ಮುಖ್ಯ ಶಿಕ್ಷಕನ ನೀಚ ಬುದ್ಧಿಯಿಂದ ಕೆರಳಿದ ವಿದ್ಯಾರ್ಥಿನಿಯರು: ಗುರುವಿಗೆ ತಕ್ಕ `ಪಾಠ’
ಮಂಡ್ಯ

ಮುಖ್ಯ ಶಿಕ್ಷಕನ ನೀಚ ಬುದ್ಧಿಯಿಂದ ಕೆರಳಿದ ವಿದ್ಯಾರ್ಥಿನಿಯರು: ಗುರುವಿಗೆ ತಕ್ಕ `ಪಾಠ’

December 16, 2022

ಪಾಂಡವಪುರ/ಶ್ರೀರಂಗಪಟ್ಟಣ, ಡಿ.15-ತಮಗೆ ಪಾಠ ಹೇಳಬೇಕಾದ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಕೆರಳಿದ ವಿದ್ಯಾರ್ಥಿ ನಿಯರು ಆತನನ್ನು ಶಾಲೆಯ ಆಫೀಸ್ ರೂಂ ನಲ್ಲಿ ಕೂಡಿ ಹಾಕಿ ಧರ್ಮದೇಟು ನೀಡುವ ಮೂಲಕ ಮೇಷ್ಟ್ರಿಗೆ ತಾವೇ `ಪಾಠ’ ಕಲಿಸಿ ದ್ದಾರೆ. ಕೊನೆಗೆ ಗ್ರಾಮಸ್ಥರು ಧಾವಿಸಿ, ಹಾಸ್ಟೆಲ್ ವಾರ್ಡನ್ ಸಹಾಯದೊಂದಿಗೆ ಶಿಕ್ಷಕನನ್ನು ವಿದ್ಯಾರ್ಥಿನಿಯರಿಂದ ಬಿಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದ(52) ವಿದ್ಯಾರ್ಥಿನಿಯರಿಂದ ಗೂಸಾ ತಿಂದು ಜೈಲು ಪಾಲಾದವನಾಗಿದ್ದು, ಕೆ.ಆರ್.ಎಸ್. ಠಾಣೆ ಪೊಲೀಸರು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಈತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿ ಸಲಾಗಿದೆ. ಮುಖ್ಯ ಶಿಕ್ಷಕ ಚಿನ್ಮಯಾನಂದ ಮೈಸೂರಿನ ಜೆ.ಪಿ.ನಗರ ನಿವಾಸಿಯಾಗಿದ್ದು, ಶಾಲಾ ಅವಧಿ ಮುಗಿದ ನಂತರ ಮೈಸೂರಿಗೆ ವಾಪಸ್ಸಾಗದೇ ರಾತ್ರಿ ವೇಳೆ ಶಾಲೆಗೆ ಹೊಂದಿಕೊಂಡಂತಿರುವ ಆರ್‍ಎಂಎಸ್‍ಎ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಎಂದು ಹೇಳಲಾಗಿದೆ.

 

ವಿದ್ಯಾರ್ಥಿನಿಯರನ್ನು ತನ್ನ ಆಫೀಸ್ ರೂಂಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುವುದು ಹಾಗೂ ಅವರಿಗೆ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ ತೋರಿಸುವುದು, ಸಹೋದ್ಯೋಗಿ ಶಿಕ್ಷಕರ ಅಂಗಾಂಗಗಳನ್ನು ವಿದ್ಯಾರ್ಥಿನಿಯರ ಅಂಗಾಂಗಗಳಿಗೆ ಹೋಲಿಸಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಎಂದು ಆರೋಪಿಸಲಾ ಗಿದೆ. ಆತನ ವರ್ತನೆಯನ್ನು ವಿರೋಧಿಸಿದರೆ ಕೊಲೆ ಬೆದರಿಕೆ ಹಾಕುವುದರ ಜೊತೆಗೆ ಟಿಸಿಯಲ್ಲಿ `ಬ್ಯಾಡ್ ಕ್ಯಾರೆಕ್ಟರ್’ ಎಂದು ನಮೂದಿಸಿ ಭವಿಷ್ಯ ಹಾಳು ಮಾಡುವುದಾಗಿ ಬೆದರಿಸುತ್ತಿದ್ದ. ಕೆಲವು ವಿದ್ಯಾರ್ಥಿನಿಯರು ಆತನ ವರ್ತನೆ ಬಗ್ಗೆ ಹಾಸ್ಟೆಲ್‍ನ ವಾರ್ಡನ್ ಕೆ.ಎಸ್.ನಮಿತಾ ಅವರ ಬಳಿ ಅಲವತ್ತುಕೊಂಡಿದ್ದಾರಾದರೂ, ವಾರ್ಡನ್ ನಿಸ್ಸಹಾಯಕ ರಾಗಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಪಾನಮತ್ತನಾಗಿ ಮುಖ್ಯ ಶಿಕ್ಷಕ ಚಿನ್ಮಯಾನಂದ ಹಾಸ್ಟೆಲ್ ಪ್ರವೇಶಿಸಿದಾಗ ಆತನನ್ನು ಶಾಲೆಯ ಆಫೀಸ್ ರೂಂನಲ್ಲಿ ಕೂಡಿ ಹಾಕಿ ಒಳಗಿನಿಂದ ಚಿಲಕ ಹಾಕಿಕೊಂಡ ವಿದ್ಯಾರ್ಥಿನಿಯರು, ದೊಣ್ಣೆ ಹಾಗೂ ಪೊರಕೆಯಿಂದ ಧರ್ಮದೇಟು ನೀಡಿ ಆತನಿಗೆ ಬುದ್ಧಿ ಕಲಿಸಿದ್ದಾರೆ. ಮುಖ್ಯ ಶಿಕ್ಷಕನಿಗೆ ಪಾಠ ಕಲಿಸುವ ವೇಳೆ ವಾರ್ಡನ್ ಮಧ್ಯೆ ಪ್ರವೇಶಿಸಿ ಆತನನ್ನು ರಕ್ಷಿಸಬಹುದು ಎಂಬ ಉದ್ದೇಶದಿಂದ ವಿದ್ಯಾರ್ಥಿನಿಯರು ವಾರ್ಡನ್ ರೂಂ ಅನ್ನು ಹೊರಗಿನಿಂದ ಚಿಲಕ ಹಾಕಿದ್ದಾರೆ. ವಿದ್ಯಾರ್ಥಿನಿಯರ ಗಲಾಟೆ ಕೇಳಿ ರೂಂನಿಂದ ಹೊರ ಬರಲು ವಾರ್ಡನ್ ಪ್ರಯತ್ನಿಸಿದಾಗ ಅವರ ರೂಂ ಅನ್ನು ಹೊರಗಿನಿಂದ ಚಿಲಕ ಹಾಕಿರುವುದು ಗೊತ್ತಾಗಿದೆ. ಕಿಟಕಿ ಮೂಲಕ ವಿದ್ಯಾರ್ಥಿನಿಯರನ್ನು ಕರೆದು ಬಾಗಿಲು ತೆಗೆಸಿ ಹೊರ ಬಂದಾಗ ಮುಖ್ಯ ಶಿಕ್ಷಕನ ಆಫೀಸ್ ರೂಂ ಅನ್ನು ಒಳಗಿನಿಂದ ಚಿಲಕ ಹಾಕಿಕೊಂಡು ಕೆಲ ವಿದ್ಯಾರ್ಥಿನಿಯರು ಆತನಿಗೆ ಧರ್ಮದೇಟು ನೀಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಕಿಟಕಿ ಮೂಲಕ ವಿದ್ಯಾರ್ಥಿನಿಯರನ್ನು ವಾರ್ಡನ್ ಕರೆದಾಗ ವಿದ್ಯಾರ್ಥಿನಿಯರು `ಈ ವಿಚಾರ ನಿಮಗೆ ಸಂಬಂಧಿಸಿದ್ದಲ್ಲ, ಹೋಗಿ ಮೇಡಂ’ ಎಂದು ಹೇಳುತ್ತಾ ಕಾಮುಕ ಮುಖ್ಯ ಶಿಕ್ಷಕನಿಗೆ ತಕ್ಕ ಶಾಸ್ತಿ ಮುಂದುವರೆಸಿದ್ದಾರೆ. ಶಾಲೆಯಲ್ಲಿ ಗಲಾಟೆ ನಡೆಯುತ್ತಿರುವ ವಿಷಯ ತಿಳಿದು ಧಾವಿಸಿದ ಗ್ರಾಮಸ್ಥರು ವಿದ್ಯಾರ್ಥಿನಿಯರ ಮನವೊಲಿಸಿ ಆಫೀಸ್ ರೂಂ ಬಾಗಿಲು ತೆಗೆಸಿ ಮುಖ್ಯ ಶಿಕ್ಷಕ ಚಿನ್ಮಯಾನಂದನನ್ನು ಕೆಆರ್‍ಎಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಅಂದು ರಾತ್ರಿ 10.30ರ ಸುಮಾರಿನಲ್ಲಿ ಹಾಸ್ಟೆಲ್ ವಾರ್ಡನ್ ಕೆ.ಎಸ್.ನಮಿತಾ ನೀಡಿದ ದೂರನ್ನು ಪೋಕ್ಸೋ ಕಾಯಿದೆ ಮಾತ್ರವಲ್ಲದೇ ಭಾರತೀಯ ದಂಡ ಸಂಹಿತೆ 354ಎ, 354ಡಿ, 506, 509ರಡಿ ದಾಖಲಿಸಿಕೊಂಡ ಪೊಲೀಸರು ಚಿನ್ಮಯಾನಂದನನ್ನು ಬಂಧಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರತಿಭಟನೆ: ಮುಖ್ಯ ಶಿಕ್ಷಕನ ಲೈಂಗಿಕ ಕಿರುಕುಳ ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಶಾಲಾ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿನಿಯರ ಪೋಷಕರು ಚಿನ್ಮಯಾನಂದ ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Translate »