್ಷ ಶಂಭು ವಿರೂಪಾಕ್ಷಮ್ಮ, ಮುಖಂಡರಾದ ಗುಂಡ್ಲುಪೇಟೆ ನಂಜಪ್ಪ, ಶಿವಪುರದ ಸುರೇಶ್, ರಾಜೇಗೌಡ, ಪಟೇಲ್ ಕೊತ್ತಲವಾಡಿ ಕುಮಾರ, ಅರಕಲವಾಡಿ ಮಹೇಶ್, ಎ.ಸಿ.ಜಗದೀಶ್ ಹಾಗೂ ನೂರಾರು ಸಂಖ್ಯೆಯ ಗೌಡ ಲಿಂಗಾಯಿತರು, ಉತ್ತರ ಕರ್ನಾಟಕದ ಪಂಚಮ ಶಾಲಿ ಪ್ರಮುಖರು ಭಾಗವಹಿಸಿದ್ದರು.

 

Translate »