ಸೆಪ್ಟೆಂಬರ್ ಮೊದಲ ವಾರ ಮೈಸೂರು ವಿವಿ ಪದವಿ ಅಂತಿಮ ತರಗತಿಗಳ ಪರೀಕ್ಷೆಗೆ ಸಿದ್ಧತೆ
ಮೈಸೂರು

ಸೆಪ್ಟೆಂಬರ್ ಮೊದಲ ವಾರ ಮೈಸೂರು ವಿವಿ ಪದವಿ ಅಂತಿಮ ತರಗತಿಗಳ ಪರೀಕ್ಷೆಗೆ ಸಿದ್ಧತೆ

August 14, 2020

ಮೈಸೂರು,ಆ.13(ಆರ್‍ಕೆ)-ಕೊರೊನಾ ಸೋಂಕಿನ ಹಿನ್ನೆಲೆ ಯಲ್ಲಿ ಬಾಕಿ ಉಳಿದಿ ರುವ ಮೈಸೂರು ವಿಶ್ವ ವಿದ್ಯಾನಿಲಯದ ಪದವಿ ಅಂತಿಮ ತರ ಗತಿಗಳ ಪರೀಕ್ಷೆಗಳನ್ನು ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಕುರಿತಂತೆ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎಗಳಂತಹ ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಾವು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಮತ್ತು ಮೊದಲ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕನಿಷ್ಠ 3 ತಿಂಗಳಾದರೂ ತರಗತಿ ನಡೆಸಿದ ನಂತರ ಪರೀಕ್ಷೆ ನಡೆಸ ಬೇಕಾಗಿರುವುದರಿಂದ ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದ ನಂತರ ಕ್ರಮವಹಿಸುತ್ತೇವೆ ಎಂದು ಅವರು ತಿಳಿಸಿದರು.

ಮುಂದಿನ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅನುಕೂಲವಾಗಲೆಂದು ಪದವಿ ಅಂತಿಮ ವರ್ಷ ಹಾಗೂ ಕೆಲಸಕ್ಕೆ ಸೇರಿಕೊಳ್ಳಲು ಅಥವಾ ಪಿಎಚ್‍ಡಿ ಪದವಿಗೆ ಪ್ರವೇಶಾತಿ ಪಡೆಯಲು ಸಹಾಯವಾಗುವಂತೆ ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆಗಳನ್ನಾದರೂ ನಡೆಸಲೇಬೇಕಾಗಿರುವುದರಿಂದ ಮೈಸೂರು ವಿಶ್ವವಿದ್ಯಾನಿಲಯವು ಪರೀಕ್ಷೆ ನಡೆಸಿ ಶೀಘ್ರ ಫಲಿತಾಂಶ ನೀಡಲು ತಯಾರಿ ನಡೆಸುತ್ತಿದೆ ಎಂದು ಪ್ರೊ.ಹೇಮಂತ್ ಕುಮಾರ್ ತಿಳಿಸಿದರು. ಕೊಠಡಿಗಳಲ್ಲಿ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಿ ಸ್ಯಾನಿಟೈಸ್ ಮಾಡಿ ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುಂಜಾ ಗ್ರತಾ ಕ್ರಮಕೈಗೊಳ್ಳಲಾಗುತ್ತಿದ್ದು, ಮೌಲ್ಯಮಾಪನಕ್ಕೂ ಮುನ್ನೆಚ್ಚರಿಕಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ನುಡಿದರು.

Translate »