ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ಹಿತೈಷಿಗಳ ನುಡಿನಮನ
ಮೈಸೂರು

ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ಹಿತೈಷಿಗಳ ನುಡಿನಮನ

August 2, 2018

ಮೈಸೂರು: ಇತ್ತೀಚೆಗೆ ನಿಧನರಾದ ಸಾಹಿತಿ ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ ಮಂಗಳವಾರ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಶಿವರಾಮು ಕಾಡನಕುಪ್ಪೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಮೂರ್ತಿ. ಕಾಡನಕುಪ್ಪೆಯವರ ಜೀವನ ಶೈಲಿ ವೈಚಾರಿಕತೆಗೆ ಹಾಸು ಹೊಕ್ಕಾಗಿತ್ತು. ಹೋರಾಟದ ಬದುಕು ಸಾಗಿಸಿಕೊಂಡು ಬಂದ ಶಿಕಾಕು, ಅವರೊಬ್ಬ ವಿಚಾರವೀರ. ಸಾಮಾಜಿಕ ಅನಿಷ್ಠದ ವಿರುದ್ಧ ಜೀವನಪೂರ್ತಿ ಹೋರಾಟ ಮಾಡಿದರು. ಜತೆ ಜತೆಗೆ ಅನಾರೋಗ್ಯದ ವಿರುದ್ಧವೂ ಹೋರಾಟ ಮಾಡಿದರು. ಕುವೆಂಪು ಸಾರಿದ ನಿರಂಕುಶಮತಿಗಳಾಗಿ ಸಂದೇಶ ಅನುಷ್ಟಾನದ ಸಜೀವ ನಿದರ್ಶನವಾಗಿದ್ದರು. ಸ್ತ್ರೀಪರ ಲೇಖಕರಾಗಿದ್ದ ಕಾಡನಕುಪ್ಪೆ ಅವರದು ಬರವಣಿಗೆಗಿಂತ ಹೋರಾಟ ಜಾಸ್ತಿಯಿತ್ತು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ಸಮಾಜದಲ್ಲಿರುವಂತಹ ಅನಿಷ್ಠ ಪದ್ಧತಿಗಳನ್ನು ನೇರವಾಗಿ ವಿರೋಧಿಸಿ, ಹೋರಾಟ ಮಾಡಿದವರು. ಸರಸ್ವತಿಯ ಸುಪುತ್ರರಾಗಿದ್ದ ಅವರು, ಪ್ರಗತಿಪರ ಚಿಂತಕರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸಮಾನತೆಗಾಗಿ ಹೋರಾಟ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ನಂತರ ಕವಯತ್ರಿ ಪ್ರೊ.ಚ. ಸರ್ವಮಂಗಳಾ ಮಾತನಾಡಿ, ಸಮುದಾಯ ಪ್ರಜ್ಞೆ ಬೆಳೆಸಿಕೊಂಡಿದ್ದ ಶಿಕಾಕು ನಾಡು, ನುಡಿ ಜಲಕ್ಕಾಗಿ ಹೋರಾಟ ಮಾಡುವ ತುಡಿತ ಅವರದ್ದಾಗಿತ್ತು. ಮಹಿಳಾ ಕಾಳಜಿ, ಸಮಾನತೆ ರೂಢಿಸಿಕೊಂಡಿದ್ದ ಅವರು ಯಾರನ್ನೂ ಯಾವತ್ತೂ ಅಗೌರವದಿಂದ ನೋಡಿ ಮಾತನಾಡಲಿಲ್ಲ ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಡಾ.ಪಿ.ಕೆ. ರಾಜಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷೆ ಮಾನಸ, ರಂಗಕರ್ಮಿ ರಾಜಶೇಖರ ಕದಂಬ, ಮಡ್ಡೀಕೆರೆ ಗೋಪಾಲ್, ಎಂ. ಚಂದ್ರಶೇಖರ್, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪ್ರಕಾಶಕ ಡಿ.ಎನ್. ಲೋಕಪ್ಪ, ಸಾಹಿತಿ ಹೊರೆಯಾಲ ದೊರೆಸ್ವಾಮಿ ಹಾಜರಿದ್ದರು.

Translate »