ಮೈಸೂರು, ಅ.6(ಪಿಎಂ)- ಕಳೆದ ಕೌನ್ಸಿಲ್ ಸಭೆಯಲ್ಲಿ ಮೇಯರ್ ಘೋಷಣೆ ಮಾಡಿ ರುವಂತೆ ಪ್ರತಿ ವಾರ್ಡ್‍ಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರ ಒಕ್ಕೊ ರಲ ಒತ್ತಾಯ ಹೊರತುಪಡಿಸಿದರೆ ಮಂಗಳ ವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ನಗರದ ಅಭಿವೃದ್ಧಿ, ಕುಂದು-ಕೊರತೆ ನಿವಾರಣೆ ಹಾಗೂ ಕಾರ್ಯಸೂಚಿಗೆ ಸಂಬಂಧಿಸಿದ ಚರ್ಚೆ ಮೊದಲ ಅವಧಿಯಲ್ಲಿ ನಡೆಯಲೇ ಇಲ್ಲ.
ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ವಾರ್ಡ್‍ಗಳಿಗೆ ತಲಾ 50 ಲಕ್ಷ ರೂ. ಅನುದಾನ ನೀಡುವುದು ಕೊರೊನಾ ಸನ್ನಿವೇಶದಲ್ಲಿ ಕಷ್ಟಸಾಧ್ಯ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅಸಹಾ ಯಕತೆ ವ್ಯಕ್ತಪಡಿಸಿದರು.
ಉಳಿದಂತೆ ನಗರದ ಕೊರೊನಾ ಪರಿಸ್ಥಿತಿ ಹಾಗೂ ಉತ್ತರ ಪ್ರದೇಶದ ಯುವತಿ ಮೇಲಿನ ಅತ್ಯಾಚಾರ ಕುರಿತಂತೆ ಆಡಳಿತ ಪಕ್ಷಗಳು (ಮೈತ್ರಿ) ಹಾಗೂ ವಿರೋಧ ಪಕ್ಷದ ನಡುವೆ ಮಾತಿನ ಜಟಾಪಟಿಗೇ ಬಹುತೇಕ ಸಭೆ ಸೀಮಿತವಾಯಿತು. ಪ್ರತಿ ವಾರ್ಡ್‍ಗೆ 50 ಲಕ್ಷ ರೂ. ಅನುದಾನ ನೀಡುವ ಸಂಬಂಧ ಸಭೆಯ ಕಾರ್ಯಸೂಚಿಯಲ್ಲಿ ವಿಷಯ ವಿಲ್ಲ ಎಂದು ಜೆಡಿಎಸ್ ಸದಸ್ಯೆ ಪ್ರೇಮ ಶಂಕರೇಗೌಡ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಸ್ನೀಂ, ಪ್ರತಿ ವಾರ್ಡ್‍ಗೆ ತಲಾ 50 ಲಕ್ಷ ರೂ. ಅನು ದಾನ ನೀಡಲು ಘೋಷಣೆ ಮಾಡಿ, ಅಂದಾಜು ಪಟ್ಟಿ ಸಿದ್ಧಪಡಿಸಲೂ ತಿಳಿಸಿದ್ದೆ. ಆದರೆ ಆಯುಕ್ತರು ಇದಕ್ಕೆ ತಡೆ ನೀಡಿದ್ದಾರೆ. ಈ ಸಂಬಂಧ ಆಯುಕ್ತರು ಸಭೆಗೆ ಸ್ಪಷ್ಟನೆ ನೀಡಬೇಕು ಎಂದು ಕುರ್ಚಿಯಿಂದ ಎದ್ದು ನಿಂತು ಏರುದನಿಯಲ್ಲಿ ಮಾತನಾಡುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದರು. ಸದಸ್ಯರು ಮೇಯರ್ ಅವರನ್ನು ಸಮಾಧಾನ ಪಡಿಸಿ ಕುಳಿಸಿದ ಬಳಿಕ ಆಯುಕ್ತರು ಮಾತನಾಡಿ, ವಾರ್ಡ್‍ಗಳಿಗೆ ತಲಾ 50 ಲಕ್ಷ ರೂ. ನೀಡಬೇಕೆಂದರೆ ಅಂದಾಜು ಮೂವತ್ತೇರಡೂವರೆ ಕೋಟಿ ರೂ. ಹಣ ಬೇಕಾಗು ತ್ತದೆ. ಆದರೆ ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಪಾಲಿಕೆಯಲ್ಲಿ ಹಣಕಾಸಿನ ಕೊರತೆ ಇದೆ. ಹೀಗಾಗಿ ಇದು ಕಷ್ಟಸಾಧ್ಯ ಎಂದು ಅನುದಾನ ಬಿಡುಗಡೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್, ವಾರ್ಡಿಗಳಿಗೆ ತಲಾ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿರುವುದು ಕಳೆದ ಕೌನ್ಸಿಲ್‍ಯಲ್ಲಿ ದಾಖಲಾಗಿದೆ. ಹೀಗಾಗಿ ಇದು ಸಭಾ ನಡಾವಳಿಯಲ್ಲಿ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಿದರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಮೇಯರ್ ಹಾಗೂ ಆಯುಕ್ತರ ಮೊದಲೇ ಚರ್ಚಿಸಿ ಆ ಬಳಿಕ ಘೋಷಣೆ ಮಾಡಬೇಕಿತ್ತು. ಆದರೆ ಈಗ ಹಾಗೆ ಆಗಿಲ್ಲ. ಪಾಲಿಕೆ ಹಣಕಾಸು ಪರಿಸ್ಥಿತಿ ಸಂಬಂಧ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸುತ್ತಿದ್ದಂತೆ ಸಭೆ ಮತ್ತೊಂದು ವಿಚಾರಕ್ಕೆ ತಿರುಗಿಕೊಂಡಿತು.
ಕೆಟ್ಟ ಸರ್ಕಾರ ಎಂಬ ವಾಗ್ದಾಳಿಗೆ ಬಿಜೆಪಿ ಪ್ರತಿ ದಾಳಿ: ಕೊರೊನಾ ಖರ್ಚು ವೆಚ್ಚದ ಜವಾ ಬ್ದಾರಿಯನ್ನು ಬೆಂಗಳೂರಿನಲ್ಲಿ ಸರ್ಕಾರ ಬಿಬಿಎಂಪಿಗೆ ನೀಡಿದೆ. ಅಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬಡವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ. ಆದರೆ ಮೈಸೂರಿನಲ್ಲಿ ಸೋಂಕಿತರು ಹಾಗೂ ಮೃತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಕೆಟ್ಟ ಸರ್ಕಾರ ಎಂದು ಹಿರಿಯ ಪಾಲಿಕೆ ಸದಸ್ಯರೂ ಆದ ಮಾಜಿ ಮೇಯರ್ ಆರೀಫ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು. ಆರೀಫ್ ಹುಸೇನ್ ಅವರ ಹೇಳಿಕೆಗೆ ಬಿಜೆಪಿಯ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅಲ್ಲದೇ `ಕೆಟ್ಟ ಸರ್ಕಾರ’ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಬೇಕು ಎಂದು ವಿಪಕ್ಷ ನಾಯಕ ಎಂ.ಯು.ಸುಬ್ಬಯ್ಯ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆಗಿಳಿದರು.
ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಯಿತು. ಆಡಳಿತ ಪಕ್ಷದ (ಕಾಂಗ್ರೆಸ್-ಜೆಡಿಎಸ್) ಸದಸ್ಯರು ಹಾಗೂ ಬಿಜೆಪಿ ಸದಸ್ಯರು ಮಾತಿನ ಚಕಮಕಿ ವ್ಯಾಪಕವಾಗುತ್ತಿದ್ದಂತೆ ಮೇಯರ್ ತಸ್ನೀಂ ಸಭೆಗೆ 10 ನಿಮಿಷ ವಿರಾಮ ಘೋಷಿಸಿದರು.
1 ತಾಸು ವಿರಾಮ: ಸುಮಾರು 12.20ರಲ್ಲಿ ಮೇಯರ್ ಸಭೆಗೆ 10 ನಿಮಿಷ ವಿರಾಮ ಘೋಷಿಸಿದರು. ಆದರೆ ಸಭೆ ಮತ್ತೆ 1.30ಕ್ಕೆ ಆರಂಭವಾಗುವ ಮೂಲಕ ಸುಮಾರು 1 ತಾಸು ವಿರಾಮ ತೆಗೆದುಕೊಳ್ಳಲಾಯಿತು. ಸಭೆ ಪುನಾರಂಭ ಆಗುತ್ತಿದ್ದಂತೆ ಮತ್ತೆ ಬಿಜೆಪಿ ಸದಸ್ಯರು ಎಂ.ಯು.ಸುಬ್ಬಯ್ಯ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆಸಿ, ಕ್ಷಮೆ ಕೇಳಲು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಆರೀಫ್ ಹುಸೇನ್, ನಾನು ವಾಸ್ತವಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹೇಳಿದ್ದೇನೆ. ಮೈಸೂರಿನಲ್ಲಿ ಕೊರೊನಾ ಚಿಕಿತ್ಸೆ ಬಡವರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು. ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಅಯೂಬ್‍ಖಾನ್, ಬಿಜೆಪಿ ಸದಸ್ಯರು ಇದೇ ಪ್ರತಿಭಟನೆಯನ್ನು ಕೊರೊನಾ ರೋಗಿಗಳ ಪರವಾಗಿ ಮಾಡಿದ್ದರೆ ಒಳ್ಳೆಯದಿತ್ತು ಎಂದು ಕಾಲೆಳೆದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಬಿಜೆಪಿ ಸದಸ್ಯರು ತಮ್ಮ ಸ್ಥಳದಲ್ಲಿ ಕುಳಿತು ಚರ್ಚೆಗೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರತಿಭಟನೆ ನಡೆಸುವ ಮೂಲಕ ಚರ್ಚೆಗೆ ಅವಕಾಶ ನೀಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಸದಸ್ಯೆ ಶೋಭಾ ಸುನೀಲ್, ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಅತ್ಯಾಚಾರವಾದರೂ ಕ್ರಮ ಕೈಗೊಳ್ಳದ ಸರ್ಕಾರ ನಿಮ್ಮದು ಎಂದು ಆಕ್ರೋಶಭರಿತವಾಗಿ ಕಿಡಿಕಾರಿದರು.
ಇದು ಕೆಟ್ಟ ಸರ್ಕಾರ. 100 ಸಾರಿ ಹೇಳುತ್ತೇನೆ: ಬಿಜೆಪಿ ಸದಸ್ಯರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೇಯರ್ ತಸ್ನೀಂ, ಇಲ್ಲಿ ಸರ್ಕಾರ ಮಧ್ಯೆ ತರುವುದು ಬೇಡ. ಕೆಟ್ಟ ಸರ್ಕಾರ ಎಂಬ ಪದ ಬಳಸಬಾರದು. ಸಭೆ ನಡೆಯಲು ಅವಕಾಶ ಮಾಡಿಕೊಡಿ ಎಂದು ಆರೀಫ್ ಹುಸೇನ್ ಅವರಲ್ಲಿ ಹೇಳುವ ಮೂಲಕ ಪರೋಕ್ಷವಾಗಿ ಕ್ಷಮೆ ಕೇಳಲು ಒತ್ತಾಯಿಸಿದರು. ಆದರೆ ಇದಕ್ಕೆ ನಿರಾಕರಿಸಿದ ಆರೀಫ್ ಹುಸೇನ್, 100 ಸಾರಿ ಹೇಳುತ್ತೇನೆ. ಇದೊಂದು ಕೆಟ್ಟ ಸರ್ಕಾರ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಗಲಾಟೆ-ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಮಧ್ಯಾಹ್ನ 2.15ರ ವೇಳೆಯಲ್ಲಿ ಸಭೆಯನ್ನು ಮೇಯರ್ ಅವರು ಮಧ್ಯಾಹ್ನ 3.30ಕ್ಕೆ ಮುಂದೂಡಿದರು.
ಮಧ್ಯಾಹ್ನ 3.30ರ ನಂತರ ಸಭೆ ಮುಂದುವರೆದಾಗಲೂ `ಕೆಟ್ಟ ಸರ್ಕಾರ’ ಪದ ಬಳಕೆ ವಿಚಾರದಲ್ಲಿ ಮತ್ತೆ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸರ ಮುಂದು ವರೆಯಿತು. ಈ ವೇಳೆ ಆರೀಫ್ ಹುಸೇನ್ `ನಿಮ್ಮ ಗೂಂಡಾಗಿರಿ ವರ್ತನೆಗೆ ನಾವು ಜಗ್ಗುವುದಿಲ್ಲ’ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತಷ್ಟು ಕೆರಳಿದರು. ಈ ವಿಷಯದಲ್ಲೂ ವಾಗ್ವಾದ ನಡೆದು ಕೊನೆಗೆ `ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಆರೀಫ್ ಹುಸೇನ್ ಹೇಳಿದರು. ಆಗಲೂ ಕೇಳಿಸಿಲ್ಲ ಎಂದು ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದಾಗ, ಮೇಯರ್ ತಸ್ನೀಂ ಮಾತನಾಡಿ, ಅವರು ಕ್ಷಮೆ ಕೇಳಿದ್ದಾರೆ. ಮತ್ತೆ ಮತ್ತೆ ಅದನ್ನೇ ಮುಂದುವರೆಸುವುದು ಬೇಡ ಎಂದು ಸಮಾಧಾನಪಡಿಸಿದರು. ಈ ವೇಳೆ ವಿಪಕ್ಷ ನಾಯಕ ಎಂ.ಯು.ಸುಬ್ಬಯ್ಯ ಮಾತನಾಡಿ, ಆರೀಫ್ ಹುಸೇನ್ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ಚರ್ಚೆಗೆ ಅವಕಾಶ ನೀಡಬೇಡಿ ಎಂದು ಮೇಯರ್ ಅವರಲ್ಲಿ ಮನವಿ ಮಾಡಿದರು. ಬಳಿಕ ಸುಮಾರು 4.15ರ ವೇಳೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಉಪಮೇಯರ್ ಸಿ.ಶ್ರೀಧರ್, ಹೆಚ್ಚುವರಿ ಆಯುಕ್ತ ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು.