ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆ.1ರಿಂದ ಆರಂಭ
ಮೈಸೂರು

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆ.1ರಿಂದ ಆರಂಭ

June 28, 2020

ಮೈಸೂರು, ಜೂ.27(ಎಂಟಿವೈ)- ಕಳೆದ 3 ವರ್ಷ ದಿಂದ ಸ್ಥಗಿತಗೊಂಡು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿ ರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಪಿಎಸ್‍ಎಸ್‍ಕೆ) ಆಧುನಿಕ ತಂತ್ರಜ್ಞಾನ ಬಳಸಿ ಉನ್ನತೀ ಕರಿಸಿ ಕಬ್ಬು ಅರೆಯುವ ಕಾರ್ಯ ಆರಂಭಿಸಲಾಗು ವುದು. ಆ ಮೂಲಕ ಸುತ್ತಲ ಹಳ್ಳಿಗಳ ಕಬ್ಬು ಬೆಳೆಗಾರರಿಗೆ ನೆರವಾಗಲಾಗುವುದು ಎಂದು ನಿರಾಣಿ ಸಮೂಹ ಸಂಸ್ಥೆ ಅಧ್ಯಕ್ಷ, ಶಾಸಕ ಮುರುಗೇಶ್ ಆರ್.ನಿರಾಣಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಆಯೋ ಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಅವರು, ನಿರಾಣಿ ಶುಗರ್ಸ್ ಕಂಪನಿ 405 ಕೋಟಿ ರೂ. ನೀಡಿ ಈ ಕಾರ್ಖಾನೆ ಯನ್ನು 40 ವರ್ಷಗಳವರೆಗೆ ಗುತ್ತಿಗೆ ಪಡೆದಿದೆ. ಸ್ಥಳೀಯ ರೈತರ ಹಿತ ಕಾಪಾಡುವುದೇ ನಮ್ಮ ಕಂಪನಿ ಉದ್ದೇಶ. 3 ವರ್ಷದಿಂದ ಮುಚ್ಚಿರುವ ಈ ಕಾರ್ಖಾನೆಯಲ್ಲಿ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಅವನ್ನೆಲ್ಲಾ ಬದಲಿಸಲು ಎರಡು ವರ್ಷ ಬೇಕಾಗುತ್ತದೆ. ಅಲ್ಲಿವರೆಗೂ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಹಾಗಾಗಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಂಡು ಕಾರ್ಖಾನೆಯನ್ನು ನಮ್ಮ ಸುಪರ್ದಿಗೆ ನೀಡಿದ ತಿಂಗಳೊಳಗೆ ಕಬ್ಬು ಅರೆಯುವ ಪ್ರಕ್ರಿಯೆ ಆರಂ ಭಿಸುವುದಾಗಿ ಶಾಸಕ ನಿರಾಣಿ ತಿಳಿಸಿದರು.

ಕಾರ್ಖಾನೆ ಕಾರ್ಯಾರಂಭದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳ ಅಳವಡಿಕೆಯೂ ನಡೆಯುತ್ತಿರು ತ್ತದೆ. ಒಪ್ಪಂದವಾದ 24 ಗಂಟೆಗಳಲ್ಲಿಯೇ ಕಾರ್ಖಾನೆಯ 130 ಕಾರ್ಮಿಕರು, ಸಿಬ್ಬಂದಿಗೆ 3 ವರ್ಷಗಳ ಬಾಕಿ ವೇತನ ನೀಡಲಾಗುತ್ತದೆ. ಹಿಂದೆ ಇದ್ದ ಕಾರ್ಮಿಕರ ಸೇವೆಯನ್ನೇ ಮುಂದುವರೆಸುತ್ತೇವೆ. ಕೆಲವರು ಸ್ಥಿತಿವಂತರಾಗಿದ್ದು, ಕೆಲಸಕ್ಕೆ ಬರದಿರಲು ನಿರ್ಧರಿಸಿದ್ದಾರೆ. ಅಂತಹವರು ಸೂಚಿಸಿ ದವರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. 3 ವರ್ಷದಿಂದ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಯನ್ನು ಸರ್ಕಾರ ಪಾವತಿಸಲಿದೆ ಎಂದು ವಿವರಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ ಈ ಹಿಂದೆ ಸಕ್ಕರೆ ಉತ್ಪಾದ ನೆಗೆ ಆದ್ಯತೆ ನೀಡಲಾಗುತ್ತಿತ್ತು. ಈಗ ವಿದ್ಯುತ್, ಇಥೆ ನಾಲ್ ಉತ್ಪಾದನೆಗೂ ಆದ್ಯತೆ ನೀಡಿ ಕಾರ್ಖಾನೆ ನಷ್ಟಕ್ಕೆ ತುತ್ತಾಗುವುದನ್ನು ತಡೆಯಬಹುದಾಗಿದೆ. ಕೇವಲ ಸಕ್ಕರೆ ಉತ್ಪಾದನೆ ಮಾಡಿದರೆ ಕಾರ್ಖಾನೆ ನಷ್ಟಕ್ಕೆ ತುತ್ತಾಗು ತ್ತಿದ್ದವು. ಇದೀಗ ನಮ್ಮ ಸಂಸ್ಥೆ ಪಿಎಸ್‍ಎಸ್‍ಕೆಯನ್ನು ಗುತ್ತಿಗೆ ಪಡೆದಿ ರುವುದರಿಂದ ಸಕ್ಕರೆಯೊಂದಿಗೆ ವಿದ್ಯುತ್, ಇಥೆನಾಲ್, ರೆಕ್ಟಿಪೈಡ್ ಸ್ಪಿರಿಟ್, ಸಿಒ2, ಸಿಎನ್‍ಜಿ, ಸ್ಯಾನಿ ಟೈಸರ್, ರಸಗೊಬ್ಬರ ಮೊದಲಾದ ಉಪ ಉತ್ಪನಗಳನ್ನು ಉತ್ಪಾದಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇಥೆನಾಲ್ ಮುಖ್ಯ ಉತ್ಪನ್ನ. 1 ಕೆಜಿ ಇಥೆನಾಲ್‍ಗೆ 60 ರೂ. ಬೆಲೆ. 1 ಕೆಜಿ ಸಕ್ಕರೆಗೆ ವಿದೇಶದಲ್ಲಿ 21 ರೂ. ದೇಶದಲ್ಲಿ 35 ರೂ. ದರವಿದೆ. ಈಗ ಕಾರ್ಖಾನೆಗೆ ಪೂರೈಕೆ ಯಾಗುವ ಕಬ್ಬಿನಲ್ಲಿ ಶೇ.75ರಷ್ಟು ಸಕ್ಕರೆ, ಶೇ.25ರಷ್ಟು ಇಥೆನಾಲ್ ಉತ್ಪಾದಿಸಬಹುದಾಗಿದೆ. ಹೆಚ್ಚಿನ ಬೇಡಿಕೆ ಇರುವ ಇಥೆನಾಲನ್ನು ಕಬ್ಬಿನಿಂದಲೇ ನೇರವಾಗಿ ಉತ್ಪಾ ದಿಸಲು ಕೇಂದ್ರ ಸರ್ಕಾರದ ಅನುಮತಿ ಕೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕರ್ನಾಟಕದ ಯಾವುದೇ ಸಕ್ಕರೆ ಕಾರ್ಖಾನೆ ಪ್ರಯತ್ನಿಸುತ್ತಿಲ್ಲ. ಅದಕ್ಕೇ ಅವು ನಷ್ಟದಲ್ಲಿ ಸಾಗಿವೆ ಎಂದು ಶಾಸಕರು ತಿಳಿಸಿದರು. ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್ ಬಾಬು, ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Translate »