ವಿದ್ಯುತ್ ಸ್ಪರ್ಶ: ಒಂಟಿ ಸಲಗ ಸ್ಥಳದಲ್ಲೇ ಸಾವು
ಚಾಮರಾಜನಗರ

ವಿದ್ಯುತ್ ಸ್ಪರ್ಶ: ಒಂಟಿ ಸಲಗ ಸ್ಥಳದಲ್ಲೇ ಸಾವು

March 4, 2020

ಹನೂರು,ಮಾ.3-ಬೆಳೆ ರಕ್ಷಣೆಗೆ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿಸಲಗವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿ.ಎಂ.ಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ಚಿಕ್ಕಮಲ್ಲಯ್ಯ ತಮ್ಮ ಜಮೀನಿನಲ್ಲಿ ಮುಸುಕಿನಜೋಳ ಬೆಳೆದಿದ್ದರು. ಬೆಳೆÀ ರಕ್ಷಣೆಗಾಗಿ ಜಮೀನಿನ ಸುತ್ತ ತಂತಿಬೇಲಿ ನಿರ್ಮಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಸೋಮವಾರ ರಾತ್ರಿ ಆಹಾರ ಅರಸಿಕೊಂಡು ಬಂದ ಸುಮಾರು 25 ವರ್ಷದ ಒಂಟಿಸಲಗವೊಂದು ಚಿಕ್ಕಮಲ್ಲಯ್ಯನವರ ಜಮೀನಿಗೆ ಲಗ್ಗೆ ಹಾಕಿ ಜೋಳದ ಕಡ್ಡಿಯನ್ನು ಸೊಂಡಿಲಿನಿಂದ ಎತ್ತಿಕೊಳ್ಳುವಾಗ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಸೊಂಡಿಲು ಹಾಗೂ ಹಿಂಬದಿಯ ಬಲಗಾಲಿಗೆ ಸುತ್ತಿಕೊಂಡು ವಿದ್ಯುತ್ ಪ್ರವಹಿಸಿ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಆನೆ ಸಾವನ್ನಪ್ಪಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾವೇರಿ ವನ್ಯಜೀವಿ ವಲಯದ ಎಸಿಎಫ್ ಅಂಕರಾಜು, ಆರ್‍ಎಫ್‍ಓ ರಾಜಶೇಖರಪ್ಪ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಡಿಸಿಎಫ್ ಏಡುಕೊಂಡಲು, ಬಫರ್ ರೇಂಜ್ ಉಪವಲಯ ಅರಣ್ಯಧಿಕಾರಿ ಸಾಲನ್, ಹನೂರು ಸಿಪಿಐ ರವಿನಾಯಕ್, ಉಪ ನಿರೀಕ್ಷಕ ನಾಗೇಶ್, ಎಎಸ್‍ಐ ಅರಸು ಪರಿಶೀಲಿಸಿದರು.

ರೈತ ನಾಪತ್ತೆ: ತನ್ನ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ ಎಂದು ವಿಷಯ ತಿಳಿಯುತ್ತಿದ್ದಂತೆ ರೈತ ಚಿಕ್ಕಮಲ್ಲಯ್ಯ ಪರಾರಿಯಾಗಿದ್ದಾನೆ.

Translate »