ಹತ್ತೇ ನಿಮಿಷದಲ್ಲಿ ಆಸ್ತಿ ನೋಂದಣಿ
News

ಹತ್ತೇ ನಿಮಿಷದಲ್ಲಿ ಆಸ್ತಿ ನೋಂದಣಿ

March 3, 2023

ಬೆಂಗಳೂರು, ಮಾ.2(ಕೆಎಂಶಿ)-ಮಧ್ಯ ವರ್ತಿಗಳ ಹಾವಳಿ ಹತ್ತಿಕ್ಕಿ, ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಕೇವಲ 10 ನಿಮಿಷಗಳಲ್ಲೇ ಆಸ್ತಿ ನೋಂದಣಿ ಮಾಡುವ ಕಾವೇರಿ-2 ತಂತ್ರಾಂಶಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಇನ್ನು ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಹೊಸ ತಂತ್ರಾಂಶ ಜಾರಿಗೊಳ್ಳಲಿದ್ದು, ಆಸ್ತಿ ನೋಂದಣಿ ಮಾಡಿಕೊಳ್ಳುವವರು ಮನೆ ಯಲ್ಲೇ ಕುಳಿತು, ಪ್ರಕ್ರಿಯೆ ಮುಗಿಸುವ ವ್ಯವಸ್ಥೆ ಇದಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ನೋಂದಣಿ ವ್ಯವಸ್ಥೆಯ ಲ್ಲಿನ ಸಮಸ್ಯೆ ಪರಿಹರಿಸಿ, ಹೊಸ ನವೀನ, ನಾಗರಿಕ ಸ್ನೇಹಿ, ವಂಚನೆ ರಹಿತ ಕಾವೇರಿ-2 ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ಈಗಾಗಲೇ ಪ್ರಾಯೋಗಿಕವಾಗಿ ಕೆಲ ಜಿಲ್ಲೆ ಗಳಲ್ಲಿ ಜಾರಿಗೆ ತಂದು ಯಶಸ್ವಿಯೂ ಆಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೊಳ್ಳಲಿದೆ ಎಂದರು.

ನೋಂದಣಿ ಪ್ರಕ್ರಿಯೆಯು ಸಂಪೂರ್ಣ ಆನ್‍ಲೈನ್ ಮತ್ತು ಸಂಪರ್ಕ ರಹಿತವಾಗಿ ರುತ್ತದೆ. ನಾಗರಿಕರು, ನೋಂದಣಿ ಕಚೇರಿಗೆ ಹಾಜರಾಗುವ ಮೊದಲೇ ಎಲ್ಲಾ ಡೇಟಾ ಮತ್ತು ದಾಖಲಾತಿಗಳನ್ನು ಆನ್‍ಲೈನ್ ಅಪ್‍ಲೋಡ್ ಮಾಡಿ, ಉಪನೋಂದಣಿ ಅಧಿಕಾರಿಗಳ ಪರಿಶೀಲನೆಗೆ ಸಲ್ಲಿಸಿ, ಪರಿ ಶೀಲಿಸಿದ ದಾಖಲೆಗಳನ್ನು ನಾಗರಿಕರಿಗೆ ನಿಗದಿತ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ.

ನಂತರ ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆಗೆ ಸಮಯ ನಿಗಧಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯು ಹತ್ತು ನಿಮಿಷಗಳ ವ್ಯವಹಾರವಾಗಿರುತ್ತದೆ. ನಾಗರಿಕರು ತಮ್ಮ ಭಾವಚಿತ್ರ ಹಾಗೂ ಹೆಬ್ಬರಳಿನ ಗುರುತನ್ನು ಸೆರೆ ಹಿಡಿಯುವ ಸಂಬಂಧ ದಿನಾಂಕ ಹಾಗೂ ಸಮಯ ನಿಗಧಿಪಡಿಸಿ ನೋಂದಣಿ ಮಾಡಿಕೊಂಡು ಐದರಿಂದ ಹತ್ತು ನಿಮಿಷದಲ್ಲಿ ಕಚೇರಿಯಿಂದ ಹೊರ ಬರಬಹುದಾಗಿದೆ ಎಂದರು. ಆಸ್ತಿ ನೋಂದಣಿಗಾಗಿ ಜನರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ಇತ್ತು. ಆದರೆ ಕಾವೇರಿ-2 ಯೋಜನೆಯ ಮೂಲಕ ಇನ್ನು ಮುಂದೇ ಹತ್ತೇ ನಿಮಿಷಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಆಸ್ತಿ ನೋಂದಣಿ ವ್ಯವಹಾರ ಇನ್ನು ಮುಂದೆ ಪಾರದರ್ಶಕವಾಗಿ ನಡೆಯಲಿದ್ದು,ಮೋಸದಿಂದ ಒಂದು ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವ ಅಶೋಕ್ ವಿವರ ನೀಡಿದರು. ಇನ್ನು ಮುಂದೆ ಯಾವುದೇ ಆಸ್ತಿ ನೋಂದಣಿ ಮಾಡಿಸಬೇಕೆಂದರೆ ಜನರು ತಮಗೆ ಬೇಕಾದ ಉಪನೋಂದಣಾಧಿ ಕಾರಿಗಳ ಕಚೇರಿಯನ್ನು ಗುರುತಿಸಿ ಆನ್‍ಲೈನ್‍ನಲ್ಲಿ ಅರ್ಜಿಯನ್ನು ರವಾನಿಸಬೇಕು. ನೋಂದಣಿಯಾಗಬೇಕಾದ ಆಸ್ತಿಗೆ ಸಂಬಂಧಿಸಿದ ವಿವರವನ್ನು ಅರ್ಜಿಯಲ್ಲಿ ನಮೂದಿಸಿ ಕಳಿಸಿದರೆ ಉಪನೋಂದಣಾಧಿ ಕಾರಿಗಳು ಅದನ್ನು ಪರಿಶೀಲಿಸಿ ಯಾವ ತೊಡಕೂ ಇಲ್ಲವೆಂದರೆ ನೋಂದಣಿ ಕಾರ್ಯಕ್ಕೆ ಅಗತ್ಯವಾದ ಮಾಹಿತಿಯನ್ನು ನೀಡುತ್ತಾರೆ. ಒಂದು ವೇಳೆ ಸದರಿ ಆಸ್ತಿಯಲ್ಲಿ ಏನಾದರೂ ತೊಡಕುಗಳು ಇದ್ದರೂ ಆ ಕುರಿತು ವಿವರ ನೀಡುತ್ತಾರೆ ಎಂದರು.

Translate »