ಪ್ರೊ. ದುರಾನಿ ಇನ್ನಿಲ್ಲ
ಮೈಸೂರು

ಪ್ರೊ. ದುರಾನಿ ಇನ್ನಿಲ್ಲ

June 2, 2018

ಮೈಸೂರು: ಪ್ರೊ. ಮೊಹಮದ್ ಇಸ್ಮಾಯಿಲ್ ಖಾನ್ ದುರಾನಿ(91) ಅವರು ಮೈಸೂರಿನ ಮಂಡಿ ಮೊಹಲ್ಲಾದ ಬಿ.ಎನ್. ರಸ್ತೆಯಲ್ಲಿರುವ ನಿವಾಸ ‘ದುರಾನಿ ಮೆಂಜಿಲ್’ನಲ್ಲಿ ಇಂದು ನಿಧನರಾದರು. ಪ್ರೊ. ಎಂಐಕೆ ದುರಾನಿ ಎಂದೇ ಖ್ಯಾತರಾಗಿದ್ದ ಅವರು, ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮೈಸೂರಿನ ಕೇಂದ್ರ ಕಾರಾಗೃಹದ ಹಿಂಭಾಗದಲ್ಲಿರುವ ಹಳೇ ಕಬರಸ್ತಾನ ದಲ್ಲಿ ದುರಾನಿ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರೊ.ದುರಾನಿ ಅವರು ಹವ್ಯಾಸಿ ಬರಹಗಾರರಾಗಿದ್ದು, ಅವರ ‘ರಿ ಕಲೆಕ್ಷನ್ಸ್’ ಅಂಕಣ ‘ಸ್ಟಾರ್ ಆಫ್ ಮೈಸೂರ್’ ಓದುಗರಿಗೆ ಅಚ್ಚುಮೆಚ್ಚಾಗಿತ್ತು. 1950ರಲ್ಲಿ ಆಂಗ್ಲ ಉಪನ್ಯಾಸಕರಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದ ಅವರು, ಮೂರು ವರ್ಷ ಮಂಡ್ಯದ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದನ್ನು ಹೊರತುಪಡಿಸಿದರೆ, ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ನಿರಂತರ 35 ವರ್ಷಗಳ ಕಾಲ ಇಂಗ್ಲಿಷ್ ಬೋಧನೆ ಮಾಡಿದರು. ಯುವರಾಜ ಕಾಲೇಜಿನಲ್ಲಿ ಅಸೋಷಿಯೇಟ್ ಲೆಕ್ಚರರ್ ಆಗಿ ನಂತರ ರೀಡರ್ ಆಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪ್ರೊ. ದುರಾನಿ ಅವರು 1983ರಲ್ಲಿ ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವರ್ಗಾ ವಣೆಗೊಂಡು 1988ರಲ್ಲಿ ನಿವೃತ್ತರಾಗಿದ್ದರು. ಯುವರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದ್ದಾಗ ಅವರು ಎನ್‍ಸಿಸಿ ಅಧಿಕಾರಿಯಾಗಿದ್ದರಲ್ಲದೆ ಹಲವು ಇಂಗ್ಲಿಷ್ ನಾಟಕವನ್ನು ನಿರ್ದೇಶಿಸಿದ್ದರು. ನಿವೃತ್ತಿ ನಂತರ ಮೈಸೂರಿನ ಮುಸ್ಲಿಂ ಎಜುಕೇಷನಲ್ ಸೊಸೈಟಿಗೆ ಸೇರಿ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಆಗಿ, ಫೌಂಡರ್ ಪ್ರಿನ್ಸಿಪಾಲ್ ಆಗಿ ಎಂಇಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಪ್ರೊ.ದುರಾನಿ ಅಧ್ಯಕ್ಷರಾಗಿ ನರ್ಸರಿಯಿಂದ ಕಾಲೇಜು ಮಟ್ಟದವರೆಗೆ ಶೈಕ್ಷಣ ಕ ಅಗತ್ಯತೆಗಳನ್ನು ಪೂರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »