ಪಾಲಿಕೆ ಆಸ್ತಿ ಸಂರಕ್ಷಿಸಿ, ರೆವಿನ್ಯೂ ಬಡಾವಣೆಯಲ್ಲಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ  ಬಡ್ಡಿ ಮನ್ನಾ ಮಾಡಿಸಿ, ಉದ್ದಿಮೆ ಪರವಾನಗಿ ಸರಳಗೊಳಿಸಿ, ಆದಾಯ ಮೂಲ ಹೆಚ್ಚಿಸಿ…
ಮೈಸೂರು

ಪಾಲಿಕೆ ಆಸ್ತಿ ಸಂರಕ್ಷಿಸಿ, ರೆವಿನ್ಯೂ ಬಡಾವಣೆಯಲ್ಲಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ ಬಡ್ಡಿ ಮನ್ನಾ ಮಾಡಿಸಿ, ಉದ್ದಿಮೆ ಪರವಾನಗಿ ಸರಳಗೊಳಿಸಿ, ಆದಾಯ ಮೂಲ ಹೆಚ್ಚಿಸಿ…

January 14, 2022

ಮೈಸೂರು, ಜ.13(ಎಸ್‍ಬಿಡಿ)-ನಿರ್ವಹಣಾ ವೆಚ್ಚ ಹಾಗೂ ನಿರೀಕ್ಷಿತ ಆದಾಯದ ಆಧಾರದಲ್ಲಿ ಬಜೆಟ್ ರೂಪಿಸಿ, ನಗರ ಪಾಲಿಕೆ ಆಸ್ತಿ ಸಂರಕ್ಷಿಸಿ, ಕಂದಾಯ(ರೆವಿನ್ಯೂ) ಬಡಾವಣೆ ಗಳಲ್ಲಿ ಸಮರ್ಪಕವಾಗಿ ತೆರಿಗೆ ಸಂಗ್ರಹಿಸಿ, ತೆರಿಗೆ ಮೇಲಿನ ಅಧಿಕ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಉದ್ದಿಮೆ ಪರವಾನಗಿ ಪ್ರಕ್ರಿಯೆ ಸರಳೀಕರಣಗೊಳಿಸಿ, ತೆರಿಗೆ ಸೋರಿಕೆ ತಡೆದು, ಆದಾಯ ಮೂಲ ಹೆಚ್ಚಿಸಿಕೊಳ್ಳಿ.
ಮೈಸೂರು ನಗರ ಪಾಲಿಕೆ 2022-23ನೇ ಸಾಲಿನ ಬಜೆಟ್ ಪೂರ್ವಭಾವಿಯಾಗಿ ಪಾಲಿಕೆಯ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆ ಯಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾಜಿ ಮೇಯರ್‍ಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂತಹ ಹಲವು ಮಹತ್ವದ ಸಲಹೆ-ಅಭಿಪ್ರಾಯಗಳನ್ನು ಮಂಡಿಸಿದರು.

ಬಜೆಟ್ ಅನುಷ್ಠಾನ ವಿಫಲ: ಮಾಜಿ ಮೇಯರ್ ಭೈರಪ್ಪ ಮಾತನಾಡಿ, ಬಜೆಟ್ ಪೂರ್ವಭಾವಿಯಾಗಿ ಅಭಿಪ್ರಾಯ ಸಂಗ್ರಹಿಸುವುದು ರೂಢಿಯಲ್ಲಿದೆ. ಆದರೆ ಬಜೆಟ್ ಅನು ಷ್ಠಾನ ವಿಫಲವಾಗುತ್ತಿದೆ. ಕಂದಾಯ ಬಡಾವಣೆಗಳಿಂದ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ 2012-13ನೇ ಸಾಲಿನಲ್ಲೇ `ಬಿ’ ಖಾತೆ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದು 2018ರಿಂದ ಸ್ಥಗಿತಗೊಂಡಿದೆ. ತೆರಿಗೆ ಕಟ್ಟುವವರು ಯಾರೋ, ಸೌಲಭ್ಯ ಪಡೆಯುವುದು ಮತ್ಯಾರೋ? ಎನ್ನುವಂತಹ ಪರಿಸ್ಥಿತಿ ಇದೆ. ಕಂದಾಯ ಬಡಾವಣೆಗಳಿಂದ ಏಕೆ ತೆರಿಗೆ ವಸೂಲಿ ಮಾಡು ತ್ತಿಲ್ಲ?. ಆನ್‍ಲೈನ್ ವ್ಯವಸ್ಥೆ ನಂತರ ಅಕ್ರಮ ಹೆಚ್ಚಾಗಿದೆ. ಖಾತೆ, ಕಂದಾಯ, ಪ್ಲಾನ್ ನೀಡುವಲ್ಲಿ ಅಧಿಕಾರಿಗಳಲ್ಲಿ ಬದ್ಧತೆ ಇಲ್ಲ. ಕಂದಾಯ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ಇದು ಸ್ವತಃ ಅನುಭವವಾಗಿದೆ. ನೀರಿನ ತೆರಿಗೆಯನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ. ನೀರು, ಆಸ್ತಿ ತೆರಿಗೆ ಮೇಲಿನ ಅಧಿಕ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಬರೆದು, ಕ್ರಮ ವಹಿಸಬೇಕು. ಉದ್ದಿಮೆ ಪರವಾನಗಿ(ಟ್ರೇಡ್ ಲೈಸೆನ್ಸ್) ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು. ಥಿಯೇಟರ್, ಕಲ್ಯಾಣ ಮಂಟಪಗಳ ಮೇಲಿನ ಅಧಿಕ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ತಿಳಿಸಿದರು.

ಆದಾಯ ಮೂಲಕ್ಕೆ ಆದ್ಯತೆ: ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿ, ಆದಾಯ ಮೂಲದ ಬಗ್ಗೆ ಹೆಚ್ಚು ಗಮನಹರಿಸಬೇಕು. ನಗರ ಯೋಜನೆ ಮೂಲಕ ನೀಡುವ ಲೈಸನ್ಸ್ ಪ್ರಕಾರ ಯಾರೂ ಕಟ್ಟಡ ಕಟ್ಟುತ್ತಿಲ್ಲ. ವಾರ್ಡ್‍ಗೆ ಒಬ್ಬ ಇಂಜಿನಿಯರ್ ಇದ್ದರೂ ಈ ಬಗ್ಗೆ ಗಮನ ಹರಿಸುವು ದಿಲ್ಲ. ನಾನು ಮೇಯರ್ ಆಗಿದ್ದ ಸಂದರ್ಭದಲ್ಲಿ ಅನಧಿಕೃತ ನಲ್ಲಿ ಸಂಪರ್ಕಗಳನ್ನು ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸ ಲಾಗಿತ್ತು. ಕಟ್ಟಡ ನಿರ್ಮಾಣದಲ್ಲಿ ಉಲ್ಲಂಘನೆಯಾಗಿದ್ದರೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗಿತ್ತು. ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು, ಅನುಮತಿ ಪಡೆಯಬೇಕು. ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ನೆಲಸಮಗೊಳಿಸಿ, ಪುನರ್ ನಿರ್ಮಾಣ ಮಾಡು ವುದೋ? ಅಥವಾ ನವೀಕರಣ ಸಾಧ್ಯವೇ? ಎನ್ನುವುದನ್ನು ಕೂಡಲೇ ನಿರ್ಧರಿಸಿ, ಕ್ರಮಕ್ಕೆ ಮುಂದಾಗಬೇಕು. ದೇವರಾಜ ಮಾರುಕಟ್ಟೆ ಮಳಿಗೆಗಳ ಬಾಡಿಗೆಯನ್ನು ಒಂದು ರೂ. ಕೂಡ ಹೆಚ್ಚಿಸಿಲ್ಲ. ಹರಾಜು ಮೂಲಕ ಮಳಿಗೆ ವಿತರಿಸುವ ಪ್ರಕ್ರಿಯೆ ನಡೆಯುವವರೆಗಾದರೂ ಪಾಲಿಕೆಗೆ ಆದಾಯ ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಹಿಂದೆ ಐದಾರು ವಾರ್ಡ್‍ಗಳಿಗೆ ಒಬ್ಬರೇ ಕಂದಾಯಾಧಿಕಾರಿ ಇದ್ದರು. ಆದರೆ ಈಗ ವಾರ್ಡ್‍ಗೆ ಒಬ್ಬರಿದ್ದರೂ ಕೆಲಸವಾಗುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಇದ್ದಾರೆ. ಅಧಿಕಾರಿಗಳ ವಾಹನ ಸೌಲಭ್ಯದ ವೆಚ್ಚ ಹೆಚ್ಚಾಗಿದೆ. ಖರ್ಚು ಕಡಿಮೆ ಮಾಡಿ, ಸೀಮಿತ ಸಿಬ್ಬಂದಿಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವ ಹಿಸಬೇಕು. ಖಾಲಿ ನಿವೇಶನಗಳ ಮೇಲೆ ಹೆಚ್ಚು ತೆರಿಗೆ ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಿಸಿದರು.

ಹಕ್ಕುದಾರ ತೆರಿಗೆ ಕಟ್ಟಬೇಕು: ಮಾಜಿ ಮೇಯರ್ ಪುರು ಷೋತ್ತಮ್ ಮಾತನಾಡಿ, ನೀರು ಹಾಗೂ ಆಸ್ತಿ ತೆರಿಗೆ ಬಗ್ಗೆ 2008ರಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ತೆರಿಗೆ ಕಟ್ಟಲು ಜನ ಸಿದ್ಧರಿದ್ದರೂ ಸಂಗ್ರಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿ ದ್ದಾರೆ. ದೇವರಾಜ ಮಾರುಕಟ್ಟೆಯಲ್ಲಿ ಮೂಲ ಬಾಡಿಗೆ ದಾರರು ಯಾರೂ ಇಲ್ಲ. ಮಳಿಗೆ ಮೂರ್ನಾಲ್ಕು ಜನರಿಗೆ ಬದ ಲಾಗಿದೆ. ಪಾಲಿಕೆ ಆಸ್ತಿ ರಕ್ಷಣೆಯಲ್ಲಿ ವಿಫಲವಾಗಿದೆ. ಎಲ್ಲಾ ಸಮುದಾಯದ ಬಡವರಿಗೆ ತೆರಿಗೆ ವಿನಾಯ್ತಿ ನೀಡಿ, ಆದರೆ ಕಡ್ಡಾಯವಾಗಿ ವಸೂಲಿ ಮಾಡಿ. ಹಕ್ಕುದಾರನಾಗಲು ತೆರಿಗೆ ಕಟ್ಟಬೇಕೆಂದು ತಿಳಿಹೇಳಿ. ಅಧಿಕಾರಿಗಳ ದಬ್ಬಾಳಿಕೆ, ದೌರ್ಜನ್ಯ ನಿಲ್ಲಬೇಕು. ಸ್ಮಶಾನ ಜಾಗದಲ್ಲಿ ಅನಧಿಕೃತವಾಗಿ ಮನೆ ಕಟ್ಟುವು ದನ್ನು ತಡೆಯಬೇಕು. ಸದ್ಯ ಮಹಾರಾಜರು ಕೊಟ್ಟಿರುವುದನ್ನಾ ದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಬಡ್ಡಿ ಮನ್ನಾ ಆಗಬೇಕು: ಮಾಜಿ ಮೇಯರ್ ದಕ್ಷಿಣಾ ಮೂರ್ತಿ ಮಾತನಾಡಿ, ತೆರಿಗೆ ಪಾವತಿದಾರರ ಬಡಾವಣೆಗಳ ರಸ್ತೆಗಳು ಹದಗೆಟ್ಟಿವೆ ಆದರೆ ರೆವಿನ್ಯೂ ಬಡಾವಣೆಗಳಲ್ಲಿ ಸುಸ್ಥಿತಿಯ ಲ್ಲಿವೆ. ರಸ್ತೆ, ಸೀವೇಜ್, ಚರಂಡಿ ಸ್ಥಿತಿ ಹಾಗೂ ಸ್ವಚ್ಛತೆಯನ್ನು ಪರಾಮರ್ಶಿಸಿ ಜನ ಪಾಲಿಕೆ ಆಡಳಿತ ವೈಖರಿಯನ್ನು ನಿರ್ಧ ರಿಸುತ್ತಾರೆ. ನಾನು ಮೇಯರ್ ಆಗಿದ್ದಾಗ ತೆರಿಗೆ ಮೇಲಿನ ಬಡ್ಡಿಯಲ್ಲಿ ಶೇ.40ರಷ್ಟು ರಿಯಾಯ್ತಿ ನೀಡಿದ್ದೆವು. ಇಂತಹ ಕ್ರಮ ಕೈಗೊಂಡರೆ ಕಂದಾಯ ಸಂಗ್ರಹ ಹೆಚ್ಚಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಯಾವುದೇ ಲೈಸೆನ್ಸ್ ನೀಡುವಂತಿಲ್ಲ, ತೆರಿಗೆ ಸಂಗ್ರಹಿಸುವಂತಿಲ್ಲ ಎಂದು 1983-84ರಲ್ಲೇ ಸರ್ಕಾರ ಆದೇಶಿಸಿದೆ. ಆದರೂ ಇದು ಮುಂದುವರೆ ದಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಗಮನಹರಿಸಬೇಕು. 2005ರಲ್ಲಿ ಕೇಂದ್ರದಿಂದ 2 ಸಾವಿರ ಕೋಟಿ ರೂ. ಅನು ದಾನ ಬಂದ ರೀತಿಯಲ್ಲೇ ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಅವಕಾಶವಿದೆ. ಸೋರೊಕೆ ತಡೆದರೆ ಆದಾಯ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.

`ಪಿಂಕ್ ಆಟೋ ಸೇವೆ’ಗೆ ಆಗ್ರಹ: ಮೈಸೂರಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಪ್ರಸ್ತಾಪಿಸಿ, ಮಹಿಳೆ ಯರ ರಕ್ಷಣೆ ಬಗ್ಗೆ ಮಾತನಾಡಿದ ಮಾಜಿ ಉಪ ಮೇಯರ್ ಪುಷ್ಪವಲ್ಲಿ, ನಗರದಲ್ಲಿ `ಪಿಂಕ್ ಆಟೋ ಸೇವೆ’ ಜಾರಿಗೆ ತಂದು, ಮಹಿಳೆಯರಿಗೆ ಚಾಲನಾ ತರಬೇತಿ ನೀಡುವುರ ಜೊತೆಗೆ ಪಾಲಿಕೆ ವತಿಯಿಂದಲೇ ಆಟೋ ನೀಡಬೇಕು. ಬಿಬಿಎಂಪಿ ಮಾದರಿಯಲ್ಲಿ `ಫಿಕ್ಸ್ ಮೈ ಸಿಟಿ’ ಆಪ್ ಮೂಲಕ ಸಾರ್ವ ಜನಿಕರ ದೂರಿಗೆ ಕ್ರಮವಹಿಸಬೇಕು. ಕೆಲವು ಏರಿಯಾಗಳಲ್ಲಿ ಮೂರ್ನಾಲ್ಕು ಅಂತಸ್ತಿನ ಮನೆ ಕಟ್ಟಿ, ಬಾಡಿಗೆದಾರರಿಂದ ನೀರಿನ ಬಿಲ್ ಪಡೆಯುವ ಮಾಲೀಕರು, ಅದನ್ನು ಪಾಲಿಕೆಗೆ ಪಾವತಿಸುವುದಿಲ್ಲ. ಕೆಲವು ಪ್ರದೇಶಗಳಲ್ಲಿ ತೆರಿಗೆ ವಸೂಲಿಯೇ ಆಗುತ್ತಿಲ್ಲ. ಆರೋಗ್ಯ, ಶಿಕ್ಷಣ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಉಪ ಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಉಪ ಆಯುಕ್ತ ಶಶಿಕುಮಾರ್, ಎಸ್‍ಇ ಮಹೇಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದರು.

Translate »