ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ ಕೊಡಗಿನ ನವದಂಪತಿ ಸೇರಿ ಮೂವರ ದುರ್ಮರಣ
ಮಂಡ್ಯ

ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ ಕೊಡಗಿನ ನವದಂಪತಿ ಸೇರಿ ಮೂವರ ದುರ್ಮರಣ

January 3, 2022

ನಾಗಮಂಗಲ,ಜ.2(ಮಹೇಶ್/ಮೋಹನ್)- ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಂಪನಕೊಪ್ಪಲು ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತಪಟ್ಟವರನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಂದಳ್ಳಿ ಗ್ರಾಮದವರಾಗಿದ್ದು, ಹಾಲಿ ಮೈಸೂರಿನಲ್ಲಿ ವಾಸವಿದ್ದ ನಿವೃತ್ತ ಶಿಕ್ಷಕಿ ತಂಗಮ್ಮ(65), ಇವರ ಮಗ ಸುದೀಪ್(30), ಸೊಸೆ ಶ್ರೀಜಾ (23) ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಶ್ರೇಯಾ ಎಂಬ ಬಾಲಕಿ ಗಂಭೀರ ವಾಗಿ ಗಾಯಗೊಂಡಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದೀಪ್ ಮುಳ್ಳುಸೋಗೆ ಗ್ರಾಮದ ಶ್ರೀಜಾ ಅವರನ್ನು ಡಿ.10ರಂದು ವಿವಾಹವಾಗಿದ್ದರು. ಭಾನುವಾರ ಅಮಾವಾಸ್ಯೆಯಾದ ಕಾರಣ ತನ್ನ ತಾಯಿ, ಪತ್ನಿ ಹಾಗೂ ಸಂಬಂಧಿ ಶ್ರೇಯಾರೊಂದಿಗೆ ಕಾರಿ(ಕೆಎ09-ಎಂಎ 6477)ನಲ್ಲಿ ಆದಿಚುಂಚನಗಿರಿ ದೇವಸ್ಥಾನಕ್ಕೆ ಪೂಜೆಗೆ ಆಗಮಿಸಿದ್ದು, ಶ್ರೀ ಕ್ಷೇತ್ರದಲ್ಲಿ ಪೂಜೆ ಮುಗಿಸಿಕೊಂಡು ಮಧ್ಯಾಹ್ನ ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಎದುರಿ ನಿಂದ ಬರುತ್ತಿದ್ದ ಖಾಸಗಿ ಬಸ್ ಕಾರಿಗೆ ಮುಖಾಮುಖಿ ಡಿಕ್ಕಿ
ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ತಂಗಮ್ಮ, ಸುದೀಪ್, ಶ್ರೀಜಾ ಮೃತಪಟ್ಟರೆ, ಶ್ರೇಯಾ ಗಂಭೀರವಾಗಿ ಗಾಯಗೊಂಡಿ ದ್ದರು. ತಕ್ಷಣ ಸ್ಥಳೀಯರು ಕಾರಿನಲ್ಲಿದ್ದವರ ನೆರವಿಗೆ ಧಾವಿಸಿದರೂ, ಮೂವರು ಅಷ್ಟರಲ್ಲೇ ಮೃತಪಟ್ಟಿದ್ದರೆನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ನಾಗಮಂಗಲ ಡಿವೈಎಸ್‍ಪಿ ನವೀನ್ ಕುಮಾರ್, ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಹಾಗೂ ಸಿಬ್ಬಂದಿ ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ಜಿಲ್ಲಾ ಎಸ್‍ಪಿ ಯತೀಶ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್‍ನಲ್ಲಿದ್ದವರು ಮಂಡ್ಯದವರಾಗಿದ್ದು, ಖಾಸಗಿ ಬಸ್‍ನಲ್ಲಿ ಮಂತ್ರಾಲಯಕ್ಕೆ ಪ್ರವಾಸ ತೆರಳುತ್ತಿದ್ದರೆನ್ನಲಾಗಿದೆ. ಬಸ್‍ನ ಚಾಲಕ ಹಾಗೂ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೃತಪಟ್ಟವರನ್ನು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »