ರಾಷ್ಟ್ರಪತಿ ಚುನಾವಣೆ: ಶೇ.99.18 ಮತದಾನ
News

ರಾಷ್ಟ್ರಪತಿ ಚುನಾವಣೆ: ಶೇ.99.18 ಮತದಾನ

July 19, 2022

ನವದೆಹಲಿ, ಜು.18- ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.99.18ರಷ್ಟು ಮತದಾನ ವಾಗಿದೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಚುನಾವಣೆ ಸಂಜೆ 5 ಗಂಟೆವರೆಗೆ ನಡೆದಿದ್ದು, ಸಂಸತ್ ಭವನದಲ್ಲಿ ಒಟ್ಟು 736 ಸಂಸದರ ಪೈಕಿ 727 ಮಂದಿ ಹಾಗೂ 9 ಶಾಸಕರು ಮತ ಚಲಾಯಿಸಿದರು. ದೆಹಲಿಯ ಸಂಸತ್ ಭವನ ಹಾಗೂ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಛÀತ್ತೀಸ್‍ಘಡ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಶೇ.100ರಷ್ಟು ಮತದಾನ ನಡೆದಿದೆ. ದೆಹಲಿಯಲ್ಲಿ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತದಾನ ಮಾಡಿದರು. ನಂತರ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಪಕ್ಷಗಳ ಸಂಸದರು ಮತದಾನ ಮಾಡಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ 770 ಸಂಸದರು ಮತ್ತು 4033 ಶಾಸಕರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಎನ್‍ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಜಯಗಳಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬಂದಿವೆ. ಜು.21ರಂದು ಮತದಾನ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದ್ದು, ಜು.25ರಂದು ನೂತನ ರಾಷ್ಟ್ರಪತಿ ಪದಗ್ರಹಣ ಮಾಡಲಿದ್ದಾರೆ.

Translate »