ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಮೈಸೂರು ಅರಮನೆ ಆವರಣದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ ತಂಡದಿಂದ ಪೂರ್ವಭಾವಿ ಸಭೆ
ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಮೈಸೂರು ಅರಮನೆ ಆವರಣದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ ತಂಡದಿಂದ ಪೂರ್ವಭಾವಿ ಸಭೆ

June 3, 2022

ಮೈಸೂರು,ಜೂ. 2(ಎಂಟಿವೈ)- ಮೈಸೂರು ಅರಮನೆ ಆವರಣದಲ್ಲಿ ಜೂ.21ರಂದು ನಡೆಯಲಿ ರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗುರುವಾರ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ರಾಷ್ಟ್ರೀಯ ಯೋಗ ಸಂಸ್ಥೆಯ ಹಿರಿಯ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶಕ ವಿಕ್ರಂ ಸಿಂಗ್, ನವದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಯೋಗ ಸಂಸ್ಥೆಯ ನಿರ್ದೇಶಕ ಡಾ.ಈಶ್ವರ್ ಬಸವರೆಡ್ಡಿ ಹಾಗೂ ರಾಜ್ಯದ ಆಯುಷ್ ಆಯುಕ್ತ ರಾಮಚಂದ್ರ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಅರಮನೆ ಆವರಣಕ್ಕೆ 12 ಸಾವಿರಕ್ಕಿಂತ ಹೆಚ್ಚು ಜನರನ್ನು ಬಿಡಬಾರದು. ಪ್ರಧಾನಿಗಳ ಆಗಮನ, ತುರ್ತು ನಿರ್ಗಮನಕ್ಕೆ ಭದ್ರತಾ ಸಿಬ್ಬಂದಿ ಸೂಚಿಸಿದೆಡೆ ವ್ಯವಸ್ಥೆ ಮಾಡಬೇಕು. ವೇದಿಕೆ ನಿರ್ಮಾಣ, ಅಲ್ಲಿ ಭದ್ರತೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.

ಅರಮನೆ ಆವರಣದಲ್ಲಿ ಫಿಕ್ಸ್: ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಅರಮನೆ ಆವರಣದಲ್ಲೇ ನಡೆಸಲು ಈಗಾಗಲೇ ನಿರ್ಧರಿಸಿರುವುದರಿಂದ ದೆಹಲಿಯಿಂದ ಬಂದಂತಹ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಪ್ರಧಾನಮಂತ್ರಿ ಭದ್ರತಾ ಸಿಬ್ಬಂದಿಗಳೂ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಪರ್ಯಾಯ ಆಯ್ಕೆ ಚಾಮುಂಡಿವಿಹಾರ ಕ್ರೀಡಾಂಗಣ: ಯೋಗ ಪ್ರದರ್ಶನಕ್ಕೆ ಅರಮನೆ ಆವರಣವೇ ಸೂಕ್ತವೆಂದು ಆಯ್ಕೆ ಮಾಡಲಾಗಿದ್ದರೂ, ತುರ್ತು ಇಲ್ಲವೇ ಅನಿವಾರ್ಯ ಪರಿಸ್ಥಿತಿಗೆ ಪರ್ಯಾಯ ಸುರಕ್ಷಿತ ಸ್ಥಳವೊಂದನ್ನು ಆಯ್ಕೆ ಮಾಡಿಕೊಳ್ಳುವಂತೆ ದೆಹಲಿಯಿಂದ ಬಂದಿದ್ದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹವಾಮಾನ ವೈಪರೀತ್ಯ ಇಲ್ಲವೇ ಮಳೆ ಬಂದರೆ ಸುರಕ್ಷಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮೈಸೂರಿನ ನಜûóರ್ ಬಾದ್‍ನಲ್ಲಿರುವ ಚಾಮುಂಡಿವಿಹಾರ ಒಳಾಂಗಣ ಯೋಗ ಪ್ರದರ್ಶನಕ್ಕೆ ಸೂಕ್ತವಾಗಿದೆ ಎಂದರು. ಇದಕ್ಕೆ ಸಮ್ಮತಿಸಿದ ಆಯುಷ್ ಮಂತ್ರಾಲಯದ ಅಧಿಕಾರಿಗಳು ವಾತಾವರಣ ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳುವಂತೆಯೂ ಸಲಹೆ ನೀಡಿದರು.

ಅರಮನೆ ಆವರಣ ವೀಕ್ಷಿಸಿದ ಅಧಿಕಾರಿಗಳು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಅರಮನೆಯ ಆವರಣವನ್ನು ಪರಿಶೀಲಿಸಿದರು. ಅರಮನೆ ಮುಂಭಾಗದ ಪ್ರಾಂಗಣ, ತ್ರಿನೇಶ್ವರ ದೇವಾಲಯದ ಪಕ್ಕದ ಖಾಲಿ ಜಾಗ, ಜಯಮಾರ್ತಾಂಡ ದ್ವಾರ ಮುಂಭಾಗದ ಆವರಣ, ಭುವನೇಶ್ವರಿ ದೇವಾಲಯದ ಮುಂದಿನ ಉದ್ಯಾನ ಸೇರಿದಂತೆ ಅರಮನೆಯ ಸುತ್ತಲೂ ಪರಿಶೀಲನೆ ಮಾಡಿದ ಅಧಿಕಾರಿಗಳು ಭದ್ರತೆಗೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಎಸ್ಪಿ ಆರ್.ಚೇತನ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಜಿ.ಪಂ ಸಿಇಓ ಬಿ.ಆರ್.ಪೂರ್ಣಿಮಾ, ಡಿಸಿಪಿ ಪ್ರದೀಪ್ ಗುಂಟಿ, ಜಿಲ್ಲಾ ಆಯುಷ್ ಅಧಿಕಾರಿ ಬಿ.ಎಸ್.ಸೀತಾಲಕ್ಷ್ಮಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »