ಬೆಂಗಳೂರಲ್ಲಿ ಪ್ರಧಾನಿ ಮೋದಿ
News

ಬೆಂಗಳೂರಲ್ಲಿ ಪ್ರಧಾನಿ ಮೋದಿ

February 13, 2023

ಬೆಂಗಳೂರು,ಫೆ.12-ನಾಳೆ (ಸೋಮವಾರ) ಏರೋ ಇಂಡಿಯಾ ಶೋ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿದರು.

ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸೇರಿ ಹಲವರು ಸ್ವಾಗತಿಸಿದರು. ಪ್ರಧಾನಮಂತ್ರಿಗಳು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ಅಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಪ್ರಧಾನಿ ಮೋದಿ ಉಪಾಹಾರ ಸೇವಿಸಿ, ಸಂವಾದ ನಡೆಸಿದ್ದಾರೆ.
ಮೋದಿ ಜೊತೆ ಡಿನ್ನರ್ ಸಂವಾದದಲ್ಲಿ ಸಿನಿಮಾ, ಉದ್ಯಮ ಹಾಗೂ ಕ್ರೀಡಾ ವಲಯದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನಟ ಯಶ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‍ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್, ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್‍ವಾಲ್, ಮನೀಶ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಅವರು ಭಾಗಿಯಾಗಿ ಮೋದಿಯವರೊಂದಿಗೆ ಉಪಾಹಾರ ಸೇವಿಸಿ ಸಂವಾದ ನಡೆಸಿದರು. ಇದಕ್ಕೂ ಮುನ್ನ ಇಂದು ಸಂಜೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಬೆಂಗಳೂ ರಿಗೆ ಆಗಮಿಸಿದರು. ಪ್ರತಿಷ್ಠಿತ ತಾಜ್ ವೆಸ್ಟ್ಲೆಂಡ್ ಹೋಟೆಲ್ ನಲ್ಲಿ ಅವರು ಏರೋ ಇಂಡಿಯಾ 2023ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿರುವ ಏರೋ ಇಂಡಿಯಾ ಕಾರ್ಯ ಕ್ರಮದಲ್ಲಿ ರಾಜನಾಥ ಸಿಂಗ್ ಭಾಗವಹಿಸಲಿದ್ದಾರೆ.

ಏರೋ ಇಂಡಿಯಾ ಶೋ: ವಿಶ್ವದ ಚಿತ್ತ ಸೆಳೆದಿರುವ ಏರೋ ಇಂಡಿಯಾ ಶೋಗೆ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11:30ರವರೆಗೂ ಗಗನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ವೀಕ್ಷಣೆ ಮಾಡಲಿದ್ದಾರೆ. ಬೆಳಗ್ಗೆ 11.45ಕ್ಕೆ ಯಲಹಂಕ ವಾಯುನೆಲೆಯಿಂದಲೇ ತ್ರಿಪುರಾ ಚುನಾವಣಾ ಪ್ರಚಾರಕ್ಕಾಗಿ ಅಗರ್ತಲಾಗೆ ಪ್ರಧಾನಿ ಮೋದಿ ಪಯಣ ಬೆಳೆಸಲಿದ್ದಾರೆ. ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಫೆ.17ರವರೆಗೂ ಕೆಐಎಎಲ್‍ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೆಬ್ಬಾಳ ಫ್ಲೈಓವರ್ ಬಂದ್ ಮಾಡಿರುವ ಕಾರಣ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣ ಏರ್ಪಡುತ್ತಿದೆ. ನಾಳೆಯಿಂದ ಏರ್‍ಶೋ ನೋಡಲು ಸಾವಿರಾರು ಜನ ಬರುವ ಹಿನ್ನೆಲೆಯಲ್ಲಿ ವಾಹನದಟ್ಟಣೆ ಇನ್ನಷ್ಟು ಹೆಚ್ಚಲಿದೆ.

Translate »