ಮಡಿಕೇರಿ,ಜು.10-ಕೊಡಗು ಜಿಲ್ಲಾದ್ಯಂತ ಶನಿವಾರದಿಂದ ಮಳೆ ಆರ್ಭಟಿಸುತ್ತಿದ್ದು, ಅಕ್ಷರಃ ಕೊಡಗು ನಲುಗಿ ಹೋಗಿದೆ. ಗಾಳಿ ಸಹಿತ ಮಳೆ ಅಬ್ಬರಿಸುತ್ತಿದ್ದು, ಗುಡ್ಡ ಕುಸಿತ ಗೊಂಡು ಶಾಲೆಯೊಂದು ಜಖಂಗೊಂಡಿದ್ದು, ಮತ್ತೊಂದು ಕಡೆ ತೂಗು ಸೇತುವೆಗೆ ಹಾನಿ ಯಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ನದಿ ತೊರೆಗಳು ಪ್ರವಾಹ ಮಟ್ಟ ಮೀರಿ ಹರಿಯು ತ್ತಿದ್ದು, ವಿವಿಧೆಡೆ ಪ್ರವಾಹ ಉಂಟಾಗಿದೆ.
ಈ ನಡುವೆ ಸೋಮವಾರ ಬೆಳಗಿನ 8.30 ರವರೆಗೆ ಜಿಲ್ಲೆಯಾದ್ಯಂತ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಮಳೆ-ಗಾಳಿಗೆ ಅನಾಹುತಗಳು ಘಟಿಸಿದ್ದು, ಆಸ್ತಿಪಾಸ್ತಿಗೆ ಹಾನಿ ಯಾದ ಬಗ್ಗೆ ವರದಿಯಾಗಿದೆ. ಭೂಕುಸಿತ, ಮನೆ ಹಾನಿ, ರಸ್ತೆ ಬಂದ್, ವಿದ್ಯುತ್ ಕಂಬ ಗಳಿಗೆ ಹಾನಿ ಸೇರಿದಂತೆ ಮರ ಮುರಿದು ಬಿದ್ದಿರುವ ಘಟನೆಗಳು ಮುಂದುವರೆದಿದೆ.
ಭೂ ಕುಸಿತ: ಮಡಿಕೇರಿ ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸಂಪಿಗೆಕಟ್ಟೆ ಹೋಂಸ್ಟೇ ಒಂದಕ್ಕೆ ಕಟ್ಟಲಾಗಿದ್ದ ಬೃಹತ್ ಕಾಂಕ್ರೀಟ್ ತಡೆಗೋಡೆಯಲ್ಲಿ ಮತ್ತಷ್ಟು ಬಿರುಕು ಮೂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಪಿಗೆಕಟ್ಟೆ ಜಂಕ್ಷನ್ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಈ ರಸ್ತೆಯನ್ನು ಬಂದ್ ಮಾಡಲಾಗಿದೆ.
ಗುಡ್ಡ ಕುಸಿದು ಶಾಲೆಗೆ ಹಾನಿ: ದೇಚೂರು ಬಳಿ ಮನೆಯೊಂದರ ತಡೆಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಭಾರೀ ಮಳೆ ಗಾಳಿಗೆ ಕೊಯ ನಾಡು ಮತ್ತು ಜೋಡುಪಾಲ ಸರಕಾರಿ ಶಾಲೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮ ಶಾಲೆಯ ಕೊಠಡಿಗಳಿಗೆ ಹಾನಿ ಯಾಗಿದೆ. ಚೇರಂಬಾಣೆ ಸಮೀಪ ತೊಟ್ಟಿಲ ಕುಂಞ ಎಂಬಲ್ಲಿ ಅನಿತಾ ಎಂಬವರ ಮನೆ ಪಕ್ಕದಲ್ಲಿ ಲಘು ಭೂ ಕುಸಿತ ಸಂಭವಿಸಿದ್ದು, ಮನೆ ಅಪಾಯ ಸ್ಥಿತಿಗೆ ತಲುಪಿದೆ. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಮಂಡೂರು ಹುದಿಕೇರಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿದ್ದು, ಮಣ್ಣನ್ನು ತೆರವುಗೊಳಿಸ ಲಾಗಿದೆ. ಮಡಿಕೇರಿ ಚೆಟ್ಟಳ್ಳಿ ರಸ್ತೆಯ ಕತ್ತಲೆಕಾಡು ಬಳಿ ಭೂ ಕುಸಿತ ಸಹಿತ ಮರ ಮುರಿದು ಬಿದ್ದಿದ್ದು, ತೆರವು ಕಾರ್ಯ ನಡೆದಿದೆ. ಈ ರಸ್ತೆಯಲ್ಲಿ ಮತ್ತಷ್ಟು ಭೂ ಕುಸಿಯುವ ಲಕ್ಷಣಗಳು ಕಂಡು ಬಂದಿದೆ. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿಹೊಳೆ-ಹಮ್ಮಿಯಾಲ ಸಂಪರ್ಕ ರಸ್ತೆಯ ಎರಡು ಕಡೆಗಳಲ್ಲಿ ಭೂ ಕುಸಿದು ರಸ್ತೆ ಸಂಚಾರ ವ್ಯತ್ಯಯ ವಾಗಿತ್ತು. ಮಣ್ಣನ್ನು ತೆರವುಗೊಳಿಸುವ ಮೂಲಕ ರಸ್ತೆ ಸಂಚಾರ ಸುಗಮಗೊಳಿಸಲಾಗಿದೆ.
ವಿರಾಜಪೇಟೆ ತಾಲೂಕು ಕೆದಮಳ್ಳೂರು, ತೋರಾ ಗ್ರಾಮ ಪ್ರಾಕೃತಿಕ ವಿಕೋಪ ಘಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಟ್ಟ ತಪ್ಪಲಿನ 8 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ತೋರಾ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಯೋಗಾನಂದ ಅಲ್ಲಿನ ನಿವಾಸಿಗಳ ಮನವೊಲಿಸಿ ತೋಮರಾ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಗ್ರಾಮಸ್ಥರನ್ನು ಸ್ಥಳಾಂತರಿಸಿದರು.
ತಲೆದೋರಿದ ಪ್ರವಾಹ: ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಪಯಶ್ವಿನಿ ನದಿ ಪ್ರವಾಹ ಸ್ಥಿತಿ ತಲುಪಿದೆ. ಭಾರೀ ಮಳೆಯಿಂದ ಕೊಯನಾಡು ಬಳಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಿಂದ 5 ಮನೆಗಳಿಗೆ ಏಕಾಏಕಿ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. ನದಿ ನೀರಿನಲ್ಲಿ ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳು ಕೊಚ್ಚಿ ಬಂದು ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ನಿಂತ ಪರಿಣಾಮ ನದಿ ನೀರು ಮನೆಗಳಿಗೆ ನುಗ್ಗಿ ದಿನ ಬಳಕೆ ವಸ್ತುಗಳಿಗೆ ಭಾರೀ ಹಾನಿಯಾಗಿದೆ. ಪ್ರವಾಹ ಸಂತ್ರಸ್ಥರು ಸಾರ್ವಜನಿಕರ ಸಹಾಯದಿಂದ ಮನೆ ಬಳಕೆ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಸಂಪರ್ಕ ಬಂದ್: ಮಡಿಕೇರಿ ತಾಲೂಕಿನ ಹಲವೆಡೆ ಜಲ ದಿಗ್ಬಂಧನ ವಿಧಿಸಿದ್ದು, ಮುಕ್ಕೋಡ್ಲು ಗ್ರಾಮದ ಭದ್ರಕಾಳಿ ದೇವಸ್ಥಾನ ಜಲಾವೃತವಾಗಿದೆ. ಗಾಳಿಬೀಡು, ವಣಚಲು, ಕಾಲೂರು ವ್ಯಾಪ್ತಿಯಲ್ಲಿ ಭಾರಿ ಸುರಿದ ಪರಿಣಾಮ ಹೊದಕಾನ-ಮುಕ್ಕೋಡ್ಲು ಸಂಪರ್ಕ ಸೇತುವೆಯ ಮೇಲೆ 7 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತವಾಗಿದೆ. ಉಕ್ಕಿ ಹರಿಯುತ್ತಿರುವ ನದಿಯಿಂದ ಮುಕ್ಕೋಡ್ಲು ಭದ್ರಕಾಳಿ ದೇವಸ್ಥಾನದ ತೂಗು ಸೇತುವೆಗೆ ಹಾನಿಯಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಕಾಫಿ, ಬಾಳೆ ತೋಟಗಳಿಗೆ ನೀರು ನುಗ್ಗಿದೆ. ಗಾಳಿಬೀಡುವಿನ ಒಂದನೇ ಮೊಣ್ಣಂಗೇರಿಯ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಕಳೆದ ಕೆಲ ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಗಾಳಿಬೀಡುವಿನ ಗಣಪತಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನೀರು ತುಂಬಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ.
ಕಾವೇರಿ ನದಿಯಲ್ಲಿ ಪ್ರವಾಹ ಏರ್ಪಟ್ಟಿದ್ದು, ನಾಪೋಕ್ಲು-ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಜಲಾವೃತವಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ. ನಾಪೋಕ್ಲು-ಚೆರಿಯಪರಂಬು-ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಕಾವೇರಿ ಪ್ರವಾಹ ಉಕ್ಕೇರಿದ್ದು ರಸ್ತೆ ಸಂಪರ್ಕ ಸ್ಥಗಿತವಾಗಿದೆ. ಬ್ರಹ್ಮಗಿರಿ ಬೆಟ್ಟ ಸಾಲಿನ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಪರ್ಕ ಕಳೆದ 6 ದಿನಗಳಿಂದ ಬಂದ್ ಆಗಿದೆ. ತ್ರಿವೇಣಿ ಸಂಗಮ ಕಳೆದ 10 ದಿನಗಳಿಂದ ಮುಳುಗಿದ ಸ್ಥಿತಿಯಲ್ಲಿದೆ. ಭಾಗಮಂಡಲ-ಮಡಿಕೇರಿ ರಸ್ತೆಯ ಮೇಲೆ 1 ಅಡಿ ನೀರು ಹರಿಯುತ್ತಿದ್ದು, ಸದ್ಯಕ್ಕೆ ವಾಹನ ಸಂಚಾರಕ್ಕೆ ತೊಡಕ್ಕಾಗಿಲ್ಲ. ಭಾಗಮಂಡಲ ದಲ್ಲಿ ಬೋಟ್ ಸಹಿತ ಕರ್ತವ್ಯಕ್ಕೆ ಹೋಂ ಗಾರ್ಡ್‍ಗಳ ನಿಯೋಜನೆ ಮಾಡಲಾಗಿದೆ. ಭಾಗಮಂಡಲ-ತಣ್ಣಿಮಾನಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿದ್ದ ಮೋರಿಯೊಂದು ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕಾವೇರಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಮೂರ್ನಾಡು ಸಮೀಪದ ಬೇತ್ರಿ ಸೇತುವೆ ಮುಳುಗಡೆಯಾಗಲು ಕ್ಷಣಗಣನೆ ಆರಂಭವಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಮುಂದುವರೆದಲ್ಲಿ ಮಡಿಕೇರಿ-ವಿರಾಜಪೇಟೆ ಸಂಪರ್ಕಿಸುವ ಬೇತ್ರಿ ಸೇತುವೆ ಮುಳುಗಡೆಯಾಗಲಿದ್ದು, ಎರಡು ತಾಲೂಕುಗಳ ಸಂಪರ್ಕ ಕಡಿತವಾಗುವ ಎಲ್ಲಾ ಸಾಧ್ಯತೆಗಳಿವೆ. ಕೊಯನಾಡು ಜಲ ಪ್ರವಾಹ ಸಂತ್ರಸ್ತರನ್ನು ಸಮೀಪದ ಕೊಯನಾಡು ಸರಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆ ವೇಳೆಗೆ ಕಾಳಜಿ ಕೇಂದ್ರದ ಶಾಲೆಯ ಹಿಂಬದಿ ಗುಡ್ಡ ಕುಸಿದು ಬಿದ್ದು, ಕೊಠಡಿಗಳಿಗೆ ಹಾನಿಯಾಯಿತು. ತದನಂತರ ಸಂತ್ರಸ್ಥರನ್ನು ಕೊಯನಾಡು ಗಣಪತಿ ದೇವಾಲಯದ ಬಳಿ ಇರುವ ಸಭಾಂಗಣಕ್ಕೆ ಸ್ಥಳಾಂತರ ಮಾಡಲಾಯಿತು. ಘಟನಾ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.