ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚರಂತೆ ಕಾಣ್ತಾರೆ
ಮೈಸೂರು

ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚರಂತೆ ಕಾಣ್ತಾರೆ

August 21, 2022

ಮೈಸೂರು,ಆ.20(ಎಂಟಿವೈ)- ಪ್ರಸ್ತುತ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವೂ ಸೇರಿ ದಂತೆ ಅನೀತಿಯ ಪರಿಸ್ಥಿತಿಗೆ ಸಮಾಜವೇ ಕಾರಣ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ವಿಷಾದಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಶನಿವಾರ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜನ್ಮದಿನೋ ತ್ಸವ ಹಾಗೂ ‘ಅರಸು ಆದರ್ಶ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಅಪರಾಧ ಮಾಡಿದವರನ್ನು, ಜೈಲಿಗೆ ಹೋಗಿ ಬಂದವರನ್ನು ಜನರು ದೂರವಿಡುತ್ತಿದ್ದರು. ಇಂತಹ ಬೆಳವಣಿಗೆ ಯಿಂದ ಜನರು ತಪ್ಪು ಮಾಡಲು ಹೆದರುತ್ತಿ ದ್ದರು. ಆದರೆ ಈಗ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದವರನ್ನು ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಲಾಗುತ್ತಿದೆ. ನಾವು ಇಂದು ಅಧಿಕಾರ ಹಾಗೂ ಶ್ರೀಮಂತಿಕೆ ಯನ್ನು ರೂಪಿಸುವಂತಹ ಸಮಾಜದಲ್ಲಿ ಜೀವನ ನಡೆಸುತ್ತಿದ್ದೇವೆ. ಅವೆರಡೂ ಹೇಗೆ ಬಂದವು ಎನ್ನುವು ದನ್ನೂ ಯಾರು ಗಮನಿಸುವುದಿಲ್ಲ. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ.

ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚರಂತೆ ಕಾಣುತ್ತಾರೆ. ಅವನು ತಿನ್ನುವುದಿಲ್ಲ, ಇನ್ನೊಬ್ಬರಿಗೂ ತಿನ್ನುವುದಕ್ಕೆ ಬಿಡುವುದಿಲ್ಲ ಎಂದು ಲೇವಡಿ ಮಾಡು ತ್ತಾರೆ. ಶಾಲಾ-ಕಾಲೇಜುಗಳಲ್ಲಿ ನೀತಿ ಪಾಠಗಳನ್ನೇ ಹೇಳಿಕೊಡುತ್ತಿಲ್ಲ. ಮಾರಲ್ ಸೈನ್ಸ್‍ನಿಂದ ನೀತಿ ಪಾಠ ಕಲಿಯಲು ಸಾಧ್ಯವಿಲ್ಲ. ಟಿ.ವಿ ಹಾಗೂ ಸೆಲ್‍ಫೋನ್‍ಗಳಲ್ಲಿ ನೀತಿ ಪಾಠ ಹೇಳಿ ಕೊಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ತೃಪ್ತಿ ಇಲ್ಲದಿದ್ದರೆ ಸಮಾಜ ಉದ್ದಾರವಾಗುವುದಿಲ್ಲ. ದುರಾಸೆಯೊಂದೇ ಅತೀ ಹೆಚ್ಚಾಗಿ ಅಭಿವೃದ್ಧಿಯಾಗುತ್ತಿದೆ. ದಶಕದಿಂದ ದಶಕ್ಕೆ ದೇಶದಲ್ಲಿ ಹಗರಣಗಳ ಮೊತ್ತ ದ್ವಿಗುಣಗೊಳ್ಳು ತ್ತಿದೆ. ಸಮಾಜ ಬದಲಾವಣೆಯಾಗದೇ ದೇಶವನ್ನು ಯಾವುದೇ ರೀತಿಯಲ್ಲ್ಲೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಸಾವಿರಾರು ಕೋಟಿ ರೂ. ಸೋರಿಕೆ ಯಾ ಗಿರುವುದು ಹಗರಣಗಳ ಮೂಲಕ. 60ರ ದಶಕದಲ್ಲಿ ಸುಮಾರು 50 ಕೋಟಿ ರೂಪಾಯಿಗಳ ಹಗರಣ ನಡೆಯಿತು. ದಶಕಗಳು ಕಳೆದಂತೆ ಪ್ರಸ್ತುತ 2ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಪ್ರಮಾಣದ ಹಗರಣಗಳು ನಡೆದಿವೆ. ಇದೇ ರೀತಿ ಆದರೆ ದೇಶ ಅಭಿವೃದ್ಧಿ ಯಾಗುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಸಮಾಜವನ್ನು ಪರಿವರ್ತನೆ ಮಾಡಲು ಕಾನೂನಿನ ಮೂಲಕವೂ ಸಾಧ್ಯವಾಗುವುದಿಲ್ಲ. ನಮ್ಮ ಪಕ್ಕದ ದೇಶವಾದ ಚೀನಾದಲ್ಲಿ ಭ್ರಷ್ಟಾಚಾರದ ಆರೋಪ ಸಾಬೀತಾದರೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಅದೇ ಭಾರತದಲ್ಲಿ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಸಮೀಕ್ಷೆಗಳ ಪ್ರಕಾರ ಭ್ರಷ್ಟಾಚಾರದಲ್ಲಿ ಚೀನಾ ಮೊದಲ ಸ್ಥಾನದಲ್ಲಿ ಇದೆ. ಇದನ್ನು ಗಮನಿಸಿದರೆ ಬದಲಾವಣೆ ಮಾಡಲು ಕಾನೂನಿಂದಲೂ ಆಗುವುದಿಲ್ಲ. ಆದ್ದರಿಂದ ಬದಲಾವಣೆ ಹಾಗೂ ಪ್ರಾಮಾಣಿಕತೆ ಎನ್ನುವುದು ಮೊದಲು ನಮ್ಮಲ್ಲಿ ಬರಬೇಕು. ಅದು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಲುಪಬೇಕು. ಫಲವನ್ನು ನಾವು ನಿರೀಕ್ಷೆ ಮಾಡಬಾರದು. ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಿದರು.

ನಮ್ಮ ಕಾಲದಲ್ಲಂತೂ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ. ಆದರೆ, ಯುವ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸ ಬೇಕಾಗಿದೆ. ಅದಕ್ಕಾಗಿ ಲೋಕಾಯುಕ್ತರಾಗಿದ್ದ ವೇಳೆ ನಾನು ಕಂಡ ಭ್ರಷ್ಟ ವ್ಯವಸ್ಥೆ ಕುರಿತಂತೆ ವಿವರಿ ಸುತ್ತಿದ್ದೇನೆ. ಇದುವರೆಗೂ ಸಾವಿರಾರು ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡಿದ್ದೇನೆ. ಯಾವುದೇ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಒಂದು ರೂ ಪಡೆದಿಲ್ಲ ಎಂದರು.

ಪ್ರಶಸ್ತಿ ಪುರಸ್ಕೃತರು: ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ರಘು ಆರ್.ಕೌಟಿಲ್ಯ ಅವರಿಗೆ ಅರಸು ಆದರ್ಶ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಭಾಜನರಾಗಿದ್ದ ಶಾಸಕ ತನ್ವೀರ್‍ಸೇಠ್ ಅನಾ ರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಗೌರವಾಧ್ಯಕ್ಷ ಎಂ.ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿನಂದನಾ ನುಡಿಗಳನ್ನಾಡಿದರು. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್, ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‍ಕುಮಾರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದ ಕಾರ್ಯಕ್ರಮವನ್ನು ಎಂ.ಎ. ಕಮಲಾ ಅನಂತರಾಮ್ ನಿರೂಪಣೆ ಮಾಡಿದರು.

Translate »