ಮೈಸೂರು ರೇಬಿಸ್ ಮುಕ್ತ ಮಾಡಲು ಚಿಂತನೆ
ಮೈಸೂರು

ಮೈಸೂರು ರೇಬಿಸ್ ಮುಕ್ತ ಮಾಡಲು ಚಿಂತನೆ

February 13, 2023

ಮೈಸೂರು, ಫೆ.12- ಬೀದಿನಾಯಿ ಸೇರಿದಂತೆ ವಿವಿಧ ಸಾಕು ಪ್ರಾಣಿಗಳಿಂದ ಜನರಿಗೆ ರೇಬಿಸ್ ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಾರ್ಚ್‍ನಿಂದ ವಿಶೇಷ ಅಭಿಯಾನ ನಡೆಸಿ ಒಂದು ಲಕ್ಷ ರೇಬಿಸ್ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಾಯಿ ಕಚ್ಚುವುದರಿಂದ ಜನರಲ್ಲಿ ರೇಬಿಸ್ ಕಾಡುವ ಆತಂಕವಿದ್ದು, ಪ್ರತಿವರ್ಷ ಬೀದಿನಾಯಿ ದಾಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಕೆಲವರಿಗೆ ರೇಬಿಸಿ ಬೀತಿ ಕಾಡುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಮೈಸೂರಲ್ಲಿ ವರ್ಷಕ್ಕೆ 2-3 ರೇಬಿಸ್ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರಿಂ ದಾಗಿ ಮುಂಬರುವ ವರ್ಷದಲ್ಲಿ ಮೈಸೂರನ್ನು ರೇಬಿಸ್ ಮುಕ್ತಗೊಳಿಸಲು ಪಶುಸಂಗೋಪನಾ ಇಲಾಖೆ ಪಣ ತೊಟ್ಟಿದ್ದು, ಬೀದಿನಾಯಿ, ಸಾಕುನಾಯಿ, ಜಾನುವಾರು ಗಳಿಗೂ ರೇಬಿಸ್ ಲಸಿಕೆ ನೀಡಲು ಕಾರ್ಯಕ್ರಮ ರೂಪಿಸಿದೆ. ಪಲ್ಸ್ ಪೋಲಿಯೊ ಮಾದರಿಯಲ್ಲಿ ರೇಬಿಸ್ ಲಸಿಕೆಯನ್ನು ಹಾಕಲು ನಿರ್ಧರಿಸಲಾಗಿದ್ದು, ಜಿಲ್ಲೆ ಯಲ್ಲಿ ಸುಮಾರು ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ರೇಬಿಸ್ ಮುಕ್ತ ಮೈಸೂರು ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಲಕ್ಷ ಡೋಸ್ ಲಸಿಕೆಗಳ ಅಗತ್ಯವಿರುವುದಾಗಿ ಪಟ್ಟಿ ಮಾಡಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿ ಕೊಂಡು, ಮಾರ್ಚ್‍ನಲ್ಲಿ ಲಸಿಕೆ ಹಾಕುವ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಪಶುಸಂಗೋಪನಾ ಇಲಾಖೆ ಉಪನಿರ್ದೇ ಶಕ ಡಾ.ಬಿ.ಎನ್.ಷಡಕ್ಷರಮೂರ್ತಿ ಮಾತನಾಡಿ, ಬೀದಿ ನಾಯಿಗಳು, ಸಾಕು ನಾಯಿಗಳು ಹಾಗೂ ನಾಯಿ ಕಚ್ಚಿದ ಪ್ರಾಣಿಗಳಿಗೂ ಲಸಿಕೆ ಹಾಕಲಾಗುವುದು. ಕಳೆದ ವರ್ಷ ಇಲಾಖೆ ವತಿಯಿಂದ ಲಸಿಕೆ ಅಭಿಯಾನ ನಡೆಸಲಾಗಿತ್ತು. ವಿವಿಧೆಡೆ ಅಭಿಯಾನ ನಡೆಸಿ 12,500 ಡೋಸ್‍ಗಳನ್ನು ನೀಡಲಾಗಿತ್ತು. ಪ್ರಸ್ತುತ 3 ಸಾವಿರ ಡೋಸ್ ಲಸಿಕೆ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಉಚಿತ ವ್ಯಾಕ್ಸಿನೇಷನ್ ಡ್ರೈವ್ ನಡೆಸಲು ಉದ್ದೇ ಶಿಸಲಾಗಿದೆ. ಈಗಾಗಲೇ ಅಭಿಯಾನದ ಸಿದ್ಧತೆ ಆರಂಭಿಸಿದ್ದೇವೆ. ಅಭಿಯಾನದ ಯಶಸ್ವಿಗಾಗಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಕಾರ ಪಡೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಉಚಿತ ರೇಬಿಸ್ ಲಸಿಕೆ ಡೋಸ್ ನೀಡಲಾಗುತ್ತಿದೆ. ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರಗಳಲ್ಲಿ ಲಸಿಕೆ ಶಿಬಿರ ನಡೆಸಲು ಚಿಂತನೆ ನಡೆಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ(ಎಂಸಿಸಿ), ಶ್ವಾನ ಆರೈಕೆ ಕೇಂದ್ರ, ಪ್ರಾಣಿ ರಕ್ಷಕರ ನೆರವಿನೊಂದಿಗೆ ರೇಬಿಸ್ ಮುಕ್ತ ಮೈಸೂರು ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ನಾಯಿ ಕಚ್ಚಿದ ಕೂಡಲೆ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಆಕಸ್ಮಿಕವಾಗಿ ನಾಯಿ ದಾಳಿಗೆ ಒಳಗಾದಾಗ ಚಿಕಿತ್ಸೆ ಪಡೆದುಕೊಳ್ಳಲು ಹಲವರಿಗೆ ತಿಳಿದಿಲ್ಲ. ಇತರ ಪ್ರಾಣಿಗಳು ಹಾಗೂ ಮನುಷ್ಯರಿಗೆ ರೇಬಿಸ್ ಪೀಡಿತ ನಾಯಿಗಳು ಕಚ್ಚಿದರೆ, ರೇಬಿಸ್ ವೈರಸ್ ದೇಹವನ್ನು ಪ್ರವೇಶಿಸುತ್ತದೆ. ಬಳಿಕ ಜನರನ್ನು ರೇಬಿಸ್ ಕಾಡಲಾರಂಭಿಸುತ್ತದೆ. ಸೋಂಕಿಗೆ ತುತ್ತಾದ ಪ್ರಾಣಿಯಿಂದ ಚೆಲ್ಲುವ ಜೊಲ್ಲಿನಿಂದ ರೇಬಿಸ್ ವೈರಸ್ ಇತರ ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇದೆ. ರೇಬಿಸ್ ಅನ್ನು ತೊಡೆದುಹಾಕಲು ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದರು.

Translate »