ಇಂದಿನಿಂದ ಮಕ್ಕಳಿಗೆ ಲಸಿಕೆ
ಮೈಸೂರು

ಇಂದಿನಿಂದ ಮಕ್ಕಳಿಗೆ ಲಸಿಕೆ

January 3, 2022

ಮೈಸೂರು,ಜ.2(ಎಂಟಿವೈ)-ಕೊರೊನಾ ಮತ್ತು ಒಮಿ ಕ್ರಾನ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ನಾಳೆ(ಜ.3)ಯಿಂದ ಮೈಸೂರು ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 1,48,1 84 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ದೊರೆ ಯಲಿದೆ. ಇದುವರೆವಿಗೂ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಆದರೆ ಸೋಮವಾರದಿಂದ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿರುವುದರಿಂದ ಮಕ್ಕಳಿಗೆ ಲಸಿಕೆ ಬಂದಿಲ್ಲ ಎಂಬ ಆತಂಕ ದೂರವಾದಂತಾಗಿದೆ.

ರೂಪಾಂತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕು ರಾಜ್ಯ ಸೇರಿದಂತೆ ದೇಶ-ವಿದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ 15ರಿಂದ 18ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿ ಅಪಾಯದಿಂದ ಪಾರು ಮಾಡುವ ಕಾರ್ಯ ಆರಂಭವಾಗಲಿದೆ. ಮೈಸೂರಿನ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ(ಜ.3) ಬೆಳಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ 34,06,521 ಜನಸಂಖ್ಯೆಯಿದ್ದು, ಅದರಲ್ಲಿ 15ರಿಂದ 18 ವರ್ಷದೊಳಗಿನ 1,48,184 ಮಂದಿ ಮಕ್ಕಳು ಇದ್ದಾರೆ. ಅವರಲ್ಲಿ ಬಹುತೇಕರು ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕೆಲವರು ವಿವಿಧ ಕಾರಣಗಳಿಂದ ಶಿಕ್ಷಣ ತೊರೆದು ಶಾಲೆ-ಕಾಲೇಜಿನಿಂದ ದೂರ ಉಳಿದಿದ್ದಾರೆ. ಈ ವರ್ಗದವರಿಗೆ ಲಸಿಕೆ ಹಾಕಲು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ ತ್ವರಿತಗತಿಯಲ್ಲಿ ಹರಡುವುದರೊಂದಿಗೆ ತೀವ್ರ ದುಷ್ಪರಿಣಾಮ ಬೀರುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಇದಲ್ಲದೆ, ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಫ್ ಇಮ್ಯುನೈಜೇಷನ್(ಎನ್‍ಎಟಿಜಿಐ) ಮಾಡಿರುವ ಶಿಫಾರಸ್ಸಿನಂತೆ 15ರಿಂದ 18 ವರ್ಷದೊಳಗಿನ ವರ್ಗದವರಿಗೆ ಲಸಿಕೆ ಹಾಕಲಾಗುತ್ತಿದೆ.

100 ತಂಡ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಎಲ್ಲರಿಗೂ ಲಸಿಕೆ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಶೇ.97.75ರಷ್ಟು ಮೊದಲ ಡೋಸ್ ನೀಡಿರುವ ಸಾಧನೆ ಮೈಸೂರು ಜಿಲ್ಲೆ ಮಾಡಿದೆ. ಇನ್ನು ಎರಡನೇ ಡೋಸ್ ಅನ್ನು ಶೇ.88ರಷ್ಟು ಮಂದಿಗೆ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಜ.3ರಿಂದ ಮೈಸೂರು ಜಿಲ್ಲೆಯಲ್ಲಿರುವ 15ರಿಂದ 18ವರ್ಷದೊಳಗಿನ 1,48,184 ಮಂದಿಗೆ ಲಸಿಕೆ ಹಾಕಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿರುವ 172 ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮೊಬೈಲ್ ಯೂನಿಟ್ ಸೇರಿದಂತೆ 400 ಕೇಂದ್ರಗಳಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವ ರಿಗೆ ಲಸಿಕೆ ಹಾಕಲಾಗುತ್ತಿದೆ. ಇದೀಗ 15ರಿಂದ 18ವರ್ಷದೊಳಗಿನವರಿಗೆ ಲಸಿಕೆ ಹಾಕಲು 100 ತಂಡ ರಚಿಸಲಾಗಿದೆ. ಆಯಾ ಶಾಲೆ ಮತ್ತು ಕಾಲೇಜುಗಳಲ್ಲೇ ಲಸಿಕೆ ಹಾಕಲಾಗು ತ್ತದೆ ಎಂದರು. 10ನೇ ತರಗತಿ ಹಾಗೂ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಾಗಿ ಈ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಈ ವಿದ್ಯಾರ್ಥಿಗಳಿಗೆಲ್ಲಾ ಲಸಿಕೆ ಹಾಕುವ ಗುರಿ ಹೊಂದಲಾ ಗಿದೆ. ಎಲ್ಲಾ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಆಧಾರ್ ಕಾರ್ಡ್ ತರಬೇಕು. ಮೊಬೈಲ್ ಇಲ್ಲದಿದ್ದರೆ ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮೊಬೈಲ್ ಇಲ್ಲದಿದ್ದರೆ, ಆಯಾ ಶಾಲೆ ಹಾಗೂ ಕಾಲೇಜುಗಳ ಅಧ್ಯಾಪಕ ವೃಂದದ ನಂಬರ್‍ನಿಂದಲೇ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಲೆ ಬಿಟ್ಟಿರುವ 15 ವರ್ಷ ಮೇಲ್ಪಟ್ಟವರು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದುಕೊಳ್ಳಬೇಕು. ಕೊರೊನಾ ಸೋಂಕಿನ ಅಪಾಯದಿಂದ ಪಾರಾಗಲು ಲಸಿಕೆ ಪಡೆಯುವುದೇ ಅಂತಿಮ ಮಾರ್ಗವಾಗಿದ್ದು, ಜನರು ಆತಂಕಕ್ಕೆ ಒಳಗಾಗದೇ ಮಕ್ಕಳಿಗೆ ಲಸಿಕೆ ಕೊಡಿಸುವಂತೆ ಕೋರಿದ್ದಾರೆ.

Translate »