ಅಳಿವಿನಂಚಿನಲ್ಲಿರುವ‘ಕಾಡುಪಾಪ’ಗಳ ರಕ್ಷಣೆ
ಚಾಮರಾಜನಗರ

ಅಳಿವಿನಂಚಿನಲ್ಲಿರುವ‘ಕಾಡುಪಾಪ’ಗಳ ರಕ್ಷಣೆ

December 16, 2022

ಕೊಳ್ಳೇಗಾಲ, ಡಿ.15- ಬೆಂಗಳೂರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಅಳಿವಿನಂಚಿನಲ್ಲಿರುವ ಎರಡು ಕಾಡುಪಾಪ, ಬೇಟೆಗಾರರಿಂದ ರಕ್ಷಿಸುವಲ್ಲಿ ಕೊಳ್ಳೇ ಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಮಹದೇಶ್ವರ ಬೆಟ್ಟದ ಜಡೇಶೆಟ್ಟಿ ಪುತ್ರ ವೀರಭದ್ರ (58) ಮತ್ತು ಮೈಸೂರು ತಾಲೂಕು ದೊಡ್ಡಕಾನ್ಯ ಗ್ರಾಮದ ನಿವಾಸಿ ಪುಟ್ಟಸ್ವಾಮ ಪ್ಪರ ಪುತ್ರ ರಾಜುವನ್ನು ಈ ಸಂಬಂಧ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆಣೆಹೊಲ ಗ್ರಾಮದ ಮಹದೇವ ತಲೆಮರೆಸಿಕೊಂಡಿದ್ದಾನೆ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶವೊಂದರ ಮುಖ್ಯ ರಸ್ತೆಯ ಬಳಿ ಎರಡು ಕಾಡುಪಾಪ ಮಾರಾಟಕ್ಕಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್‍ಐ ವಿಜಯರಾಜ್, ಮುಖ್ಯ ಪೇದೆಗಳಾದ ರಾಮಚಂದ್ರ, ಸ್ವಾಮಿ, ತಖೀವುಲ್ಲ, ಶಂಕರ್, ಬಸವರಾಜು, ಪೇದೆ ಬಸವರಾಜು ಮತ್ತು ಚಾಲಕ ಪ್ರಭಾಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಾಡುಪಾಪಗಳನ್ನು ರಕ್ಷಿಸಿದರು. ಆರೋಪಿಗಳು ಬೆಂಗಳೂರಿನಲ್ಲಿ ಮಾರಲು ಈ ಕಾಡುಪಾಪ ಪ್ರಾಣಿಗಳನ್ನು ಪಂಜರದಲ್ಲಿಟ್ಟುಕೊಂಡು, ಬೈಕ್‍ನಲ್ಲಿ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಯಿತು. ಬಂಧಿತರಿಂದ ಬ್ಯಾಗ್, ಹೀರೊ ಹೊಂಡಾ ಬೈಕ್(ಕೆಎ10, ಎಸ್ 6240) ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಆರೋಪಿಗಳಿಗೆ ಡಿ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Translate »