ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಿ
ಮೈಸೂರು

ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಿ

May 13, 2020
  •  ಕೊರೊನಾ ನಂತರ ಐದನೇ ಬಾರಿ ದೇಶ ಉದ್ದೇಶಿಸಿ ಮೋದಿ ಭಾಷಣ
  •  ಬೇಡಿಕೆ, ಪೂರೈಕೆ, ಉತ್ಪಾದನಾ ಕ್ಷೇತ್ರಗಳಿಗೆ ಇದರಿಂದ ಉತ್ತೇಜನ
  •  ರೈತರು, ಗೃಹ, ಸಣ್ಣ, ಮಧ್ಯಮ ಕೈಗಾರಿಕೆ, ಮಧ್ಯಮ ವರ್ಗಕ್ಕೆ ಒತ್ತಾಸೆ
  •  ಸ್ವದೇಶಿ ವಸ್ತುಗಳನ್ನೇ ಬಳಸಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ
  • ಕೋವಿಡ್-19 ಜನ್ಮದಾತ ಚೀನಾ ವಿರುದ್ಧ ಪರೋಕ್ಷ ಆರ್ಥಿಕ ಸಮರ

ನವದೆಹಲಿ, ಮೇ 12- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಐದನೇ ಬಾರಿ ಭಾಷಣ ಮಾಡಿದರು. ಕೊರೊನಾ ಮಹಾಮಾರಿಯಿಂದ ಕುಸಿದಿರುವ ಭಾರತದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಹಾಗೂ ದೇಶದ ಸ್ವಾವಲಂಬನೆಗೆ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಇಂದು ರಾತ್ರಿ 8 ಗಂಟೆಗೆ ಭಾಷಣ ಆರಂಭಿ ಸಿದ ಪ್ರಧಾನಿ, ತಮ್ಮ 35 ನಿಮಿಷಗಳ ಭಾಷಣದಲ್ಲಿ ಕೊರೊನಾ ಸೋಂಕು ಕಂಡುಬಂದಂದಿನಿಂದ ಇಲ್ಲಿಯವರೆಗಿನ ಎಲ್ಲಾ ರೀತಿಯ ಬೆಳವಣಿಗೆಗಳನ್ನು ವಿವರಿಸಿ ದರಲ್ಲದೇ, ದೇಶವು ಈ ಮಹಾಮಾರಿಯ ವಿರುದ್ಧ ಸೆಣಸಿದ ಬಗೆಯನ್ನು ಪ್ರಶಂಸಿಸಿದರು.

ಭಾರತ ಆತ್ಮ ನಿರ್ಭರ ದೇಶವಾಗಬೇಕು ಎಂಬ ದೃಷ್ಟಿಯಿಂದ ಈ ವಿಶೇಷ ಪ್ಯಾಕೇಜ್ ಘೋಷಿಸುತ್ತಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ಈ ಮೂಲಕ ಕೊರೊನಾ ಜನ್ಮದಾತ ಚೀನಾ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರ ಸಾರಿದ್ದಾರೆ.

ಭಾರತ ಸ್ವಾವಲಂಬಿ ಎಂಬುದನ್ನು ನಾವು ತೋರಿಸಬೇಕಿದೆ. ಕೋವಿಡ್ ಸಂಕಟ ಆರಂಭವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ. ಅಲ್ಲದೇ ಎನ್-95 ಮಾಸ್ಕ್‍ಗಳು ಕೆಲವೇ ಕೆಲವು ಸಂಖ್ಯೆಯಲ್ಲಿ ತಯಾರಾಗುತ್ತಿದ್ದವು. ಆದರೆ ಈಗ ಭಾರತದಲ್ಲಿ ದಿನಂ ಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್‍ಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ವಿಶೇಷ ಪ್ಯಾಕೇಜ್‍ನಿಂದಾಗಿ ಆರ್ಥಿಕತೆಯ ಶಾಖೆಗಳಾದ ಬೇಡಿಕೆ, ಪೂರೈಕೆ ಮತ್ತು ಉತ್ಪಾದನಾ ಕ್ಷೇತ್ರಗಳು ಉತ್ತೇಜನಗೊಳ್ಳುತ್ತವೆ. ಸ್ವಾವಲಂಬನೆ ಸಾಧಿಸಲು ಜಮೀನು, ಕಾರ್ಮಿಕರು, ದ್ರವ್ಯತೆ, ಕಾನೂನುಗಳನ್ನು ಕೇಂದ್ರೀಕರಿಸಿ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಈ ಆರ್ಥಿಕ ಪ್ಯಾಕೇಜ್‍ನಿಂದ ಗೃಹ ಕೈಗಾರಿಕೆ ಗಳು, ಸಣ್ಣ, ಮಧ್ಯಮ ಉದ್ಯಮಗಳು, ಅದನ್ನು ನಂಬಿಕೊಂಡು ಬದುಕುತ್ತಿರುವ ಕೋಟ್ಯಾಂತರ ಜನರಿಗೆ ಸಹಾಯವಾಗಲಿದೆ. ಅಲ್ಲದೇ ರೈತರು,

ಕಾರ್ಮಿಕರು, ತೆರಿಗೆ ಪಾವತಿ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಕೊರೊನಾ ಸಂಕಷ್ಟದ ಸಮಯ ನಮಗೆ ಸ್ಥಳೀಯ ವಸ್ತುಗಳ ಪ್ರಾಮುಖ್ಯತೆ ಯನ್ನು ತಿಳಿಸಿದೆ. ಇವತ್ತಿನ ಜಾಗತಿಕ ಬ್ರಾಂಡ್‍ಗಳು ಒಂದು ಕಾಲದಲ್ಲಿ ಸ್ಥಳೀಯವೇ ಆಗಿದ್ದವು. ಆಗ ಅದಕ್ಕೆ ಜನರು ಹೆಚ್ಚು ಬೆಂಬಲ ಕೊಟ್ಟು ಹೆಚ್ಚೆಚ್ಚು ಬೇಡಿಕೆ ಇಟ್ಟ ಬಳಿಕ ಅವು ಜಾಗತಿಕ ಮಟ್ಟದ ಬ್ರಾಂಡ್‍ಗಳಾಗಿ ಬದಲಾದವು. ನಾವು ಭಾರತೀಯರು. ಈ ಕ್ಷಣದಿಂದ ಸ್ಥಳೀಯ ಉತ್ಪಾದನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.

ಗಾಂಧೀಜಿಯವರ ಖಾದಿ, ಕೈಮಗ್ಗ ಗ್ರಾಮೋದ್ಯೋಗ ಅಭಿಯಾನವನ್ನು ಸ್ಮರಿಸಿದ ಪ್ರಧಾನಿ, ಮೇಕ್ ಇಂಡಿಯಾಗೆ ಒತ್ತು ನೀಡಲು ಮನವಿ ಮಾಡಿದರು. ಭಾರತದ ಆತ್ಮ ನಿರ್ಭರತೆ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ. ಆರ್ಥಿಕತೆ, ಮೂಲಭೂತ ಸೌಲಭ್ಯ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಇವೇ ಆ ಐದು ಆಧಾರ ಸ್ತಂಭಗಳಾಗಿವೆ ಎಂದರು. ಕಛ್ ಭೂಕಂಪದ ದಿನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಲ್ಲವೂ ಧ್ವಂಸಗೊಂಡಿತ್ತು. ಅಲ್ಲಿ ಮೃತ್ಯು ಚಾದರ ಹಾಸಿದಂತಿತ್ತು. ಇನ್ನೆಂದೂ ಕಛ್ ಎದ್ದು ನಿಲ್ಲದು ಎಂದುಕೊಂಡಿದ್ದಾಗಲೇ ಕಛ್ ದೇಶದ ಮುಂದೆ ಹೊಸ ರೂಪದಲ್ಲಿ ಎದ್ದು ನಿಂತಿತು. ಇದು ಭಾರತದ ಸಂಕಲ್ಪ ಶಕ್ತಿಯ ದ್ಯೋತಕವಾಗಿದೆ ಎಂದು ತಿಳಿಸಿದರು. ವಿಶೇಷ ಪ್ಯಾಕೇಜ್‍ನ ವಿವರಗಳನ್ನು ವಿತ್ತ ಸಚಿವರು ನಾಳೆಯಿಂದ ನಿಮ್ಮ ಮುಂದಿಡಲಿದ್ದಾರೆ. ಎಲ್ಲಾ ಸರ್ಕಾರಿ ಯಂತ್ರಗಳು ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಜನ್‍ಧನ್, ಆಧಾರ್, ಮೊಬೈಲ್ ಆಧಾರಿತ ವ್ಯವಸ್ಥೆ ನಮ್ಮ ದೇಶದ ಕಟ್ಟ ಕಡೆಯ ವ್ಯಕ್ತಿಯ ಬಳಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಿದ ಉದಾಹರಣೆ ನಮ್ಮ ಮುಂದಿದೆ. ಮುಂದೆಯೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮುಂದುವರೆಯುತ್ತದೆ. ಈ ಸಂಕಷ್ಟದ ಸಂದರ್ಭದಲ್ಲೂ ನಮ್ಮ ದೇಶದ ಜನಸಾಮಾನ್ಯರ ಮನೋಬಲದ ದರ್ಶನವಾಗಿದೆ. ಅವರೆಲ್ಲರೂ ಬಹಳ ಕಷ್ಟಪಟ್ಟಿದ್ದಾರೆ, ತ್ಯಾಗ ಮಾಡಿದ್ದಾರೆ. ಇಂದು ದೇಶೀಯ ಉತ್ಪನ್ನ ಗಳಿಗೆ ಬಲ ತುಂಬಬೇಕಾಗಿದೆ. ಹಾಗಾಗಿ ನಾವು ದೇಶೀ ಉತ್ಪನ್ನಗಳನ್ನು ಖರೀದಿಸುವುದು ಮಾತ್ರವಲ್ಲದೇ ಅದರ ಪ್ರಚಾರವನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ನಾವು ಕೊರೊನಾ ಜೊತೆ ಬದುಕಬೇಕಿದೆ ಮುಂದಿನ ಲಾಕ್‍ಡೌನ್ ಭಿನ್ನವಾಗಿರಲಿದೆ

ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಕೋವಿಡ್, ಬಹುದಿನಗಳವರೆಗೆ ನಮ್ಮೊಂದಿಗೆ ಇರಲಿದೆ. ಹಾಗಾಗಿ ನಾವೆಲ್ಲರೂ ಸುರಕ್ಷಿತ ರೀತಿಯಲ್ಲಿ ನಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಮುಂದಿನ ಲಾಕ್‍ಡೌನ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಈ ಕುರಿತಾದ ಮಾಹಿತಿಯನ್ನು ಮೇ 17ರ ಒಳಗೆ ನಿಮಗೆ ನೀಡುವುದಾಗಿ ಪ್ರಧಾನಿ ಮೋದಿ ತಿಳಿಸಿದರು.

ನಾವು ಭಾರತವನ್ನು ಆತ್ಮ ನಿರ್ಭರ ಭಾರತವ ನ್ನಾಗಿಸಲು ಕಾರ್ಯಮಗ್ನರಾಗೋಣ. ಸುರಕ್ಷತೆ ನಮ್ಮ ಆದ್ಯತೆಯಾಗಲಿ. ವೈರಸ್ ಒಂದು ವಿಶ್ವವನ್ನೇ ತಲ್ಲಣಗೊಳಿಸಿದೆ ಹಾಗೂ ಇಡೀ ವಿಶ್ವವೇ ಇದರ ಹೋರಾಟ ದಲ್ಲಿ ತೊಡಗಿದೆ. 21ನೇ ಶತಮಾನ ಭಾರತದ್ದಾಗಿದೆ ಎಂದು ಎಲ್ಲರೂ ನಂಬಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು. ಸಂಕಷ್ಟವನ್ನೇ ಸವಾಲಾಗಿ ಸ್ವೀಕರಿಸಿ ಅನಾಹುತವನ್ನೇ ಅವಕಾಶವನ್ನಾಗಿ ಬದಲಿಸೋಣ. ಆತ್ಮಬಲ, ಆತ್ಮವಿಶ್ವಾಸ, ಆತ್ಮ ನಿರ್ಭರತೆಯಿಂದ ಕೂಡಿರುವ ಭಾರತದಲ್ಲಿ ನಮ್ಮ ಪ್ರಜಾಪ್ರಭುತ್ವವೇ ನಮ್ಮ ಶಕ್ತಿ ಎಂದು ಪ್ರಧಾನಿ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ಕಳೆದ ಕೆಲ ದಿನಗಳಿಂದ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. 42 ಲಕ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದು, 2.86 ಲಕ್ಷ ಜನ ಸಾವಿಗೀಡಾಗಿದ್ದಾರೆ. ಭಾರತೀಯರೂ ಸಹ ತಮ್ಮ ಕುಟುಂಬದವರನ್ನು ಕಳೆದು ಕೊಂಡಿದ್ದಾರೆ. ಇವರೆಲ್ಲರಿಗಾಗಿ ನಾನು ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಕೇವಲ ಒಂದು ವೈರಸ್ ಇಡೀ ಜಗತ್ತನ್ನು ತಲ್ಲಣಗೊಳಿಸಿತು. ಭಾರತ ಔಷಧಗಳನ್ನು ರಫ್ತು ಮಾಡಿರುವುದು ಜೀವನ್ಮರಣದ ಹೋರಾಟದಲ್ಲಿರುವ ಜಗತ್ತಿನಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಭಾರತದಲ್ಲಿ ಸಂಪನ್ಮೂಲ ಮತ್ತು ಪ್ರತಿಭೆ ಇದೆ. ಇಲ್ಲಿ ಉತ್ತಮ ಉತ್ಪನ್ನ ತಯಾರಿಸಬಹುದು. ಗುಣಮಟ್ಟ ಸುಧಾರಣೆ ಮತ್ತು ವ್ಯವಹಾರವೂ ಸಾಧ್ಯವಿದೆ ಎಂದರು.

Translate »