ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ: ಎಳನೀರು, ತಂಪು ಪಾನೀಯ ಮೊರೆ
ಮೈಸೂರು

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ: ಎಳನೀರು, ತಂಪು ಪಾನೀಯ ಮೊರೆ

March 29, 2021

ಮೈಸೂರು,ಮಾ.28(ಎಂಟಿವೈ) ವಾಡಿಕೆ ಮಳೆಯ ಕೊರತೆ ಹಾಗೂ ಫೆಬ್ರವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ ರಣರೌದ್ರ ಬಿಸಿಲು ಜನ-ಜಾನುವಾರುಗಳನ್ನು ತತ್ತರಿಸುವಂತೆ ಮಾಡಿದೆ. ಈ ಬಿಸಿಲಿನ ಬೇಗೆಯಿಂದ ಜನರು ಪಾರಾಗಲು ತಂಪು ಪಾನೀಯ ಹಾಗೂ ಎಳ ನೀರಿನ ಮೊರೆ ಹೋಗುತ್ತಿದ್ದಾರೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿನ ಝಳ ಜನರನ್ನು ಅಕ್ಷರಶಃ ಹೈರಾಣಾಗಿಸುತ್ತಿದೆ. ಮಕ್ಕಳು, ವಯೋವೃದ್ಧರನ್ನು ಹಿಂಡಿ ಹಿಪ್ಪೆಯಾಗಿಸುತ್ತಿದೆ. ಪ್ರಸಕ್ತ ಫೆಬ್ರವರಿ ತಿಂಗಳಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗಿತ್ತಾದರೂ ಮೂರು ದಿನ ಸುರಿದ ಅಕಾಲಿಕ ಆಲಿಕಲ್ಲು ಮಳೆ ಸ್ವಲ್ಪಮಟ್ಟಿಗೆ ಇಳೆಯನ್ನು ತಂಪಾಗಿಸಿತ್ತು. ಆದರೂ ಮಾರ್ಚ್ ಆರಂಭದಿಂದಲೇ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಾಯ್ದುಕೊಂಡಿದ್ದ ಮೈಸೂರು ಜಿಲ್ಲೆಯ ವಾತಾವರಣ ಇದೀಗ 36 ಡಿಗ್ರಿಗೆ ಬಂದು ತಲುಪಿದೆ. ಮುನ್ಸೂಚನೆ ಯಂತೆ ತಿಂಗಳಾಂತ್ಯದವರೆಗೂ 36 ಅಥವಾ 37 ಡಿಗ್ರಿ ಉಷ್ಣಾಂಶ ಇರುವುದು ಖಚಿತವಾಗಿದ್ದು, ಏಪ್ರಿಲ್ ತಿಂಗಳಲ್ಲಿ 40ರ ಗಡಿ ದಾಟಿ ದರೂ ಅಚ್ಚರಿಪಡಬೇಕಾಗಿಲ್ಲ. ಕಳೆದ 3-4 ವರ್ಷಗಳಿಂದಲೂ ಮೈಸೂರು ಜಿಲ್ಲೆಯಲ್ಲಿ ಬಿರು ಬಿಸಿಲು ಜನರನ್ನು ತತ್ತರಿಸುವಂತೆ ಮಾಡಿದ್ದು, ಈ ಬಾರಿಯೂ ಬಿಸಿಲು ಕಾಡುತ್ತಿದೆ. ಪ್ರಸ್ತುತ 36 ಡಿಗ್ರಿ ಉಷ್ಣಾಂಶ ದಾಖಲಾಗಿರುವುದರಿಂದ ಏಪ್ರಿಲ್ ತಿಂಗಳಲ್ಲಿ ಮತ್ತಷ್ಟು ತಾಪಮಾನ ಹೆಚ್ಚಾಗುವುದು ಕಟ್ಟಿಟ್ಟ ಬುತ್ತಿ. ಜನರಿಗೆ ಮುಂದೆ ಬಿರು ಬಿಸಿಲಿನ ಮುನ್ಸೂಚನೆ ದಟ್ಟವಾಗುತ್ತಿದೆ. ಮುಂಗಾರು ಮಳೆ ಕೈಕೊಡುವುದರೊಂದಿಗೆ ಹಿಂಗಾರು ಹಂಗಾಮು ಕೈಕೊಟ್ಟ ಪರಿಣಾಮ ಬರಗಾಲ ಭೀಕರವಾಗಿದೆ. ಇದರಿಂದಾಗಿಯೇ ಹವಾಮಾನ ವೈಪರಿತ್ಯ ಉಂಟಾಗಿ ಅವಧಿಗೂ ಮುನ್ನವೇ ಝಳಕ್ಕೆ ತತ್ತರಿಸುವಂತಾಗಿದೆ.

ಇನ್ನು ಕಾದಿದೆ: ಪರಿಸ್ಥಿತಿ ನಿಯಂತ್ರಣಕ್ಕೆ ಮಳೆಯೊಂದೇ ಪರಿಹಾರ ವಾಗಿದೆ. ಈ ಬಾರಿ ಚಳಿಗಾಲ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬಿಸಿಲ ತಾಪ ಹೆಚ್ಚಾಗಿ ಜನರನ್ನು ಕಾಡ ಲಾರಂಭಿಸಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗುವುದನ್ನು ತಡೆಗಟ್ಟಲು ಮಳೆ ಅನಿವಾರ್ಯತೆಯಿದೆ. ಈ ಸಾಲಿನಲ್ಲಿ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯೂ ಇದೆ. ಇದರಿಂದ ಮಾರ್ಚ್ 21ರಿಂದ 25ರವರೆಗೂ ಮಳೆ ಬೀಳಬೇಕಾಗಿತ್ತು. ಆದರೆ ಹಳೆ ಮೈಸೂರು ಭಾಗದಲ್ಲಿ ಮಳೆಯಾದ ಕಾರಣ ಉಷ್ಣಾಂಶ ನಿಯಂತ್ರಣವಾಗಿಲ್ಲ. ಏಪ್ರಿಲ್ ಮೊದಲ ವಾರದಲ್ಲಾದರೂ ಮಳೆ ಬಂದರೆ ಇಳೆ ತಣಿಯಲಿದ್ದು, ತಾಪಮಾನ ನಿಯಂತ್ರಣ ವಾಗಲಿದೆ. ಒಂದು ವೇಳೆ ಏಪ್ರಿಲ್ ತಿಂಗಳಲ್ಲಿಯೂ ಮಳೆ ಬಾರದಿದ್ದಲ್ಲಿ ಉಷ್ಣಾಂಶ 40 ಡಿ.ಸೆ. ದಾಟಿದರೂ ಆಶ್ಚರ್ಯವಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಂಪು ಪಾನೀಯ, ಎಳನೀರು: ಕಾಡುತ್ತಿರುವ ಬಿಸಿಲಿನ ಝಳದಿಂದ ಜನ-ಜಾನು ವಾರುಗಳು ತತ್ತರಿಸುವಂತಾಗಿದೆ. ಉಷ್ಣಾಂಶ ಹೆಚ್ಚಾಗಿರುವುದರಿಂದ ಬೆವರಿನ ರೂಪದಲ್ಲಿ ದೇಹದ ತೇವಾಂಶ ಕುಸಿಯಲಿದೆ. ಇದರಿಂದ ಹೆಚ್ಚಿನ ಆಯಾಸ, ನಿಶ್ಯಕ್ತಿ ಉಂಟಾಗಲಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಚರ್ಮ ರೋಗಕ್ಕೂ ತುತ್ತಾಗುವ ಅಪಾಯ ಹೆಚ್ಚು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೆ ಜನರು ಹಣ್ಣಿನ ರಸ, ಎಳನೀರು ಸೇವನೆಗೆ ಮುಗಿಬಿದ್ದಿದ್ದಾರೆ. ಬೇಸಿಗೆ ಕಾಡುತ್ತಿರುವುದರಿಂದ ಎಲ್ಲೆಡೆ ರಸ್ತೆ ಬದಿಗಳಲ್ಲಿ ಎಳನೀರು ವ್ಯಾಪಾರ ಜೋರಾಗಿದೆ. ಬಹುತೇಕ ಜ್ಯೂಸ್, ಸೆಂಟರ್‍ಗಳಲ್ಲಿ ಜನ ಇಷ್ಟದ ತಂಪು ಪಾನೀಯ ಸವಿಯುತ್ತಿದ್ದಾರೆ. ಇವುಗಳ ದರ ತರಾವರಿ ಇದೆ. ಆದರೆ ಎಳನೀರಿನ ಬೆಲೆ ಮಾತ್ರ ರೂ. 30 ರೂ. ಆಜುಬಾಜಿನಲ್ಲಿದೆ.

ಎಳನೀರು ಜ್ಯೂಸ್, ಇನ್ನಿತರೆ ಜ್ಯೂಸ್‍ಗೆ ಭಾರೀ ಬೇಡಿಕೆ: ತ್ಯಾಗರಾಜ ರಸ್ತೆಯ ಲಕ್ಷ್ಮೀ ಟಿಫಾನಿಸ್(ಮಲ್ಲೇಶ್ ಹೋಟೆಲ್)ನಲ್ಲಿ ಮಾಡುವ ಎಳೆನೀರು ಜ್ಯೂಸ್ ಹಾಗೂ ಪುತ್ತೂರ್ ಪುನರ್ ಪುಳಿ ಜ್ಯೂಸ್‍ಗೆ ಭಾರೀ ಬೇಡಿಕೆ. ಎಳನೀರಿಗೆ ಸಬ್ಜಿಬೀಜ, ಗ್ಲೂಕೋಸ್ ಹಾಗೂ ನಿಂಬೆಹಣ್ಣಿನ ರಸದೊಂದಿಗೆ ತಯಾರಿಸುವ ಎಳನೀರು ಜ್ಯೂಸ್ ದೇಹವನ್ನು ತಂಪಾಗಿಸಲಿದೆ. ಇದರಿಂದ ಪ್ರತಿ ವರ್ಷ ಈ ಹೋಟೆಲ್‍ನಲ್ಲಿ ಎಳನೀರು ಜ್ಯೂಸ್‍ಗೆ ಎಲ್ಲೆಲ್ಲಿಂದಲೋ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಇದರೊಂದಿಗೆ ವಿವಿಧೆಡೆ ಇರುವ ಜ್ಯೂಸ್ ಸೆಂಟರ್‍ಗಳಲ್ಲೂ ತಾಜಾ ಹಣ್ಣಿನ ರಸ ಸೇವನೆಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ.

Translate »