ನೂತನ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ
ಮೈಸೂರು

ನೂತನ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

December 11, 2020

ನವದೆಹಲಿ,ಡಿ.10-ದೇಶದ ಪ್ರಜಾಪ್ರಭುತ್ವದ ಶಕ್ತಿಕೇಂದ್ರ, ನೂತನ, ಅತ್ಯಾಧುನಿಕ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರಮೋದಿ ಗುರುವಾರ ಮಧ್ಯಾಹ್ನ ಶಿಲಾನ್ಯಾಸ ನೆರವೇರಿಸಿದರು. ಶೃಂಗೇರಿ ಮಠದ ವಿದ್ವಾಂಸರು, ಪುರೋಹಿ ತರೇ ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನದ ನೇತೃತ್ವ ವನ್ನು ವಹಿಸಿದ್ದು ಕರ್ನಾಟಕ ಹೆಮ್ಮೆಪಡುವÀ ವಿಷಯವಾಗಿದೆ.

ಶೃಂಗೇರಿ ಶ್ರೀಗಳು ಮಠದ ವಿದ್ವಾಂಸರೂ, ಕಿರಿಯ ಶ್ರೀ ಗಳಾದ ವಿಧುಶೇಖರ ಭಾರತೀ ಶ್ರೀಗಳಿಗೆ ಪೂರ್ವಾಶ್ರಮ ದಲ್ಲಿ ಗುರುಗಳೂ ಆಗಿದ್ದ ತಂಗಿರಾಲ ಶಿವಕುಮಾರ ಶರ್ಮ ಅವರೊಂದಿಗೆ ಲಕ್ಷ್ಮಿನಾರಾಯಣ ಸೋಮಯಾಜಿ, ಗಣೇಶ ಸೋಮಯಾಜಿ ಹಾಗೂ ನಾಗರಾಜ ಅಡಿಗ ಅವರನ್ನು ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸು ವುದಕ್ಕಾಗಿ ದೆಹಲಿಗೆ ಕಳಿಸಿದ್ದರು.

ದೆಹಲಿಯಲ್ಲಿರುವ ಶೃಂಗೇರಿ ಶಾಖಾ ಮಠದ ಇಬ್ಬರು ಪುರೋಹಿತರೊಂದಿಗೆ ಕರ್ನಾಟಕ ದಿಂದ ತೆರಳಿದ್ದ ವಿದ್ವಾಂಸರು, ಪುರೋಹಿತರ ನೇತೃತ್ವದಲ್ಲಿ ವಿವಿಧ ಹೋಮ-ಹವನ ಗಳು, ವೇದಮಂತ್ರ ಪಠಣ ದೊಂದಿಗೆ ಶಿಲಾನ್ಯಾಸ ಕಾರ್ಯ ಸಾಂಗವಾಗಿ ನೆರವೇರಿದೆ.

ಶ್ರೀಮಠದಿಂದ ಶಂಕು-ನವರತ್ನ ಪೀಠ: ಸಂಸತ್ ಭವನದ ಶಿಲಾನ್ಯಾಸ ಹಿನ್ನೆಲೆ ಯಲ್ಲಿ ಶೃಂಗೇರಿ ಶ್ರೀಗಳು ಶಂಕು, ಮಾಣಿಕ್ಯ, ಹವಳ, ಮುತ್ತು, ಪುಷ್ಯರಾಗ ರತ್ನ, ವಜ್ರ, ಗೋಮೇಧಕ, ಪಚ್ಚೆ, ನೀಲಮಣಿಯಿಂದ ತಯಾರಾದ ನವರತ್ನ ಪೀಠವನ್ನು ಕಳಿಸಿ ಕೊಟ್ಟಿದ್ದು, ಬೆಳ್ಳಿಯ ಇಟ್ಟಿಗೆಯೊಂದಿಗೆ ಇದನ್ನೂ ಇರಿಸಲಾಗಿದೆ. ನೂತನ ಸಂಸತ್ ಭವನಕ್ಕೆ ಭೂಮಿ ಪೂಜೆ ಖಚಿತಗೊಳ್ಳುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಸಂಪೂರ್ಣ ಜವಾಬ್ದಾರಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ವಹಿಸಿ, ಶಾಸ್ತ್ರೋಕ್ತವಾಗಿ ಪೂಜೆ ನಡೆಯಬೇಕೆಂಬ ಕಳಕಳಿ ವ್ಯಕ್ತಪಡಿಸಿ ದ್ದರು. ಅದರಂತೆಯೇ ಪ್ರಹ್ಲಾದ್ ಜೋಷಿ, ಶೃಂಗೇರಿಯ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮಿಗಳ ಬಳಿ ಪ್ರಧಾನಿ ಮೋದಿ ಅವರ ಈ ಇಂಗಿತವನ್ನು ಹೇಳಿದ್ದರು. ಇದೇ ವೇಳೆ ಹಿಂದೂ, ಜೈನ, ಭೌದ್ಧ, ಸಿಖ್, ಕ್ರೈಸ್ತ, ಇಸ್ಲಾಂ, ಜುದಾಯಿ, ಪಾರ್ಸಿ ಸೇರಿದಂತೆ ದೇಶದಲ್ಲಿರುವ ಎಲ್ಲಾ ಧರ್ಮಗಳ ಗುರುಗಳು, ಧಾರ್ಮಿಕ ಮುಖಂಡರು, ಹಿರಿಯರು, ಮುಖ್ಯವಾಗಿ ಮಹಿಳೆಯರು ಸರ್ವಧರ್ಮಗಳ ಪ್ರಾರ್ಥನೆ ಸಲ್ಲಿಸಿದ್ದು, ಬಹಳ ವಿಶೇಷವಾಗಿತ್ತು. ಇದು ಇಡೀ ಕಾರ್ಯಕ್ರಮದ ಪರಿಶುದ್ಧತೆ ಹಾಗೂ ಪಾವಿತ್ರ್ಯವನ್ನು ಹೆಚ್ಚಿಸಿತು.

`ಆತ್ಮನಿರ್ಭರ್ ಭಾರತ್’ ಸೃಷ್ಟಿಗೆ ಸಾಕ್ಷಿಭೂತ
ನವದೆಹಲಿ, ಡಿ.10- ಭಾರತದ ಇತಿಹಾಸದಲ್ಲಿ ಇಂದು ಮಹತ್ವಪೂರ್ಣ ಐತಿಹಾಸಿಕ ದಿನ, ನೂತನ ಸಂಸತ್ತು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ದೇಶದ 130 ಕೋಟಿ ಭಾರತೀಯರೆಲ್ಲರೂ ಒಟ್ಟು ಸೇರಿ ಈ ನೂತನ ಸಂಸತ್ತು ಭವನ ನಿರ್ಮಾಣ ಮಾಡಲಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನೂತನ ಸಂಸತ್ತು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಈ ಐತಿಹಾಸಿಕ ದಿನವನ್ನು ಇಂದು ಕಣ್ತುಂಬಿಕೊಳ್ಳುತ್ತಿರುವ ಈ ದೇಶದ 130 ಕೋಟಿ ಭಾರತೀಯರಿಗೆ ಇಂದು ಬಹಳ ಹೆಮ್ಮೆಯ ದಿನ ಎಂದರು. ಹಳೆಯ ಮತ್ತು ಹೊಸದರ ಸಮ್ಮಿಲನ, ಪರಸ್ಪರ ಕೂಡುವಿಕೆಗೆ ನೂತನ ಸಂಸತ್ತು ಭವನ ಒಂದು ಉದಾಹರಣೆ. ಸಮಯ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಬದಲಾವಣೆಯ ಗುರುತು ಈ ಸಂಸತ್ತು ಭವನ. ಹಳೆಯ ಸಂಸತ್ತು ಕಟ್ಟಡ ಸ್ವಾತಂತ್ರ್ಯ ನಂತರ ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಹೊಸ ಭವನ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ದೇಶದ ಅಗತ್ಯಗಳನ್ನು ಈಡೇರಿಸುವ ಕೆಲಸ ಹಳೆ ಕಟ್ಟಡದಲ್ಲಿ ಆಗಿದೆ. ಇನ್ನು ಹೊಸ ಕಟ್ಟಡದಲ್ಲಿ 21ನೇ ಶತಮಾನದಲ್ಲಿ ಭಾರತೀಯರ ಆಸೆ, ಆಕಾಂಕ್ಷೆಗಳು ಸಾಕಾರಗೊಳ್ಳಲಿವೆ ಎಂದರು.

ಪ್ರಜಾಪ್ರಭುತ್ವ ಭಾರತದ ಸಂಸ್ಕೃತಿ. ಪ್ರಜಾಪ್ರಭುತ್ವವೆಂದರೆ ಜೀವನದ ಮೌಲ್ಯ, ಜೀವನ ವಿಧಾನ ಮತ್ತು ದೇಶದ ನಾಗರಿಕರ ಜೀವನದ ಆತ್ಮವಾಗಿದೆ. ಶತಮಾನಗಳ ಅನುಭವದ ಆಧಾರದ ಮೇಲೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನನ್ನ ಜೀವನದ ಅಮೂಲ್ಯ ಗಳಿಗೆ: 2014ರಲ್ಲಿ ನಾನು ಮೊದಲ ಬಾರಿಗೆ ಸಂಸದನಾಗಿ ದೆಹಲಿಯ ಸಂಸತ್ ಭವನಕ್ಕೆ ಕಾಲಿಟ್ಟ ಗಳಿಗೆಯನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಅದು ಬಹಳ ಅದ್ಭುತ ಗಳಿಗೆಯಾಗಿತ್ತು. ಪ್ರಜಾಪ್ರಭುತ್ವದ ದೇವಸ್ಥಾನವಾದ ಸಂಸತ್ತು ಭವನಕ್ಕೆ ಕಾಲಿಡುವಾಗ ಶಿರ ಬಗ್ಗಿಸಿ ನಮಸ್ಕರಿಸಿ ಒಳಗೆ ಕಾಲಿಟ್ಟೆ ಎಂದು ಪ್ರಧಾನಿ ನೆನಪು ಮಾಡಿಕೊಂಡರು.

ಪರಮೋಚ್ಛ ಧ್ಯೇಯ: `ದೇಶ ಮೊದಲು’ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಯೇ ಪ್ರತಿಯೊಬ್ಬ ದೇಶವಾಸಿಯ ಪರಮೋಚ್ಛ ಧ್ಯೇಯವಾಗಿರಬೇಕು ಎಂದು ಕರೆ ನೀಡಿದರು. ನಮ್ಮ ನಿರ್ಣಯಗಳು ರಾಷ್ಟ್ರವನ್ನು ಬಲಿಷ್ಠಗೊಳಿಸಬೇಕು ಮತ್ತು ಅದೇ ಪ್ರಮಾಣದಲ್ಲಿ ಅಳೆಯಬೇಕು, ರಾಷ್ಟ್ರದ ಕಲ್ಯಾಣ ಪ್ರತಿಯೊಬ್ಬರ ಮೊದಲ ಆದ್ಯತೆಯಾಗಿರಬೇಕು. ಮುಂದಿನ 25-26 ವರ್ಷಗಳಲ್ಲಿ ನಮ್ಮ ಪ್ರಯತ್ನಗಳು ಸ್ವಾತಂತ್ರ್ಯಾ ನಂತರದ 100 ವರ್ಷಗಳಲ್ಲಿ(2047ರಲ್ಲಿ) ಭಾರತವನ್ನು ಹೇಗೆ ನೋಡಬಯಸುತ್ತೇವೆ ಎಂದಾಗಿರಬೇಕು ಎಂದು ಗಮನ ಸೆಳೆದರು.

`ದೇಶದ ಕಾಳಜಿಯು ನಮ್ಮ ಸ್ವಂತ ಕಾಳಜಿಗಿಂತ ಹೆಚ್ಚಾಗಿರುತ್ತದೆ. ದೇಶದ ಏಕತೆ ಹಾಗೂ ಸಮಗ್ರತೆಗಿಂತ ಬೇರೆ ಯಾವುದು ನಮಗೆ ಮುಖ್ಯವಾಗುವುದಿಲ್ಲ. ನಮಗೆ ದೇಶದ ಸಂವಿಧಾನದ ಘನತೆ ಹಾಗೂ ನೆರವೇರಿಕೆಯು ಜೀವನದ ದೊಡ್ಡ ಗುರಿಯಾಗಿದೆ’ ಎಂದವರು ಕರೆ ನೀಡಿದರು. ಭಿನ್ನಾಭಿಪ್ರಾಯಗಳಿದ್ದರೂ ಉತ್ತಮ ಆಡಳಿತದ ಜೊತೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಮಸ್ಯೆಯನ್ನು ಬಗೆಹರಿಸುವ ಸಾಧನವಾಗಿದೆ ಎಂದು ನರೇಂದ್ರ ಮೋದಿ ಮೆಲುಕು ಹಾಕಿದರು. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ-ಹರಿಯಾಣ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿ ಮೋದಿ ಪರೋಕ್ಷವಾಗಿ ಈ ಮಾತುಗಳನ್ನು ಆಡಿದರು. ‘ವಿಭಿನ್ನ ಅಭಿಪ್ರಾಯ, ವಿಭಿನ್ನ ದೃಷ್ಟಿಕೋನಗಳಿರಬಹುದು. ಅವುಗಳು ಶಕ್ತಿಶಾಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿ ಸುತ್ತದೆ. ಯಾವಾಗಲೂ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ ಎಂದಿಗೂ ಸಂಪರ್ಕ ಕಡಿತಗೊಂಡಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಈ ಗುರಿಯೊಂದಿಗೆ ಮುಂದೆ ಸಾಗಿದೆ’ ಎಂದು ವಿವರಿಸಿದರು. ‘ರಾಜಕಾರಣ ಹಾಗೂ ನೀತಿಗಳ ಬಗ್ಗೆ ವ್ಯತ್ಯಾಸಗಳಿರಬಹುದು. ಆದರೆ ನಮ್ಮ ಸಾರ್ವಜನಿಕರ ಸೇವೆಯಲ್ಲಿ ಈ ಮಹೋನ್ನತ ಗುರಿಯಲ್ಲಿ ಯಾವುದೇ ವ್ಯತ್ಯಾಸಗಳು ಇರಬಾರದು’ ಎಂದು ಅಭಿಪ್ರಾಯಪಟ್ಟರು.

 

 

Translate »