ನಾಳೆ ಕೆಆರ್‍ಎಸ್,  ಕಬಿನಿಗೆ ಸಿಎಂ ಬಾಗಿನ
ಮೈಸೂರು

ನಾಳೆ ಕೆಆರ್‍ಎಸ್, ಕಬಿನಿಗೆ ಸಿಎಂ ಬಾಗಿನ

July 19, 2022

ಮೈಸೂರು, ಜು.18(ಆರ್‍ಕೆ)-ಮೈದುಂಬಿದ ಕೃಷ್ಣರಾಜ ಸಾಗರ (ಕೆಆರ್‍ಎಸ್) ಮತ್ತು ಕಬಿನಿ ಜಲಾ ಶಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 20 ರಂದು ಬಾಗಿನ ಸಮರ್ಪಿಸುವರು. ಅಂದು (ಬುಧ ವಾರ) ಬೆಳಗ್ಗೆ 8.30 ಗಂಟೆಗೆ ಬೆಂಗಳೂ ರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಮುಖ್ಯಮಂತ್ರಿಗಳು, ಬೆಳಗ್ಗೆ 9.20 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‍ನಲ್ಲಿ ಆಗಮಿಸುವರು. ಅಲ್ಲಿಂದ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಬೊಮ್ಮಾಯಿ ಅವರು, ಬೆಳಗ್ಗೆ 9.45 ಗಂಟೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವದ ಅಂಗವಾಗಿ ತಾಯಿಯ ದರ್ಶನ ಪಡೆಯುವರು.

ಅಲ್ಲಿಂದ 10.35 ಗಂಟೆಗೆ ವಿಮಾನ ನಿಲ್ದಾಣಕ್ಕೆ ಹಿಂದಿರುಗಿ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಹೆಲಿಪ್ಯಾಡ್‍ಗೆ ತೆರಳುವ ಮುಖ್ಯಮಂತ್ರಿಗಳು, ಕಬಿನಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಲಸಂಪ ನ್ಮೂಲ ಸಚಿವರು, ಸ್ಥಳೀಯ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಬಾಗಿನ ಸಮರ್ಪಿಸುವರು. ನಂತರ ಹೆಲಿಕಾಪ್ಟರ್‍ನಲ್ಲಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಕೆಇಆರ್‍ಎಸ್ ಹೆಲಿಪ್ಯಾಡ್‍ಗೆ ತೆರಳಿ ಮಧ್ಯಾಹ್ನ 12.10ಕ್ಕೆ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಿಸುವ ಮುಖ್ಯಮಂತ್ರಿಗಳು, ನಂತರ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸುವರು. ಅಲ್ಲಿನ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1.20ಕ್ಕೆ ಹೊರಡಲಿರುವ ಅವರು ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪುವರು ಎಂದು ಪ್ರಕಟಣೆ ತಿಳಿಸಿದೆ.

Translate »