ನಾಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?
News

ನಾಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?

March 7, 2022

ನವದೆಹಲಿ, ಮಾ.6-ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾ ನಿಸಿದೆ ಎಂದು ತಿಳಿದು ಬಂದಿದೆ.

ನಾಳೆ (ಮಾ.7) ಉತ್ತರಪ್ರದೇಶದ ಕೊನೆ ಹಂತದ ಚುನಾವಣೆ ಮುಗಿದ ನಂತರ ಅಂದರೆ ಮಾ.8 ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲು ನಿರ್ಧರಿಸಿದ್ದು, ಈಗಾಗಲೇ ತೈಲ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತು ಕತೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 15ರಿಂದ 22 ರೂ.ಗಳವರೆಗೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಇದು ದೇಶದ ವಾಹನ ಸವಾರರ ಮೇಲೆ ಬಹಳ ಪರಿಣಾಮ ಬೀರಿ, ಕೇಂದ್ರದ ವಿರುದ್ಧ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ರಷ್ಯಾದಿಂದ ಶೇ.15ರಷ್ಟು ಮತ್ತು ಇತರ ದೇಶಗಳಿಂದ ಶೇ.85ರಷ್ಟು ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಇದೀಗ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ವಿರುದ್ಧದ ಯುದ್ಧದಿಂದ ಪೆಟ್ರೋಲ್ ಮತ್ತು ಡೀಸೆಲ್ ಬ್ಯಾರೆಲ್ ದರ ಏರಿಕೆ ಯಾಗಿರುವುದರಿಂದ ಭಾರತ ತೈಲ ದರವನ್ನು ಹೆಚ್ಚಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎನ್ನಲಾಗಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾರತ ಏರಿಸಬೇಕಿತ್ತಾದರೂ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಏರಿಕೆಯನ್ನು ತಡೆ ಹಿಡಿದಿತ್ತು. ಇದೀಗ ಚುನಾವಣೆಗಳು ಸೋಮವಾರ ಮುಕ್ತಾಯ ವಾಗುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪ್ರಸ್ತಾಪವನ್ನು ತೈಲ ಕಂಪನಿಗಳು ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಕರ್ನಾಟಕ ಉಪ ಚುನಾವಣೆ ಸೇರಿದಂತೆ ಕೆಲ ಚುನಾವಣೆಗಳಲ್ಲಿ ಬಿಜೆಪಿಗೆ ಅಲ್ಪ ಮಟ್ಟದ ಹಿನ್ನಡೆಯಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡಿ ವಾಹನ ಸವಾರರ ಮೇಲಿನ ಹೊರೆಯನ್ನು ಇಳಿಸಿತ್ತು. ಇದೀಗ ಕೇಂದ್ರ ಸರ್ಕಾರ ಉಕ್ರೇನ್ ಮತ್ತು ರಷ್ಯಾ ಯುದ್ಧವನ್ನು ಮುಂದಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವ ಮೂಲಕ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Translate »