ಜೆಎಸ್‍ಎಸ್ ಆಸ್ಪತ್ರೆಯಲ್ಲಿ 3ನೇ ಹಂತದ ಕೋವಿಶೀಲ್ಡ್ ಲಸಿಕೆ ಪ್ರಯೋಗ ಆರಂಭ
ಮೈಸೂರು

ಜೆಎಸ್‍ಎಸ್ ಆಸ್ಪತ್ರೆಯಲ್ಲಿ 3ನೇ ಹಂತದ ಕೋವಿಶೀಲ್ಡ್ ಲಸಿಕೆ ಪ್ರಯೋಗ ಆರಂಭ

September 29, 2020

ಮೈಸೂರು, ಸೆ.28(ಆರ್‍ಕೆ)- ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ಮತ್ತು ಆರೈಕೆ ಜೊತೆಗೆ ಈ ವೈರಾಣು ವನ್ನು ಸಂಪೂರ್ಣವಾಗಿ ತೊಲಗಿಸಲು ಸಂಶೋಧಿಸಿರುವ ಔಷಧಿಗಳ ಪರೀಕ್ಷೆ ನಡೆಸುತ್ತಿರುವ ಮೈಸೂರಿನ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೀಗ 3ನೇ ಹಂತದ ಕೋವಿಶೀಲ್ಡ್ ಲಸಿಕೆ ಪ್ರಯೋಗ ಪ್ರಕ್ರಿಯೆ ಆರಂಭಿಸಿದೆ.

ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಹಾಗೂ ಪುಣೆ ಮೂಲದ ಸೆರಂ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ)ಯಿಂದ ತಯಾರಾದ ಲಸಿಕೆಯ ಮೊದಲ ಹಂತದ ಮಾನವ ಪ್ರಯೋಗವನ್ನು ಪೂರ್ಣ ಗೊಳಿಸಿರುವ ಜೆಎಸ್‍ಎಸ್ ಆಸ್ಪತ್ರೆಯು 2ನೇ ಹಂತದ ಪ್ರಯೋಗದ ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ನಿರತವಾಗಿರು ವಾಗಲೇ ಇದೀಗ 3ನೇ ಹಂತದ ಕೋವಿಶೀಲ್ಡ್ ಕ್ಲಿನಿಕಲ್ ಟ್ರಯಲ್ಸ್ ಅನ್ನು ಆರಂಭಿಸಿದೆ ಎಂದು ಆಸ್ಪತ್ರೆ ನಿರ್ದೇಶಕ ಹಾಗೂ ಕೋವಿಡ್-19 ಪರೀಕ್ಷಾ ಪ್ರಯೋಗಾಲಯದ ಮುಖ್ಯಸ್ಥರಾದ ಕರ್ನಲ್(ನಿವೃತ್ತ) ದಯಾನಂದ್ ತಿಳಿಸಿದ್ದಾರೆ.

ನೋವಾ ವ್ಯಾಕ್ಸ್ ಕಂಪನಿಯು ಪುಣೆಯ ಸೆರಂ ಇನ್ಸ್ ಟಿಟ್ಯೂಟ್‍ನೊಂದಿಗೆ ನಡೆಸುತ್ತಿರುವ ಈ ಪ್ರಯೋಗದ ಮೇಲೆ ಐಸಿಎಂಆರ್ ಅಧ್ಯಯನ ಆರಂಭಿಸಿದ್ದು ಅದರ ಭಾಗವಾಗಿ ಜೆಎಸ್‍ಎಸ್‍ನಲ್ಲಿ ಮನುಷ್ಯನ ಮೇಲೆ ಈ ಲಸಿಕೆ ಪ್ರಯೋಗ ನಡೆಸಿದ ನಂತರ ವಿಶ್ಲೇಷಣೆ ಮಾಡಿ ಅದರ ಪರಿಣಾಮದ ಕುರಿತಂತೆ ಸಮಗ್ರ ವರದಿಯನ್ನು ನೀಡಲು 3ನೇ ಹಂತದ ಪ್ರಯೋಗವನ್ನು ಆರಂಭಿಸಲಾಗಿದೆ ಎಂದ ಅವರು, 2ನೇ ಹಂತದಲ್ಲಿ ನೋಂದಾಯಿತರಾಗಿದ್ದ ಐವರು ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಲಾಗಿದೆ. ಅದರ ವಿಶ್ಲೇಷಣೆ ಪ್ರಗತಿಯಲ್ಲಿದ್ದು ಅದರ ಜೊತೆಜೊತೆಗೆ ಇದೀಗ ಮೂರನೇ ಹಂತದ ಕೋವಿಶೀಲ್ಡ್ ಲಸಿಕಾ ಪ್ರಯೋಗವನ್ನು ಆರಂಭಿಸಲಾಗಿದೆ ಎಂದರು.

ಸ್ವಯಂ ಸೇವಕರ ಮೇಲೆ ನಡೆಯುತ್ತಿರುವ ಪ್ರಯೋಗ ಸಂಬಂಧ ಅವರ ರಕ್ತದೊತ್ತಡ, ಹೃದಯಬಡಿತ ಹಾಗೂ ಇನ್ನಿತರ ಬದಲಾವಣೆಗಳ ಮೇಲೆ ನಿಗಾ ಇರಿಸಿರುವ ಆಸ್ಪತ್ರೆಯ ವೈದ್ಯರು ಫಲಿತಾಂಶದ ಕುರಿತು ಸುದೀರ್ಘ ವರದಿ ತಯಾರಿಸುತ್ತಿದ್ದಾರೆ. ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕಾ ಪ್ರಯೋಗ ನಡೆಸಲು ಸುಸಜ್ಜಿತ ವಾದ  ಪ್ರಯೋಗಾಲಯ, ನುರಿತ ವೈದ್ಯರ ತಂಡ, ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳು, ಲ್ಯಾಬ್‍ಟೆಕ್ನಿಷಿಯನ್ಸ್‍ಗಳೂ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಗಳನ್ನು ಹೊಂದಿರುವುದರಿಂದ ಈ ಮಹತ್ತರ ಜವಾಬ್ದಾರಿಗೆ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನಡಿ ನಡೆಯುತ್ತಿರುವ ಆಸ್ಪತ್ರೆಯ ಪ್ರಯೋಗಾಲಯವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರ ಎಂದೂ ದಯಾನಂದ್ ತಿಳಿಸಿದ್ದಾರೆ.

 

 

Translate »