ನಂಜನಗೂಡಲ್ಲಿ ಹರ್ಷವರ್ಧನ್‍ಗೆ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ
ಮೈಸೂರು

ನಂಜನಗೂಡಲ್ಲಿ ಹರ್ಷವರ್ಧನ್‍ಗೆ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ

March 3, 2023

ನಂಜನಗೂಡು, ಮಾ.2- ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ ನಂಜನ ಗೂಡು ಕ್ಷೇತ್ರದ ಹಾಲಿ ಶಾಸಕ ಬಿ.ಹರ್ಷ ವರ್ಧನ್ 30 ಸಾವಿರಕ್ಕೂ ಅಧಿಕ ಮತ ಗಳಿಂದ ಜಯ ಗಳಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹರ್ಷವರ್ಧನ್ 12 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರಿಗೆ ಸಿಗುತ್ತಿರುವ ಅಭೂತ ಪೂರ್ವ ಜನಬೆಂಬಲ ನೋಡಿದರೆ 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವ ಕಾರಣ ಬಿಜೆಪಿ 150 ಸ್ಥಾನ ಗಳಿಸಿ ಅಧಿಕಾರ ಹಿಡಿಯಲಿದೆ. ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಬೆರಳೆಣಿಕೆ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂಬ ಮಾತನ್ನು ಜನರು ಈ ಬಾರಿ ಸುಳ್ಳು ಮಾಡಲಿದ್ದಾರೆ. ಕಳೆದ ಬಾರಿ 3 ಸಾವಿರ ಅಂತರದಲ್ಲಿ ಸೋಲು ಕಂಡಿದ್ದ ಹನೂರು ಹಾಗೂ ಚಾಮರಾಜನಗರದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ. ಉಳಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಹಾಗಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ತನ್ನ ಅಲೆ ಸೃಷ್ಟಿಸಲಿದೆ ಎಂದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರ ಆಶೀರ್ವಾದದಿಂದ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನುಗು ಏತ ನಿರಾವರಿ ಯೋಜನೆ ಸಾಕಾರಗೊಂಡಿದೆ. ಅಲ್ಲದೆ ಯಡಿಯೂರಪ್ಪ, ಬೊಮ್ಮಾಯಿ ಅವರು ಉತ್ತಮವಾಗಿ ಸ್ಪಂದಿಸಿದ್ದ ಕಾರಣ 750 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ನಡೆಸಲಾಗಿದೆ. 2 ಬಾರಿ ಬಸವರಾಜ ಬೊಮ್ಮಾಯಿ ಅವರು ಬಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಸಮಾನತೆ ಸಂಕೀರ್ಣ ನಿರ್ಮಾಣಕ್ಕೆ ದೇವಾಲಯದ ಹಣ ಬಳಕೆಗೆ ಅಡ್ಡಿಯಾಗಿದ್ದ ಕಾನೂನು ತೊಡಕನ್ನು ನಿವಾರಿಸಲಾಗಿದ್ದು, ಇನ್ನು 2 ವಾರದಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಈ ವೇಳೆ ಶಾಸಕರಾದ ಎನ್.ಮಹೇಶ್, ನಿರಂಜನ್‍ಕುಮಾರ್, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಮಹದೇವಯ್ಯ, ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಸುರೇಶ್‍ಬಾಬು, ಸುಬ್ಬಣ್ಣ, ನಗರಸಭಾಧ್ಯಕ್ಷ ಎಸ್.ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಸಿ.ಚಿಕ್ಕರಂಗನಾಯಕ, ಎಸ್.ಎಂ.ಕೆಂಪಣ್ಣ, ಹುಲ್ಲಹಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಪರಶಿವ ಮೂರ್ತಿ, ಮುಖಂಡರಾದ ಕೆಂಡಗಣ್ಣಪ್ಪ, ತಾಪಂ ಮಾಜಿ ಸದಸ್ಯರಾದ ಬಿ.ಎಸ್.ರಾಮು, ಶಿವಣ್ಣ, ಶ್ಯಾಮ್ ಪಟೇಲ್, ಪುಟ್ಟಸ್ವಾಮಿ, ಬಾಲಚಂದ್ರು, ಸಂಜಯ್ ಶರ್ಮಾ, ಮಧುರಾಜ್, ಅನಂತ್, ನಗರಸಭಾ ಸದಸ್ಯರಾದ ಮಹದೇವಮ್ಮ, ವಿಜಯಲಕ್ಷ್ಮಿ, ಬಾಲಚಂದ್ರ, ಮೀನಾಕ್ಷಿ, ಕಪಿಲೇಶ್, ಮಹದೇವ ಪ್ರಸಾದ್ ಸೇರಿದಂತೆ ಇತರರಿದ್ದರು.

ಅದ್ಧೂರಿ ಸ್ವಾಗತ: ಗುಂಡ್ಲುಪೇಟೆ ಮಾರ್ಗವಾಗಿ ನಂಜನಗೂಡಿಗೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಅನೇಕ ಗಣ್ಯರಿಗೆ ನಗರದ ದೇವಿರಮ್ಮನಹಳ್ಳಿ ಬಸವ ವೃತ್ತದ ಬಳಿ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ರಾಷ್ಟ್ರಪತಿ ರಸ್ತೆ ಮೂಲಕ ಸಾಗಿದ ಮೆರವಣಿಗೆ ಶ್ರೀಕಂಠೇಶ್ವರಸ್ವಾಮಿ ದೇಗುಲದ ಬಳಿ ಸಾಗುತ್ತಿದ್ದಂತೆ ಗಣ್ಯರು ದೇವರ ದರ್ಶನ ಪಡೆದರು. ನಂತರ ಅಂಗಡಿ ಬೀದಿ, ಬಜಾರ್ ರಸ್ತೆ ಮೂಲಕ ಸಾಗಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಅಂತ್ಯಗೊಂಡಿತು.

Translate »