ದಂಡ ವಿಧಿಸುವ ಮೊದಲು ಜನರಿಗೆ ಮಾಸ್ಕ್ ಕೊಡಿ
ಮೈಸೂರು

ದಂಡ ವಿಧಿಸುವ ಮೊದಲು ಜನರಿಗೆ ಮಾಸ್ಕ್ ಕೊಡಿ

October 7, 2020

ಮೈಸೂರು,ಅ.6(ಆರ್‍ಕೆ)-ದಂಡ ವಿಧಿಸುವ ಮೊದಲು ಜನರಿಗೆ ತಲಾ 3 ಎನ್-95 ಮಾಸ್ಕ್ ಕೊಡುವಂತೆ ಜಿಲ್ಲಾ ಪಂಚಾಯ್ತಿ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ಅಧ್ಯಕ್ಷೆ ಪರಿಮಳಾ ಶ್ಯಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮಾಸ್ಕ್ ಧರಿಸ ದವರಿಗೆ ನಗರ ಪ್ರದೇಶದಲ್ಲಿ 1,000 ರೂ. ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ. ದಂಡ ವಿಧಿಸಿ ನಿರ್ದಾ ಕ್ಷಿಣ್ಯವಾಗಿ ಹಣ ವಸೂಲಿ ಮಾಡುತ್ತಿರುವುದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೊರೊನಾ ವೈರಸ್ ಸೋಂಕು ಶುರುವಾಗಿ ಏಳೆಂಟು ತಿಂಗಳು ಕಳೆಯಿತು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್‍ನಿಂದ ಸ್ವಚ್ಛಪಡಿಸಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದೆಲ್ಲಾ ಸರ್ಕಾರ ಹೇಳುತ್ತಿದೆ ಯಲ್ಲಾ ಯಾರಿಗಾದರೂ ಒಬ್ಬರಿಗೆ ಮಾಸ್ಕ್ ಅಥವಾ ಸ್ಯಾನಿ ಟೈಸರ್ ಕೊಟ್ಟಿದ್ದೀರಾ ಎಂದು ಪುಷ್ಪಾ ಅಮರ್ ನಾಥ್ ಪ್ರಶ್ನಿಸಿದರು. ಒಂದೇ ಒಂದು ಮಾಸ್ಕ್ ಕೊಡದೇ ಏಕಾಏಕಿ 1,000 ರೂ. ದಂಡ ವಿಧಿಸುವುದು ಮಹಾಪರಾಧ. ನನ್ನ ಕ್ಷೇತ್ರದಲ್ಲಿ 43,000 ಜನರಿದ್ದಾರೆ. ಅದರಂತೆ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರದ ಜನರಿಗೂ ತಲಾ 3ರಂತೆ ಎನ್-95 ಮಾಸ್ಕ್‍ಗಳನ್ನು ವಿತರಿಸಿ, ಆಗಲೂ ಧರಿಸದಿದ್ದರೆ ದಂಡ ವಸೂಲಿ ಮಾಡಿ ಎಂದು ಅವರು ಒತ್ತಾಯಿಸಿದರು.

ಬೀರಿಹುಂಡಿ ಬಸವಣ್ಣ, ಅಚ್ಯುತಾನಂದ, ಚಂದ್ರಿಕಾ ಸುರೇಶ್ ಸೇರಿದಂತೆ ಹಲವು ಸದಸ್ಯರೂ ಜನರಿಗೆ ಪಂಚಾಯ್ತಿ ಮಟ್ಟದಲ್ಲಿ ಮಾಸ್ಕ್ ವಿತರಿಸಿ ಕೊರೊನಾ ವೈರಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಅದನ್ನು ಮಾಡದೇ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಬಾರದು. ಗ್ರಾಮಾಂತರ ಪ್ರದೇಶದ ಜನರು ಕೋವಿಡ್-19 ಸಂಕಷ್ಟ ಪರಿಸ್ಥಿತಿಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿರುವಾಗ ದಂಡ ವಿಧಿಸುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಆರ್.ವೆಂಕಟೇಶ್ ಈಗಾಗಲೇ ಸರ್ಕಾರ ಮಾಸ್ಕ್ ಹಾಗೂ ಸ್ಯಾನಿಟೈಸ್ ಮಾಡಲು ಪ್ರತೀ ಗ್ರಾಮ ಪಂಚಾಯ್ತಿಗೆ 20 ಸಾವಿರ ರೂ.ಗಳಂತೆ ಅನುದಾನ ನೀಡಿದೆ ಎಂದು ಸಮಜಾಯಿಷಿ ನೀಡಿದರು. ಅದರಿಂದ ಕೋಪಗೊಂಡ ಸದಸ್ಯ ಬೀರಿಹುಂಡಿ ಬಸವಣ್ಣ, ಹಾಗಾದರೆ 260 ಗ್ರಾಮ ಪಂಚಾಯ್ತಿಗಳಿಗೆ ತಲಾ 20,000 ರೂ.ಗಳಂತೆ ನೀಡಿರುವ 52 ಲಕ್ಷ ರೂ. ಹಣ ಏನಾಯಿತು, ಹೇಗೆ ಖರ್ಚು ಮಾಡಿದ್ದೀರಿ, ಯಾರಿಗೆ ಎಷ್ಟು ಮಾಸ್ಕ್ ಮತ್ತು ಸ್ಯಾನಿ ಟೈಸರ್ ನೀಡಿದ್ದೀರೆಂಬ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು.

ಅದರಿಂದ ಪೇಚಿಗೆ ಸಿಲುಕಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ನೀಡಲಾರದೆ ಪರಿತಪಿಸುತ್ತಿದ್ದಾಗ ವೇದಿಕೆಗೆ ಬಂದ ತಾಲೂಕು ಪಂಚಾಯ್ತಿ ನಿರ್ವಾಹಕ ಅಧಿಕಾರಿ ಕೃಷ್ಣ ಕುಮಾರ್, ಆ ಹಣದಲ್ಲಿ ಗ್ರಾಮ ಪಂಚಾಯ್ತಿ ಕಚೇರಿ ಗಳನ್ನು ಸ್ಯಾನಿಟೈಸ್ ಮಾಡಿಸಿ ಸಿಬ್ಬಂದಿ ಹಾಗೂ ಕೋವಿಡ್ ನಿರ್ವಹಣೆ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ವಿತರಿಸಲಾಗಿದೆ ಎಂದು ಉತ್ತರ ನೀಡಿದರು. ನೀವು ಜನರಿಗೆ ಮಾಸ್ಕ್ ಕೊಡಿಸದೇ ದಂಡ ವಸೂಲಿ ಮಾಡಬಾರದೆಂದು ಸದಸ್ಯರೆಲ್ಲರೂ ಒಕ್ಕೊರಲಿ ನಿಂದ ಒತ್ತಾಯಿಸಿದಾಗ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕೊಟ್ಟರೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡುತ್ತೇವೆಂದು ಸಿಇಒ ಭಾರತಿ ಭರವಸೆ ನೀಡಿದರು.

ಮೈಸೂರು ಜಿಪಂ ಸಭೆಯಲ್ಲಿ ವಿಲಕ್ಷಣ ಪ್ರಸಂಗ
ಮೈಸೂರು, ಅ.6(ಆರ್‍ಕೆ)- ಅಗಲಿದ ಗಣ್ಯ ರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿ ಸುವ ವಿಷಯದ ಸಂಬಂಧ ಸದಸ್ಯರು ಪರಸ್ಪರ ವಾಕ್ಸಮರ ನಡೆಸಿ ಗದ್ದಲ ಉಂಟು ಮಾಡಿದ ಪ್ರಸಂಗ ಮೈಸೂರಿನ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಇಂದು ನಡೆಯಿತು.

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸಿಇಓ ಡಿ.ಭಾರತಿ ಅವರು ನಿಗದಿತ ಸಮಯಕ್ಕೆ ಆಗ ಮಿಸಿದ್ದರಾದರೂ ಸದಸ್ಯರ ಕೋರಂ ಅಭಾವ ದಿಂದಾಗಿ ಸಭೆಯನ್ನು ಒಂದೂವರೆ ಗಂಟೆ ಕಾಲ ಮುಂದೂಡಲಾಯಿತು.

ಮತ್ತೆ ಮಧ್ಯಾಹ್ನ 12.30 ಗಂಟೆಗೆ ಸಭೆ ಸೇರಿ ದಾಗ ಮುಖ್ಯ ಯೋಜನಾಧಿಕಾರಿ ಮಹದೇವ ಪಾಂಡೆ ಅವರು ಸಭೆ ಆರಂಭಿಸುವುದಕ್ಕೆ ಮುಂಚೆ ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಕರ ಎಂಬು ವರು ಕೋವಿಡ್ ಸೋಂಕಿನಿಂದ ಸಾವನ್ನ ಪ್ಪಿದ್ದು, ಅವರಿಗೆ ಎರಡು ನಿಮಿಷ ಮೌನಾಚರಣೆ ಮಾಡೋಣ ಎಂದಾಗ, ತಕ್ಷಣವೇ ಎದ್ದು ನಿಂತ ಬಿಜೆಪಿ ಸದಸ್ಯ ವೆಂಕಟೇಶ್‍ಸ್ವಾಮಿ ಅವರು, ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೂ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸ ಬೇಕು ಎಂದರು. ತದ ನಂತರ ಕಾಂಗ್ರೆಸ್ ಸದಸ್ಯೆ ಪುಷ್ಪಾ ಅಮರ ನಾಥ್, ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿ ರುವ ಯುವತಿಗೂ ಮೌನಾಚರಣೆ ಮೂಲಕ ಸಂತಾಪ ಸೂಚಿಸಬೇಕು. ಏಕೆಂದರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸಿಇಓ ಸೇರಿದಂತೆ ಬಹುತೇಕ ಸದಸ್ಯರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಯುವತಿ ಹೆಸರನ್ನೂ ಹೇಳಿ ಮೌನಾಚರಣೆ ಮಾಡಬೇಕೆಂದು ಒತ್ತಾಯಿಸಿದರು.

ಇದರಿಂದ ಅಸಮಾಧಾನಗೊಂಡ ವೆಂಕಟೇಶ ಸ್ವಾಮಿ, ಮಹಿಳೆಯರ ಬಗ್ಗೆ ನಮಗೂ ಗೌರವ ವಿದೆ. ಆದರೆ, ಉತ್ತರ ಪ್ರದೇಶದಲ್ಲಿ ಹತ್ಯೆಯಾದ ಯುವತಿಗೆ ನಾವು ಮೌನಾಚರಣೆ ಮಾಡು ವುದು ಶಿಷ್ಟಾಚಾರ ಉಲ್ಲಂಘಿಸಿದಂತಾಗುತ್ತದೆ ಎಂದರು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪುಷ್ಪಾ ಅಮರನಾಥ್, ನಾವು ಮೌನಾಚರಣೆ ಮಾಡಬೇಕೆಂದಷ್ಟೇ ಕೇಳುತ್ತಿದ್ದೇವೆ. ಇದರಿಂದ ಜಿಲ್ಲಾ ಪಂಚಾಯ್ತಿಯಾಗಲೀ, ಸದಸ್ಯರಾಗಲೀ ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು. ಮಾತಿನ ಚಕಮಕಿಯಿಂದಾಗಿ ಸಭೆಯಲ್ಲಿ ಗೊಂದಲ ಉಂಟಾಗಿ 15 ನಿಮಿಷ ವ್ಯಯವಾಯಿತು. ಕಡೆಗೆ ಸಾವನ್ನಪ್ಪಿದವರೆಲ್ಲ ರಿಗೂ ಸಂತಾಪ ಸೂಚಿಸೋಣ ಎಂದು ಸದಸ್ಯರೆಲ್ಲರೂ ಸಲಹೆ ನೀಡಿದ ಹಿನ್ನೆಲೆ ಯಲ್ಲಿ ಅಂತಿಮವಾಗಿ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ನಡೆಸಿದ ನಂತರ ಸಭೆ ಆರಂಭವಾಯಿತು.

ಸ್ಥಳ ಪರಿಶೀಲಿಸಿ ಶೀಘ್ರ ಕ್ರಮ: ಸಿಇಓ ಭಾರತಿ
ಮೈಸೂರು, ಅ. 6(ಆರ್‍ಕೆ)- ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಲೋಪವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ಅಚ್ಯುತಾನಂದ ಅವರು, ಜನವರಿ 17ರಂದು ನಡೆದ ಸಾಮಾನ್ಯ ಸಭೆಯಲ್ಲೇ ಈ ಬಗ್ಗೆ ದೂರಿದ್ದರೂ, ಈವರೆಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.

ಕೆ.ಆರ್.ನಗರ ತಾಲೂಕು, ಹೆಬ್ಬಾಳು ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರಿಗಾಗಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಯಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು 2.4 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆಯಾದರೂ, ಎಸ್‍ಸಿ ಮತ್ತು ಎಸ್‍ಟಿ ಜನಾಂಗದವರು ವಾಸ ಮಾಡ ದಿರುವ ಗ್ರಾಮಗಳಲ್ಲಿ ಘಟಕ ಅಳವಡಿಸಿ ಈ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಅಚ್ಯುತಾನಂದ ಆರೋಪಿಸಿದರು.

ಚಿಕ್ಕನಕೊಪ್ಪಲು, ಕೆಸ್ತೂರು ಕೊಪ್ಪಲು, ಕುಪ್ಪಳ್ಳಿ, ದೊಡ್ಡೇಕೊಪ್ಪಲು, ಕಾಟ್ನಾಳು ಗ್ರಾಮಗಳಲ್ಲಿ ಎಸ್‍ಸಿ, ಎಸ್‍ಟಿ ಜನಾಂಗದವರು ವಾಸ ಮಾಡದ ಕಡೆ ಈ ಯೋಜನೆ ಅನುಷ್ಠಾನ ಮಾಡಲಾಗಿದೆ. ಒಂದು ಸಮುದಾಯದವರ ಅಭಿವೃದ್ಧಿಗೆ ನಿಗದಿಪಡಿಸಿದ ಅನುದಾನವನ್ನು ಇತರ ಜನಾಂಗದವರಿಗಾಗಿ ಖರ್ಚು ಮಾಡಿರುವ ಬಗ್ಗೆ ಪರಿಶೀಲಿಸಿ ಲೋಪ ವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸ ಬೇಕೆಂದೂ ಅವರು ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಎಗ್ಸಿಕ್ಯೂಟಿವ್ ಇಂಜಿನಿ ಯರ್ ಸ್ಥಳ ಪರಿಶೀಲಿಸಿ ವರದಿ ನೀಡಿದ್ದಾರೆ. ನಾನೂ ಸಹ ಒಮ್ಮೆ ಭೇಟಿ ನೀಡಿದ ನಂತರ ಲೋಪವಾ ಗಿರುವುದು ಕಂಡು ಬಂದಲ್ಲಿ ಅಗತ್ಯ ಕ್ರಮ ಜರು ಗಿಸುತ್ತೇನೆ ಎಂದು ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಭಾರತಿ ಅವರು ಭರವಸೆ ನೀಡಿದರು.

 

ಬಿಡುಗಡೆಯಾಗಿರುವ ಅನುದಾನ  ಬಳಕೆಗೆ ಜಿಪಂ ಅನುಮತಿ
ಮೈಸೂರು, ಅ.6(ಎಸ್‍ಪಿಎನ್)- ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ಬಿಡುಗಡೆ ಯಾಗಿರುವ 6 ಕೋಟಿ 40 ಲಕ್ಷ ರೂ., ಅನುದಾನ ಹಾಗೂ ವಿವಿಧ ಸ್ಥಾಯಿ ಸಮಿತಿಗಳಿಗೆ ಈಗಾಗಲೇ ಬಿಡುಗಡೆಯಾಗಿ ರುವ ಅನುದಾನ ಬಳಕೆಗೆ ಅನುಮತಿ ನೀಡಿ ಮೈಸೂರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಪರಿಮಳಾ ಶ್ಯಾಮ್ ರೂಲಿಂಗ್ ನೀಡಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಎಲ್ಲಾ ಜಿಪಂ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ವಿವಿಧ ಇಲಾಖೆಯಡಿ ಮೀಸಲಾಗಿರುವ ಅನುದಾನವನ್ನು ಸಮಾನ ನಾಗಿ ಬಿಡುಗಡೆಗೊಳಿಸುವಂತೆ ಅಧ್ಯಕ್ಷೆ ಸೂಚನೆ ನೀಡಿದರು.

ಆಯಾ ಕ್ಷೇತ್ರದ ಸದಸ್ಯರು ಸೂಚಿಸಿದ ಹಿಂದಿನ ಯೋಜನೆ ಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹಂಚೀ ಪುರ ಜಿಪಂ ಸದಸ್ಯ ವೆಂಕಟಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಈಗಿನ 15ನೇ ಹಣಕಾಸು ಯೋಜನೆಯಲ್ಲಿ ಸದಸ್ಯರ ಮನವಿ ಮೇರೆಗೆ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ ಅನು ದಾನ ಹಂಚಿಕೆ ಮಾಡುವಂತೆ ನಿರ್ದೇಶನ ನೀಡಿದರು.

ಶಾಲೆ ಆರಂಭಿಸಬೇಡಿ: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಸೋಂಕಿ ತರ ಮರಣ ಪ್ರಮಾಣವೂ ಅತ್ಯಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆ ಆರಂಭಿಸುವುದು ಬೇಡ ಎಂದು ಬೀರಿಹುಂಡಿ ಬಸವಣ್ಣ ಸಭೆಗೆ ಸಲಹೆ ನೀಡಿದರು. ಇದಕ್ಕೆ ಇತರೆ ಸದಸ್ಯರು ದನಿಗೂಡಿಸಿದರು.

ಸದಸ್ಯರ ವಾಗ್ವಾದ: 2019-20ನೇ ಸಾಲಿಗೆ ಪ್ರೌಢಶಾಲೆ ಗಳಲ್ಲಿ ಕಳಪೆ ಸಮವಸ್ತ್ರ ಹಾಗೂ ಇತರೆ ಪಾಠೋಪಕರಣ ಗಳ ಖರೀದಿಯಲ್ಲಿ ವ್ಯತ್ಯಾಸವಿದ್ದ ಕಾರಣ ಸಂಬಂಧ ಪಟ್ಟವರಿಗೆ ಹಣ ಪಾವತಿ ಮಾಡದಂತೆ ಶಿಕ್ಷಣ ಸ್ಥಾಯಿ ಸಮಿತಿಯಲ್ಲಿ ಈ ಹಿಂದೆ ತೀರ್ಮಾನವಾಗಿತ್ತು. ಆದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಸ್ಥಾಯಿ ಸಮಿತಿ ತೀರ್ಮಾನವನ್ನೂ ಮೀರಿ ಹಣ ಪಾವತಿ ಮಾಡಿರುವ ಸಂಬಂಧ ಸದಸ್ಯ ಬೀರಿಹುಂಡಿ ಬಸವಣ್ಣ ಆಕ್ಷೇಪ ವ್ಯಕ್ತಪಡಿಸಿದಕ್ಕೆ ಕೆಲವು ಸದಸ್ಯರು, ಏರುಧ್ವನಿಯಲ್ಲಿ ಇತರೆ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು.

ಕಳೆದ ವರ್ಷ ಮೈಸೂರು ಜಿಲ್ಲೆಯಲ್ಲಿ ನೆರೆ ಹಾವಳಿ ಯಿಂದಾಗಿ ಸರ್ಕಾರಿ ಶಾಲಾ ಕಟ್ಟಡಗಳಿಗೆ ಹಾನಿಯಾಗಿತ್ತು. ದುರಸ್ತಿ, ಮರು ನಿರ್ಮಾಣಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನರೇಗಾ ಯೋಜನೆಯಲ್ಲಾದರೂ ಶಾಲಾ ಕಟ್ಟಡಗಳ ನವೀಕರಣ ಮತ್ತು ಮರು ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಸದಸ್ಯರು ಒತ್ತಾಯಿಸಿದರು.

ಸೋಮನಾಥಪುರ ಜಿಪಂ ಕ್ಷೇತ್ರದ ಐತಿಹಾಸಿಕ ಚೆನ್ನಕೇಶವ ದೇವಾಲಯದ ಸುತ್ತ 100 ಮೀ. ವ್ಯಾಪ್ತಿ ಯೊಳಗೆ ಮನೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಸೋಮನಾಥಪುರ ಜಿಪಂ ಸದಸ್ಯ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಿಇಓ ಭಾರತಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

 

ಕೋವಿಡ್ ರೌದ್ರಾವತಾರವನ್ನೇ ವಸೂಲಿ ದಂಧೆ  ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ: ಜಿಲ್ಲಾಡಳಿತಕ್ಕೆ ಜಿಪಂ ಸದಸ್ಯರ ಆಗ್ರಹ

ಮೈಸೂರು, ಅ. 6(ಆರ್‍ಕೆ)- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾ ಪಂಚಾಯ್ತಿ ಸದಸ್ಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೊರೊನಾ ಸೋಂಕಿತರ ಸಂಬಂಧಿಗಳಿಂದ ಚಿಕಿತ್ಸೆಗಾಗಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು, ರೋಗಿಗಳು ಮೃತಪಟ್ಟರೂ, ದೇಹ ಇರಿಸಿಕೊಂಡು ಹಣಕ್ಕೆ ಒತ್ತಾಯಿಸುತ್ತಿದ್ದು, ಕೋವಿಡ್ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಸದಸ್ಯರು ಆರೋಪಿಸಿದರು.

ಸಾಮಾನ್ಯರು ಹೋದರೆ ಒಳಗೇ ಸೇರಿಸದ ಖಾಸಗಿ ಆಸ್ಪತ್ರೆಯವರು ಹಾಸಿಗೆ, ವೆಂಟಿಲೇಟರ್ ಖಾಲಿ ಇಲ್ಲ ಎನ್ನುತ್ತಾರೆ. ಗಣ್ಯ ವ್ಯಕ್ತಿಗಳಿಂದ ಶಿಫಾರಸು ಮಾಡಿದರೆ ಮಾತ್ರ ಕೋವಿಡ್ ಸೋಂಕಿತರನ್ನು ಸೇರಿಸಿಕೊಳ್ಳುತ್ತಾರೆ. ನಂತರ ದಿನಕ್ಕೆ 60,000 ರೂ., 80 ಸಾವಿರದಂತೆ ಹಣ ಕಟ್ಟಿ ಎಂದು ಹಿಂದೆ ಬೀಳುತ್ತಾರೆ ಎಂದ ಬೀರಿಹುಂಡಿ ಬಸವಣ್ಣ, ಪುಷ್ಪಾ ಅಮರನಾಥ್, ಚಂದ್ರಿಕಾ ಸುರೇಶ್ ಹಾಗೂ ಇತರ ಸದಸ್ಯರು, ಕೇವಲ ಜ್ವರಕ್ಕೆ ನೀಡುವ ಮಾತ್ರೆಗಳನ್ನು ಕೊಟ್ಟು ಲಕ್ಷಾಂತರ ರೂ. ಹಣ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳು ಕೋವಿಡ್ ಪರಿಸ್ಥಿತಿಯಲ್ಲಿ ಅಭಾವ ಸೃಷ್ಟಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿವೆ ಎಂದು ದೂರಿದರು.

ಉಸಿರಾಟದ ಸಮಸ್ಯೆ ಇದೆ ಎಂದು ಐಸಿಯುನಲ್ಲಿಟ್ಟು ಆಕ್ಸಿಜನ್ ಕೊಟ್ಟಿದ್ದೇವೆ ಎಂದು ಹೇಳಿ ಚೆನ್ನಾಗಿರುವ ಕೊರೊನಾ ರೋಗಿಗಳಿಂದ ಲಕ್ಷಾಂತರ ರೂ. ವಸೂಲಿ ಮಾಡು ತ್ತಿರುವ ಖಾಸಗಿ ಆಸ್ಪತ್ರೆಗಳು, ರೋಗಿ ಮೃತಪಟ್ಟರೆ ಹಣ ಪಾವತಿಸುವವರೆಗೂ ಮೃತದೇಹ ಕೊಡುತ್ತಿಲ್ಲ. ಇದರಿಂದ ಬಡವರು ಮನೆ-ಮಠ, ಆಸ್ತಿ-ಒಡವೆಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸದಸ್ಯರು ಗಂಭೀರ ಆರೋಪ ಮಾಡಿದರು.

ಸರ್ಕಾರವೇ ಹೆಚ್ಚು ಹೆಚ್ಚು ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದವರನ್ನು ಸರ್ಕಾರಿ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಹಾಸಿಗೆ ಖಾಲಿ ಇಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಪ್ರೇರೇಪಿಸುತ್ತಿದ್ದು, ಅಧಿಕಾರಿ ಗಳು ಕಮಿಷನ್ ಆಸೆಗಾಗಿ ಈ ರೀತಿ ದಂಧೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಹಾಸಿಗೆ ಖಾಲಿ ಇಲ್ಲ ಎಂದು ಅಭಾವ ಸೃಷ್ಟಿಸಿ ರೋಗಿಗಳನ್ನು ದಾಖಲಿಸಲು ನಿರಾಕರಿಸುವ ಹಾಗೂ ಹೆಚ್ಚು ಹಣ ಸುಲಿಗೆ ಮಾಡುವ ದಂಧೆಗೆ ಕಡಿವಾಣ ಹಾಕಬೇಕು, ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ತಾಸು ತಮಗೇ ಆದ ಕಹಿ ಅನುಭವಗಳೊಂದಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರು ಚರ್ಚೆ ನಡೆಸಿದರು.

ಮೂರೇ ವೆಂಟಿಲೇಟರ್: ಪ್ರಸ್ತುತ ಪ್ರತೀ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ 3 ವೆಂಟಿಲೇಟರ್‍ಗಳು ಮಾತ್ರ ಇರುವುದರಿಂದ ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಅನಿವಾರ್ಯವಾಗಿ ಮೈಸೂರಿಗೆ ರೆಫರ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ವೆಂಕಟೇಶ್ ಸಭೆಗೆ ತಿಳಿಸಿದರು.

ತೀವ್ರ ಆಕ್ಷೇಪ: ಸೋಂಕು ವ್ಯಾಪಕವಾಗಿ ಹರಡಿ ಹಲವರನ್ನು ಬಲಿ ತೆಗೆದುಕೊಳ್ಳುತ್ತಿ ದ್ದರೂ, ತಾಲೂಕಿಗೆ ಮೂರೇ ಮೂರು ವೆಂಟಿಲೇಟರ್ ಇಟ್ಟುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಪುಷ್ಪಾ ಅಮರನಾಥ್, ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಟ್ಟು ಸರ್ಕಾರ ಕಮಿಷನ್ ಪಡೆಯುತ್ತಿದೆ. ಜನರ ಸಾವಿನಲ್ಲೂ ಹಣ ಮಾಡುವ ದಂಧೆ ಇದಾಗಿದೆ ಎಂದು ಆರೋಪಿಸಿದರು.

ಶೇ. 50ರಷ್ಟು ಹಾಸಿಗೆ: ಇದೀಗ ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಯನ್ನು ಕೊರೊನಾ ಸೋಂಕಿತರಿಗಾಗಿಯೇ ಪಡೆಯುತ್ತಿದ್ದೇವಲ್ಲದೆ, ತಾಲೂಕು ಆಸ್ಪತ್ರೆಗಳಲ್ಲೂ 50 ಹಾಸಿಗೆಗಳಿಗೆ ಆಕ್ಸಿಜನ್ ಉಪಕರಣ ಅಳವಡಿಸಿ ಗ್ರಾಮಾಂತರ ಪ್ರದೇಶದ ಜನರಿಗೆ ಅಲ್ಲಿಯೇ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಭಾರತಿ ಸಭೆಗೆ ತಿಳಿಸಿದರು.

 

 

 

 

Translate »