ಮೈಸೂರು, ಜೂ. 27(ಆರ್‍ಕೆ)- ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಅಂಗಡಿಗಳನ್ನು ಸಹ ಇಂದಿ ನಿಂದ ಸಂಪೂರ್ಣ ಬಂದ್ ಮಾಡಲಾಗಿದೆ.
ದೇವರಾಜ ಮೊಹಲ್ಲಾದ ವ್ಯಾಪ್ತಿಯ ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಮನ್ನಾರ್ಸ್ ಮಾರ್ಕೆಟ್, ಶಿವರಾಂಪೇಟೆ, ಸಂತೇಪೇಟೆಯ ಭಾಗದ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಬುಧವಾರ ಆದೇಶಿಸಿದ್ದರು. ತಮಗೆ ಹಣ್ಣು ಮತ್ತು ತರಕಾರಿಗಳನ್ನು ವಿಲೇವಾರಿ ಮಾಡಲು ಒಂದು ದಿನ ಅವಕಾಶ ನೀಡ ಬೇಕೆಂದು ದೇವರಾಜ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಮಾರಾಟಗಾರರು ಕೇಳಿಕೊಂಡಿದ್ದ ಕಾರಣ, ಶುಕ್ರವಾರ(ಜೂ.26) ಮಧ್ಯಾಹ್ನದವರೆಗೆ ಅವಕಾಶ ಮಾಡಿ ಕೊಡಲಾಗಿತ್ತು. ಅದರಂತೆ ಮಾರುಕಟ್ಟೆಯ ಎಲ್ಲಾ ಹಣ್ಣು ಮತ್ತು ತರಕಾರಿ ಅಂಗಡಿ ಗಳನ್ನು ಮುಚ್ಚಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಅಲ್ಲಿನ ಪ್ರದೇಶ ವನ್ನು ಸ್ವಚ್ಛಗೊಳಿಸಿ, ಸೋಂಕು ನಿರೋಧಕ ರಸಾಯನಿಕ ದ್ರಾವಣ ಸಿಂಪಡಣೆ ಮಾಡುತ್ತಿದ್ದಾರೆ. ಕಳೆದ ಗುರುವಾರದಿಂದಲೇ ಆ ಭಾಗದ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಲಾಗಿದ್ದು, ಆದೇಶದ ಪ್ರಕಾರ ಸೋಮವಾರ(ಜೂ.29)ದಿಂದ ದೇವರಾಜ ಮೊಹಲ್ಲಾದಲ್ಲಿ ಮುಚ್ಚಿದ್ದ ಅಂಗಡಿಗಳನ್ನು ತೆರೆಯಬಹುದಾಗಿದ್ದು, ನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಮತ್ತೊಂದು ಆದೇಶ ಹೊರಡಿಸಲಿದ್ದಾರೆ.