ಮೈಸೂರಲ್ಲಿ ಅಂಗಾಂಗ ದಾನ ಮಹತ್ವದ ಅರಿವು
ಮೈಸೂರು

ಮೈಸೂರಲ್ಲಿ ಅಂಗಾಂಗ ದಾನ ಮಹತ್ವದ ಅರಿವು

August 13, 2018

ಮೈಸೂರು: ಅಂಗಾಂಗ ದಾನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಚಿಕ್ಕಗಡಿಯಾರದ ಬಳಿ ಭಾನುವಾರ ಯಂಗ್ ಇಂಡಿಯನ್ಸ್ ಸಂಸ್ಥೆ ಹಾಗೂ ಸಿಐಐ ಸಂಸ್ಥೆಯು ಸಾರ್ವಜನಿಕರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿತು.
ಅಪಘಾತ ಹಾಗೂ ವಿವಿಧ ಆರೋಗ್ಯ ಸಮಸ್ಯೆಯಿಂದಾಗಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕಿಸಲು ಅಂಗಾಂಗ ದಾನ ಮಹತ್ವ ಪಡೆಯುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಯಂಗ್ ಇಂಡಿಯನ್ಸ್, ಸಿಐಐ, ರೋಟರಿ ಮೈಸೂರು, ಹ್ಯೂಮನ್ ಟಚ್, ಸೇವಾ ಹಸ್ತ, ಗಿಫ್ಟ್ ಆನ್ ಆರ್ಗನ್ ಹಾಗೂ ಇನ್ನಿತರರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಮುತ್ತುಕುಮಾರ್ ಹಾಗೂ ಮೈಸೂರು ಘಟಕದ ಅಧ್ಯಕ್ಷ ಅರ್ಜುನ್ ರಂಗ ಅವರು ಉದ್ಘಾಟಿಸಿ, ಅಂಗಾಂಗಗಳ ದಾನದ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹತ್ವದ ವಿಷಯದ ಬಗ್ಗೆ ಅರಿವು ಮೂಡಿಸುವುದಕ್ಕೆ ಕಾರ್ಯಕ್ರಮ ರೂಪಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಎಸ್‍ಎಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಮಂಜುನಾಥ್ ಶೆಟ್ಟಿ ಅವರು ಮಾತನಾಡಿ, ಅಂಗಾಂಗ ದಾನ ಮಾಡುವುದರಿಂದ ಇನ್ನಿತರರ ಜೀವ ಬದುಕಿಸಬಹುದಾಗಿದೆ. ಸಾಮಾನ್ಯವಾಗಿ ಮೆದುಳು ನಿಷ್ಕ್ರಿಯಗೊಂಡಾಗ ಅಂಗಾಂಗ ದಾನ ಮಾಡಬಹುದು. ಇತ್ತೀಚೆಗೆ ಕೆಲಸ ಮಾಡುತ್ತಿದ್ದ ವೇಳೆ ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪುಟ್ಟೇಗೌಡ ಎಂಬುವರ ಅಂಗಾಂಗಗಳನ್ನು ದಾನ ಮಾಡಿ ಆರು ಮಂದಿಯ ಪ್ರಾಣ ಉಳಿಸಲಾಯಿತು. ಮೆದುಳು ನಿಷ್ಕ್ರಿಯಗೊಂಡಾಗ ಅವರ ಪತ್ನಿಯ ಮನವೊಲಿಸಲಾಯಿತು. ಮೂಡ ನಂಬಿಕೆಗಳಿಗೆ ಕಟ್ಟು ಬೀಳದೆ ಅಂಗಾಂಗ ದಾನ ಮಾಡುವುದಕ್ಕೆ ಜನರು ನಿರ್ಧಾರ ತಳೆದು ಸಂಕಷ್ಟದಲ್ಲಿರುವವರ ಜೀವ ಉಳಿಸುವುದಕ್ಕೆ ಮುಂದಾಗಬೇಕು. ಇಂತಹ ಬೆಳವಣಿಗೆ ಅನೇಕರಿಗೆ ಪ್ರೇರಣೆ ನೀಡುತ್ತದೆ. ಅಂಗಾಂಗ ದಾನ ಮಾಡುವುದು ಒಳ್ಳೆಯ ಕೆಲಸವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಂಗಾಂಗಗಳನ್ನು ದಾನ ಮಾಡಿದ ಕಾರ್ಮಿಕ ಪುಟ್ಟಗೌಡ ಅವರ ಪತ್ನಿ ಹಾಗೂ ಅವರ ಇಬ್ಬರು ಪುತ್ರಿಯರನ್ನು ಸನ್ಮಾನಿಸಲಾಯಿತು. ಪುಟ್ಟೇಗೌಡ ಅವರ ಪತ್ನಿಗೆ ಯಂಗ್ ಇಂಡಿಯನ್ಸ್ ಸಂಸ್ಥೆಯಿಂದ 5 ಸಾವಿರ ರೂ, ರೋ. ರಾಜೇಶ ಷಾ ಎಂಬುವವರು 5 ಸಾವಿರ ರೂ ಆರ್ಥಿಕ ನೆರವು ನೀಡಿದರೆ, ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆರ್.ವಾಸುದೇವ ಭಟ್ ಅವರು ಪುಟ್ಟೇಗೌಡರ ಪತ್ನಿಗೆ ಕೆಲಸ, ಎರಡನೆ ಮಗಳಿಗೆ ಶಾಲೆಯಲ್ಲಿ ಸೀಟ್ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಹ್ಯೂಮನ್ ಟಚ್ ಸಂಸ್ಥೆಯು ಮೂರು ವರ್ಷಗಳವರೆಗೆ ಅಗತ್ಯ ವಸ್ತುಗಳನ್ನು ನೀಡುವ ಭರವಸೆ ನೀಡಿದರೆ, ಸೇವಾ ಹಸ್ತ ಸಂಸ್ಥೆ ಹಾಗೂ ರೋಟರಿ ಮೈಸೂರು ಸಂಸ್ಥೆ ಆರ್ಥಿಕ ನೆರವು ನೀಡುವ ವಾಗ್ದಾನ ಮಾಡಿದವು.

ಇದೇ ವೇಳೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪೌರಕಾರ್ಮಿಕರು ಪ್ರತಿಜ್ಞೆ ಸ್ವೀಕರಿಸಿ, ಅಂಗಾಂಗ ದಾನ ಮಾಡುವ ಹಾಗೂ ಸಂಬಂಧಿಗಳು, ಸ್ನೇಹಿತರು ಹಾಗೂ ನೆರೆ ಹೊರೆಯವರಿಗೂ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿ ಹೇಳುವುದಾಗಿ ವಾಗ್ದಾನ ನೀಡಿದರು.

ಕಾರ್ಯಕ್ರಮದಲ್ಲಿ ಯಂಗ್ ಇಂಡಿಯನ್ಸ್ ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷ ಡಿ.ರವಿಶಂಕರ್, ಸಹ ಅಧ್ಯಕ್ಷ ಘನಶ್ಯಾಮ್ ಮುರುಳಿ, ಗಿಫ್ಟ್ ಆನ್ ಆರ್ಗನ್ ಸಂಸ್ಥೆಯ ಅಧ್ಯಕ್ಷೆ ಡಾ.ಚೈತ್ರ ನಾರಾಯಣ್, ಮಾಜಿ ಅಧ್ಯಕ್ಷೆ ರಮ್ಯಾ ಬೋಪಣ್ಣ, ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಯಂಗ್ ಇಂಡಿಯನ್ಸ್ ಸಂಸ್ಥೆಯ ಸದಸ್ಯರಾದ ಅಕ್ಷರ, ಅಂಕಿತ್ ಸೋಂತಾಲಿಯ, ನೂಪುರ್ ಸೋಂತಾಲಿಯ, ಶರತ್ ಕುಮಾರ್, ಶರತ್ ರಾಜು, ಜೈ ಚೋಪ್ರ, ನಿಖಿಲ್ ಕುಮಾರ್, ಸುಷ್ಮಾ, ನಿಖಿಲ್ ಕೌÀಂಡಿಯನ್, ಸೌಮ್ಯ, ಕಾರ್ತಿಗೇಯನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »