ಈ ಬಾರಿಯ ವಿಧಾನಸಭಾ ಚುನಾವಣೆ  ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಭವಿಷ್ಯ ನಿರ್ಧರಿಸುತ್ತದೆ…
ಮೈಸೂರು

ಈ ಬಾರಿಯ ವಿಧಾನಸಭಾ ಚುನಾವಣೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಭವಿಷ್ಯ ನಿರ್ಧರಿಸುತ್ತದೆ…

March 3, 2023

ಮೈಸೂರು, ಮಾ.2(ಎಸ್‍ಬಿಡಿ)-ಮುಂದಿನ ಸಾರ್ವತ್ರಿಕ ಚುನಾವಣೆ ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆ. ಅದರ ಫಲಿತಾಂಶ ಪಕ್ಷಗಳ ರಾಜಕೀಯ ಭವಿಷ್ಯವನ್ನು ನಿರ್ಧ ರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಗುರು ವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅನುಭವವನ್ನು ಮುಕ್ತವಾಗಿ ಹಂಚಿಕೊಂಡರಲ್ಲದೆ, ಪ್ರತಿಪಕ್ಷಗಳ ನಾಯಕರ ಆರೋಪ, ಟೀಕೆ-ಟಿಪ್ಪಣಿಗೂ ಪ್ರತ್ಯುತ್ತರ ನೀಡಿದರು.

ಮಾ.20ರಿಂದ 30 ರೊಳಗೆ ಚುನಾವಣಾ ದಿನಾಂಕ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳಂತೆ ನಮ್ಮ ಪಕ್ಷವೂ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಂಡಿದೆ. ಒಂದು ಕಾಲದಲ್ಲಿ ಜೆಡಿಎಸ್ ಪಕ್ಷ ಐಸಿಯುನಲ್ಲಿದೆ, ಶಕ್ತಿ ಉಳಿದಿಲ್ಲ. 10-15 ಸ್ಥಾನ ಗೆಲ್ಲುವುದು ಕಷ್ಟ. ಹಲವರು ಜೆಡಿಎಸ್‍ಗೆ ಗುಡ್ ಬೈ ಹೇಳಿ ಶಾಕ್ ನೀಡುತ್ತಾರೆ ಎಂದೆಲ್ಲಾ ನಿರಂತರವಾಗಿ ಹೇಳಿದ್ದಾರೆ. ಎರಡು ವರ್ಷದಿಂದ ಹೊರ ನೋಟಕ್ಕೆ ಜೆಡಿಎಸ್‍ನಲ್ಲಿ ಇರುವ 2-3 ಮಂದಿ ನಾಲ್ಕೈದು ದಿನದಲ್ಲಿ ಹೊರ ಹೋಗಬಹುದು. ಅದಕ್ಕೇನು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಮುಂಬರುವ ಚುನಾವಣೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳಿಗೂ ಅಗ್ನಿಪರೀಕ್ಷೆ. ಚುನಾವಣೆಯ ಫಲಿತಾಂಶ ಜೆಡಿಎಸ್ ಪಕ್ಷ ಮಾತ್ರವಲ್ಲ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಲಿದೆ. ಇದನ್ನು ಯಾವ ನಾಯಕರು ಒಪ್ಪುತ್ತಾರೋ ಇಲ್ಲವೋ. ಆದರೆ ಇದು ನನ್ನ ಸಣ್ಣ ರಾಜ ಕೀಯ ಅನುಭವದ ಅಭಿಪ್ರಾಯ ಎಂದು ಹೇಳಿದರು.

ಮೈತ್ರಿ ಸರ್ಕಾರದ ಅಸಲಿಯತ್ತು: ಮೈತ್ರಿ ಸರ್ಕಾರ ರಚನೆ ಮಾಡಿದಾಗ ನಾವೇನು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರದ ವೇಳೆ ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಅಪಪ್ರಚಾರ ಮಾಡಿದರು. ಕೆಲ ಧಾರ್ಮಿಕ ಗುರುಗಳ ಮೂಲಕ ರಹಸ್ಯವಾಗಿ ಜೆಡಿಎಸ್ ಬೆಂಬಲಿ ಸದಂತೆ ಸಂಘಟಿಸುವ ಕೆಲಸ ಮಾಡಿದರು. ಅದು ನಮಗೆ ತಿಳಿದಿರಲಿಲ್ಲ. ಕೆಲವು ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ತಂಡ ಮಾಡಿ, ಅಲ್ಪಸಂಖ್ಯಾತರ ಮನಸ್ಸು ಕೆಡಿಸುವ ಪ್ರಯತ್ನ ಮಾಡಿದರು. ಅದರ ಪ್ರತಿಫಲ ವಾಗಿ ಬಿಜೆಪಿಗೆ 105 ಸ್ಥಾನ ಬಂದವು. ಫಲಿತಾಂಶ ಪ್ರಕಟವಾಗುವವರೆಗೆ ಕಾಯಿರಿ ಎಂದು ಹೇಳಿದರೂ ಕೇಳದೆ ಎಲೆಕ್ಟ್ರಿಕ್ ಟ್ರೇನ್ ಸ್ಪೀಡ್‍ನಲ್ಲಿ ದೂರವಾಣಿ ಕರೆ ಮಾಡಿ ಭೇಟಿ ಮಾಡಲೇಬೇಕು ಎಂದರು. ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಗೆಹ್ಲೋಟ್, ವೇಣುಗೋಪಾಲ್ ದುಂಬಾಲು ಬಿದ್ದರು. ದೇವೇಗೌಡರ ಮೂಗು ಹಿಡಿದರು. ಸಂಜೆ ಅಶೋಕ ಹೋಟೆಲ್‍ನಲ್ಲಿ ನಡೆದ ಸಭೆಗೆ ನಾನು, ದೇವೇಗೌಡರು ಹೋಗಿದ್ದೆವು. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಇದ್ದರು. ಆಗ `ನನ್ನ ಮಗನ ಆರೋಗ್ಯ ಸರಿಯಿಲ್ಲ. ಕಾಂಗ್ರೆಸ್‍ನ ಯಾರಾದರೂ ಮುಖ್ಯಮಂತ್ರಿ ಯಾಗಲಿ ನಾವು ಬೇಷರತ್ತಾಗಿ ಬೆಂಬಲ ನೀಡುತ್ತೇವೆ’ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದರು. ಆದರೆ ಗುಲಾಮ್ ನಬಿ ಆಜಾದ್ ಇನ್ನಿತರ ನಾಯಕರು `ಇಲ್ಲ ನಿಮ್ಮ ನೇತೃತ್ವದಲ್ಲೇ ಸರ್ಕಾರ ರಚಿಸಲು ಹೈಕಮಾಂಡ್ ತೀರ್ಮಾನಿಸಿ ಆಗಿದೆ. ನಾವೇ ಬೇಷರತ್ ಬೆಂಬಲ ನೀಡುತ್ತೇವೆ’ ಎಂದಿದ್ದಾಗಿ ಕುಮಾರಸ್ವಾಮಿ ತಿಳಿಸಿದರು. ಸರ್ಕಾರ ರಚನೆ ಪ್ರಕ್ರಿಯೆ
ಆರಂಭವಾದಾಗ ಕ್ಯಾಬಿನೆಟ್ ಸಚಿವ ಸ್ಥಾನ, ಇಲಾಖೆ ಹಂಚಿಕೆಗೆ ತಕರಾರು ಶುರು ಮಾಡಿದರು. ಅವರು ಆಯ್ಕೆ ಮಾಡಿ ಉಳಿದ ಇಲಾಖೆಗಳನ್ನು ನಮ್ಮ ಪಕ್ಷದವರಿಗೆ ನೀಡಿದ್ದಾಯಿತು. ಹಣಕಾಸು ಖಾತೆ ಕಾಂಗ್ರೆಸ್‍ನವರಿಗೆ ನೀಡಿದರೆ ರೈತರ ಸಾಲ ಮನ್ನಾ ಮಾಡಲು ತೊಂದರೆಯಾಗಬಹುದು ಎಂದು ನಾನು ಖಚಿತವಾಗಿ ಹೇಳಿದ್ದೆ. ಇಂಧನ ಇಲಾಖೆಯನ್ನೂ ಕಾಂಗ್ರೆಸ್ ಪಡೆಯಿತು. ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಮುಖ್ಯಮಂತ್ರಿ ನಡೆಸುವುದು ಶಿಷ್ಠಾಚಾರ. ಆದರೆ ಅವರಿಗೆ ಬೇಕಾದ ಅಧಿಕಾರಿ ವಾರ್ಗಾವಣೆಗೆ ಪಟ್ಟು ಹಿಡಿದು, ಅವರು ನೀಡಿದ ಪಟ್ಟಿಗೆ ನಾನು ಸಹಿ ಹಾಕಬೇಕಾಯ್ತು. ನಾನು ಯಾವುದೇ ತೀರ್ಮಾನ ಮಾಡುವ ಹಾಗೆ ಇರಲಿಲ್ಲ. ಇದನ್ನು ತಾಯಿ ಚಾಮುಂಡೇಶ್ವರಿ ನೆಲೆಸಿರುವ ಪುಣ್ಯಸ್ಥಳದಲ್ಲಿ ಹೇಳುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ತಾಯಿಯೇ ತೀರ್ಮಾನ ಮಾಡ್ತಾಳೆ ಎಂದು ನುಡಿದರು.

ಸೌಜನ್ಯಕ್ಕೂ ಎರಡು ಪಕ್ಷಗಳ ಜಂಟಿ ಶಾಸಕಾಂಗ ಪಕ್ಷ ಸಭೆ ಕರೆಯಲಿಲ್ಲ. ಒಮ್ಮೆ ಜಾರ್ಜ್ ಅವರ ಹೋಟೆಲ್‍ಗೆ ಆಹ್ವಾನಿಸಿದ್ದರು. ಅಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕುಳಿತಿದ್ದರು. ಶಾಸಕಾಂಗ ಪಕ್ಷದ ಸಭೆಯನ್ನೂ ಕರೆದಿದ್ದರು. ಆದರೆ ಮುಖ್ಯಮಂತ್ರಿಯಾಗಿ ಹೋಗಿದ್ದ ನನ್ನನ್ನು ಒಳಗಡೆ ಬನ್ನಿ ಎನ್ನಲಿಲ್ಲ. ಅಲ್ಲಿಗೆ ಕರೆದಿದ್ದೇಕೆ ಎನ್ನುವುದೂ ಗೊತ್ತಾಗಲಿಲ್ಲ. 15-20 ನಿಮಿಷ ಹೋಟೆಲ್ ಆವರಣದಲ್ಲಿ ಓಡಾಡಿ ನಂತರ ವಾಪಸ್ಸಾದೆ. ನಾನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ದೂಷಿಸುವುದಿಲ್ಲ. ಪ್ರಾರಂಭಿಕ ಹಂತದಿಂದ ನನ್ನನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆ. `ಬಿ’ ಟೀಂ ಎಂದು ಅಪಪ್ರಚಾರ ಮಾಡಿ ಕುತ್ತಿಗೆ ಕುಯ್ದ, ಅಪನಂಬಿಕೆ ಪಕ್ಷಕ್ಕೆ ಜಾತ್ಯಾತೀತತೆ ಉಳಿಸುವ ಉದ್ದೇಶದಿಂದ ತಲೆ ಕೊಟ್ಟಿದ್ದಕ್ಕೆ ಇದನ್ನೆಲ್ಲಾ ಅನುಭವಿಸು ವಂತಾಯ್ತು ಎಂದರು. ಕುಮಾರಸ್ವಾಮಿ ಆಡಳಿತವನ್ನು ಸರಿಯಾಗಿ ನಡೆಸಲಿಲ್ಲ. ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಕಾಲ ಕಳೆಯುತ್ತಿದ್ದರು. ಅದಕ್ಕಾಗಿ ಶಾಸಕರು ಅಸಮಾಧಾನ ದಿಂದ ಪಕ್ಷ ಬಿಟ್ಟರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಪದೇ ಪದೆ ಹೇಳುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿ ಇದ್ದ ದಿನಗಳಲ್ಲಿ ಬೆಳಗ್ಗೆ 8-9 ಗಂಟೆಗೆ ಕೃಷ್ಣಾ ಕಚೇರಿ, ವಿಧಾನಸೌದ ಇಲ್ಲವೇ ಶಕ್ತಿಭವನದಲ್ಲಿ ನಿತ್ಯ 8-9 ಇಲಾಖೆಗಳ ಸಭೆ ನಡೆಸುತ್ತಿದ್ದೆ. ರೈತರ ಸಾಲಮನ್ನಾ ಮಾಡುವುದು ನನಗೆ ಪ್ರಮುಖವಾಗಿತ್ತು. ಯೋಜನೆಗಳ ಜಾರಿಗೆಂದು ವೀರಪ್ಪ ಮೊಯ್ಲಿ, ದೇಶಪಾಂಡೆ, ಡಿ.ಕೆ.ಶಿವಕುಮಾರ್, ರೇವಣ್ಣ ಮತ್ತಿತರರಿದ್ದ ಸಮಿತಿ ಮಾಡಿದ್ದರು. ಕಾಂಗ್ರೆಸ್ ಪ್ರಣಾಳಿಕೆ ಕಾರ್ಯಕ್ರಮ ಕಡಿಮೆ ಮಾಡುವಂತಿಲ್ಲ ಹಾಗೂ ಚುನಾವಣಾ ಪೂರ್ವ ಬಜೆಟ್‍ನಲ್ಲಿ ಘೋಷಿಸಿದ್ದರಲ್ಲಿ ವ್ಯತ್ಯಯವಾಗುವಂತಿಲ್ಲ ಎಂದು ನಿರ್ಬಂಧಿಸಿದ್ದರು. ನಮಗೆ ಸಂಪೂರ್ಣ ಬಹುಮತ ಬಂದಿಲ್ಲ ಎಂದು ಸಾಲಮನ್ನಾ ವಿಚಾರದಿಂದ ಹಿಂದೆ ಸರಿಯಿರಿ ಎಂದು ಹೇಳಿದ್ದರು.

ಸಿದ್ದರಾಮಯ್ಯನವರು ವಿಶ್ರಾಂತಿ ಸಂದರ್ಭದಲ್ಲಿ ಧರ್ಮಸ್ಥಳದ ಸಿದ್ಧವನದಲ್ಲಿ ಕುಳಿತು ಔಷಧಿ ಅರೆದರು. ಸಂಸತ್ ಚುನಾವಣೆ ನಂತರ ಸರ್ಕಾರ ಬೀಳಿಸೋದು ಗೊತ್ತು ಎಂದರು. 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಸಾಲಮನ್ನಾ ವಿಚಾರವಾಗಿ ಒಂದೇ ಒಂದು ಸಲಹೆ ನೀಡಲಿಲ್ಲ. ಬದಲಾಗಿ ಬಜೆಟ್ ಮಂಡಿಸದಂತೆ ತಡೆಯುವ ಪ್ರಯತ್ನ ನಡೆಸಿದರು. ಮೊದಲ ಬಜೆಟ್ ಮಂಡನೆ ಸಂದರ್ಭ ಸ್ಪೀಕರ್ ಹಾಗೂ ಮಾಧುಸ್ವಾಮಿ ಇದಕ್ಕೆ ಅವಕಾಶವೇ ಇಲ್ಲ ಎಂದು ಅಡ್ಡಿ ಮಾಡಿದರು. ಅತ್ತೂ ಕರೆದು ನಿಯಮಾನುಸಾರ ಅವಕಾಶ ಇದೆ ಎಂದು ಸಾಬೀತುಪಡಿಸಿ ಹೊಸ ಬಜೆಟ್ ಮಂಡಿಸ ಬೇಕಾಯ್ತು. ಇದು ಜೆಡಿಎಸ್ ಅನ್ನು ಬಿ ಟೀಂ ಎನ್ನುವವರ ಆಂತರಿಕ ಹೊಂದಾಣಿಕೆ. ಹಿಂದಿನ ಬಜೆಟ್‍ನಲ್ಲಿ ಸಿದ್ದರಾಮಯ್ಯನವರು ಸಾಲಮನ್ನಾ ಘೋಷಿಸಿದ್ದಾಗ ಆ ಹಣವನ್ನು ಆದಾಯ ವೆಚ್ಚಕ್ಕೆ ಸೇರಿಸದೆ, ಬಂಡವಾಳ ವೆಚ್ಚಕ್ಕೆ ಸೇರಿಸಿದ್ದರು. ಹಾಗಾಗಿ ನಾನು 4 ಸಾವಿರ ಕೋಟಿ ರೂ. ಹೊಂದಿಸಬೇಕಾಯ್ತು ಎಂದು ತಿಳಿಸಿದರು.

Translate »