ಮೈಸೂರು, ಅ.6(ಎಸ್‍ಪಿಎನ್)- ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದು ವರೆಯುತ್ತಾರೋ ಅಥವಾ ಹಿಂದಿನ ಜಿಲ್ಲಾಧಿಕಾರಿ ಬಿ.ಶರತ್ ಅವರೇ ಮತ್ತೆ ಜಿಲ್ಲಾಧಿಕಾರಿಯಾಗಿ ಮರು ವರ್ಗಾ ವಣೆಗೊಳ್ಳುತ್ತಾರೋ ಎಂಬ ಕುತೂಹಲಕ್ಕೆ ಅ.7ರ ಬುಧವಾರ ತೆರೆ ಬೀಳಲಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಲ್ಲಿ ತಮ್ಮನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ ನಿಕಟ ಪೂರ್ವ ಜಿಲ್ಲಾಧಿಕಾರಿ ಬಿ.ಶರತ್ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು.
ಆ.29ರಂದು ಬಿ.ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಬಳಿಕ ಸೆ.29ರಂದು ದಸರಾ ಮಹೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳ ನಡುವೆಯೇ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿತ್ತು. ಶರತ್ ಅವರಿಗೆ ಯಾವುದೇ ಹುದ್ದೆ ತೋರದೆ ವರ್ಗಾವಣೆ ಮಾಡಿತ್ತು.