ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  ಚಾಮರಾಜ ಕ್ಷೇತ್ರದ 19 ವಾರ್ಡ್‍ಗಳಿಗೆ  160 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  ಚಾಮರಾಜ ಕ್ಷೇತ್ರದ 19 ವಾರ್ಡ್‍ಗಳಿಗೆ  160 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

August 13, 2018

ಮೈಸೂರು,: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿನ 19 ನಗರ ಪಾಲಿಕೆ ವಾರ್ಡ್‍ಗಳಿಗೆ ಬಿಜೆಪಿಯಲ್ಲಿ 160 ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ್ದಾರೆ.

ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ವಿವಿಪುರಂನಲ್ಲಿರುವ ತಮ್ಮ ಕಚೇರಿಯಲ್ಲಿ ಪಕ್ಷದ ನಗರ ಪಾಲಿಕೆ ಚುನಾವಣಾ ಆಕಾಂಕ್ಷಿಗಳ ಸಭೆ ನಡೆಸಿದ ವೇಳೆ 19 ವಾರ್ಡ್‍ಗಳಿಗೆ ಬರೋಬ್ಬರಿ 160 ಮಂದಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದರಲ್ಲದೆ, ಟಿಕೆಟ್ ಕೋರಿಕೆಗಾಗಿ ಶಾಸಕರ ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದುಕೊಂಡರು.

ಆ ಪೈಕಿ 31ನೇ ವಾರ್ಡಿನ ಕಾರ್ಪೊರೇಟರ್ ಗಿರೀಶ್‍ಪ್ರಸಾದ್, 17ನೇ ವಾರ್ಡಿನ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ, ಚಾಮರಾಜ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಸೋಮಶೇಖರರಾಜು, ಶಿವಕುಮಾರ್, ವಾಣೇಶ್, ಪುನೀತ್, ಹರ್ಷ, ಹೇಮಾ ನಂದೀಶ್ ಸೇರಿದಂತೆ ಒಟ್ಟು 160 ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಆಕಾಂಕ್ಷಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕ ನಾಗೇಂದ್ರ, ಆಕಾಂಕ್ಷಿಗಳಿಗೆಲ್ಲಾ ಟಿಕೆಟ್ ಕೊಡಲು ಸಾಧ್ಯವಾಗುವುದಿಲ್ಲ. ಇರುವ 19 ವಾರ್ಡ್‍ಗಳಿಗೆ 19 ಮಂದಿ ಮಾತ್ರ ಬಿಜೆಪಿಯಿಂದ ಸ್ಪರ್ಧಿಸಲು ಸಾಧ್ಯ.

ಟಿಕೆಟ್ ಸಿಗಲಿ-ಬಿಡಲಿ, ಪ್ರತಿಯೊಬ್ಬರೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿ ಕನಿಷ್ಟ 10 ಅಭ್ಯರ್ಥಿಗಳನ್ನಾದರೂ ಗೆಲ್ಲಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ಪಕ್ಷದ ಅಭ್ಯರ್ಥಿಗಳು ಗೆದ್ದರೆ ಎಲ್ಲರೂ ಗೆದ್ದಂತೆ. ಉತ್ಸಾಹದಿಂದ ಕೆಲಸ ಮಾಡಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕೆಂಬ ಧ್ಯೇಯದಿಂದ ಕೆಲಸ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು. ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀರಾಂ, ಪ್ರಧಾನ ಕಾರ್ಯದರ್ಶಿ ಚಿಕ್ಕವೆಂಕಟು, ಮಾಜಿ ಅಧ್ಯಕ್ಷ ಸೋಮಶೇಖರರಾಜು, ಯುವಮೋರ್ಚಾ ಅಧ್ಯಕ್ಷ ಕೃಷ್ಣೇಗೌಡ, ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಶಿವಕುಮಾರ ಹಾಗೂ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »