ತೀವ್ರ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು
ಮೈಸೂರು

ತೀವ್ರ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು

October 5, 2018

ಮೈಸೂರು: ತೀವ್ರ ಹೃದಯಾಘಾತದಿಂದ 27 ವರ್ಷದ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವ ಹಿಸುತ್ತಿದ್ದ ನಾಗೇಂದ್ರ ಸಾವನ್ನಪ್ಪಿದವರು. ಮೂಲತಃ ಕೆ.ಆರ್.ನಗರ ತಾಲೂಕು ಚಿಕ್ಕ ಭೇರ್ಯ ಗ್ರಾಮದ ಜವರನಾಯ್ಕ ಅವರ ಮಗನಾದ ನಾಗೇಂದ್ರ ನಾಲ್ಕು ವರ್ಷಗಳ ಹಿಂದಷ್ಟೇ ಪೊಲೀಸ್ ಇಲಾಖೆಗೆ ಸೇರಿದ್ದರು.

ಕುವೆಂಪುನಗರ ಠಾಣೆಯಲ್ಲಿದ್ದ ಅವರು ಬುಧವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯ ಮುಗಿಸಿ ಇಂದು ಬೆಳಿಗ್ಗೆ ಠಾಣೆಯಿಂದ ಹೊರಡುತ್ತಿದ್ದಂತೆಯೇ ಎದೆ ನೋವು ಕಾಣಿಸಿ ಕೊಂಡಿತು. ತಕ್ಷಣ ಸಿಬ್ಬಂದಿ ಅವರನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೃದಯಾಘಾತವಾಗಿದೆ ಎಂದು ತಿಳಿದ ವೈದ್ಯರು ಕೆಆರ್‍ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ನಾಗೇಂದ್ರ ಕೊನೆಯುಸಿ ರೆಳೆದರು ಎಂದು ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಿ, ಇನ್ಸ್‍ಪೆಕ್ಟರ್ ಸಮೇತ ಸಿಬ್ಬಂದಿ ಅವರ ಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆ ನಡೆಸಲು ನೆರವಾದರು.

Translate »