ವಾಹನ ಎಕ್ಸ್‍ಚೇಂಜ್ ನೆಪದಲ್ಲಿ ಕಾರಿನೊಂದಿಗೆ ಪರಾರಿಯಾದ ಭೂಪ!
ಮೈಸೂರು

ವಾಹನ ಎಕ್ಸ್‍ಚೇಂಜ್ ನೆಪದಲ್ಲಿ ಕಾರಿನೊಂದಿಗೆ ಪರಾರಿಯಾದ ಭೂಪ!

October 23, 2018

ಪೊಲೀಸರಲ್ಲಿ ಪ್ರಕರಣ ದಾಖಲು
ಮೈಸೂರು: ಓಎಲ್‍ಎಕ್ಸ್ ಅಂತರ್ಜಾಲ ಮಾರುಕಟ್ಟೆಯಲ್ಲಿ ಪರಿಚಯವಾದ ವ್ಯಕ್ತಿಯೋರ್ವ ವಾಹನಗಳ ಬದಲಾವಣೆ(ಎಕ್ಸ್‍ಚೇಂಜ್) ನೆಪದಲ್ಲಿ ಕಾರಿನೊಂದಿಗೆ ಪರಾರಿಯಾಗಿರುವುದಾಗಿ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಎನ್.ಆರ್.ಮೊಹಲ್ಲಾದ ಮೆಹಬೂಬ್ ಖಾನ್ ಕಾರು ಕಳೆದು ಕೊಂಡವರಾಗಿದ್ದು, ಈ ಸಂಬಂಧ ಅರ್ಜುನ್ ಎಂಬುವರ ವಿರುದ್ಧ ವಂಚನೆ ದೂರು ನೀಡಿದ್ದಾರೆ. ಮೆಹಬೂಬ್‍ಖಾನ್ ಅವರು ತಮ್ಮ ಸ್ಕೋಡಾ ಅಕ್ಟೋವಿಯಾ ಕಾರನ್ನು (ಕೆಎ-01, ಡಿ-1227) ಮಾರಾಟ ಮಾಡಲು 15 ದಿನಗಳ ಹಿಂದೆ ಓಎಲ್‍ಎಕ್ಸ್‍ನಲ್ಲಿ ಪ್ರಕಟಿಸಿದ್ದರು. ಹಾಗೆಯೇ ರಾಯಲ್ ಎನ್‍ಫೀಲ್ಡ್(ಕೆಎ-13, ಇಡಿ-0045) ಮಾರಾಟಕ್ಕಿದೆ ಎಂದು ಪ್ರಕಟಿಸಿದ್ದ ಅರ್ಜುನ್ ಎಂಬುವರು ಅ.10ರಂದು ಮೆಹಬೂಬ್‍ಖಾನ್‍ಗೆ ಕರೆ ಮಾಡಿದ್ದು, ವಾಹನಗಳನ್ನು ಎಕ್ಸ್‍ಚೇಂಜ್ ಮಾಡಿಕೊಳ್ಳಲು ಪರಸ್ಪರ ಒಪ್ಪಿದ್ದರು.

ಬಳಿಕ ಅಂದು ಮಧ್ಯಾಹ್ನ ನಾಯ್ಡುನಗರದ ಸಂಬಂಧಿಕರ ಮನೆಯಲ್ಲಿದ್ದ ಮೆಹಬೂಬ್‍ಖಾನ್ ಅವರನ್ನು ಭೇಟಿ ಮಾಡಿದ ಅರ್ಜುನ್, ಒಂದು ಸುತ್ತು ಬೈಕ್ ಓಡಿಸಿ, ಪರಿಶೀಲಿಸಿಕೊಳ್ಳುವಂತೆ ತಿಳಿಸಿ, ನಾನೂ ಟ್ರಯಲ್ ನೋಡುತ್ತೇನೆಂದು ಕಾರು ತೆಗೆದುಕೊಂಡು ಹೋಗಿದ್ದಾರೆ. ಬೈಕ್ ಟ್ರಯಲ್‍ಗೆ ಹೋಗಿದ್ದ ಮೆಹಬೂಬ್‍ಖಾನ್, ರಿಂಗ್ ರಸ್ತೆಗೆ ಹೋಗಿ ವಾಪಸ್ಸು ಬಂದು ನಾಯ್ಡು ನಗರ ಬಸ್ ನಿಲ್ದಾಣದ ಬಳಿ ಅರ್ಜುನ್ ಬರುವಿಕೆಗೆ ಕಾದಿದ್ದರು. ಆದರೆ ಸುಮಾರು ಅರ್ಧ ಗಂಟೆಯಾದರೂ ಅರ್ಜುನ್ ಬಾರದ ಕಾರಣ, ಈ ಹಿಂದೆ ಕರೆ ಮಾಡಿದ್ದ ನಂಬರ್‍ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಆದರೂ 5 ದಿನಗಳ ಕಾಲ ಕಾದರೂ ಅರ್ಜುನ್ ಪತ್ತೆಯಾಗದ ಹಿನ್ನೆಲೆಯಲ್ಲಿ ತಮ್ಮ ಬಳಿಯಿದ್ದ ಬೈಕ್ ಅನ್ನು ಪೊಲೀಸರಿಗೊಪ್ಪಿಸಿ, ದೂರು ನೀಡಿದ್ದಾರೆ.

Translate »