ಮೈಸೂರು, ಡಿ. 10(ಆರ್‍ಕೆ)- ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಮೈಸೂರು-ಮಂಗಳೂರು ನಡುವಿನ ವಿಮಾನ ಹಾರಾಟ ನಾಳೆ (ಡಿ.11) ಯಿಂದ ಆರಂಭವಾಗಲಿದೆ. ವಾರದಲ್ಲಿ 4 ದಿನ ಅರಮನೆ ನಗರಿ ಮೈಸೂರು-ಕರಾವಳಿ ನಗರಿ ಮಂಗಳೂರು ನಡುವೆ ವಿಮಾನ ಹಾರಾ ಟಕ್ಕೆ ಮೆ|| ಅಲಯನ್ಸ್ ಏರ್ ಸಂಸ್ಥೆಯು ಮುಂದೆ ಬಂದಿದ್ದು, ಶುಕ್ರವಾರ ಬೆಳಗ್ಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಲಿದ್ದಾರೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ ತಿಳಿಸಿದ್ದಾರೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನು ವಾರಗಳಂದು ಅಲಯನ್ಸ್ ಏರ್ ವಿಮಾನ ಸೇವೆ ಒದಗಿಸಲಿದೆ.
ಆ ದಿನಗಳಂದು ಬೆಳಿಗ್ಗೆ 11.20 ಗಂಟೆಗೆ ಮೈಸೂರಿನಿಂದ ಹೊರಡುವ ವಿಮಾನವು ಮಧ್ಯಾಹ್ನ 12.30 ಗಂಟೆಗೆ ಮಂಗಳೂರು ತಲುಪಲಿದೆ. ಹಾಗೆಯೇ ಮಧ್ಯಾಹ್ನ 12-55 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.55 ಗಂಟೆಗೆ ಮೈಸೂರು ತಲುಪಲಿದೆ ಎಂದು ಅವರು ತಿಳಿಸಿದರು.
ಮೈಸೂರು-ಮಂಗಳೂರು ನಗರಗಳ ನಡುವೆ ವಿಮಾನ ಹಾರಾಟ ಸೇವೆ ಬೇಡಿಕೆ ಹಲವು ತಿಂಗಳ ಹಿಂದಿನಿಂದಲೂ ಇತ್ತಾದರೂ, ಈ ನಡುವೆ ಕೋವಿಡ್ ನಿರ್ಬಂಧವಿದ್ದ ಕಾರಣ ಸಾಕಾರಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಏರ್ ಅಲಯನ್ಸ್ ಸೇವೆ ಒದಗಿಸಲು ಮುಂದೆ ಬಂದಿದೆ ಎಂದು ಮಂಜುನಾಥ ಹೇಳಿದರು.
ಈಗಾಗಲೇ ಮೈಸೂರಿನಿಂದ ಬೆಂಗಳೂರು, ಗೋವಾ, ಕೊಚ್ಚಿನ್, ಹೈದರಾಬಾದ್ ನಗರಗಳಿಗೆ ಮೆ|| ಅಲಯನ್ಸ್ ಏರ್ ಹಾಗೂ ಚೆನ್ನೈ, ಬೆಳಗಾವಿ ನಗರಗಳಿಗೆ ಮೆ|| ಟ್ರೂಜೆಟ್ ಏರ್‍ಲೈನ್ ಸಂಸ್ಥೆಗಳು ಮೈಸೂರಿಂದ ವಿಮಾನ ಹಾರಾಟ ಸೇವೆ ಒದಗಿಸುತ್ತಿದ್ದು, ಇದೀಗ ಮೈಸೂರು ಮತ್ತು ಮಂಗಳೂರು ನಡುವೆ ವಿಮಾನ ಹಾರಾಟ ಶುಕ್ರವಾರದಿಂದ ಆರಂಭವಾಗಲಿದೆ ಎಂದರು. ವಾರದ ಎಲ್ಲಾ ದಿನಗಳಲ್ಲಿ ಮೈಸೂರಿನಿಂದ ಹೈದರಾಬಾದ್, ಗೋವಾ, ಚೆನ್ನೈ, ಬೆಳಗಾವಿ ನಗರಗಳಿಗೆ, ವಾರದಲ್ಲಿ ನಾಲ್ಕು ದಿನ (ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ) ಮೈಸೂರಿನಿಂದ ಬೆಂಗಳೂರು, ಕೊಚ್ಚಿನ್, ಮಂಗ ಳೂರು ನಗರಗಳಿಗೆ, ವಾರದಲ್ಲಿ 2 ದಿನ(ಸೋಮವಾರ, ಗುರುವಾರ) ಮೈಸೂರಿಂದ ಬೆಂಗಳೂರು, ಕೊಚ್ಚಿನ್ ನಗರಗಳಿಗೆ, ವಾರದಲ್ಲಿ 1 ದಿನ(ಮಂಗಳವಾರ) ಮೈಸೂರು- ಕೊಚಿನ್ ಮತ್ತು ಬೆಂಗಳೂರು ನಡುವೆ ವಿಮಾನ ಹಾರಾಟ ಸೌಲಭ್ಯವಿದೆ ಎಂದರು.