ಇನ್ನು ಮುಂದೆ ಕಂಬಗಳಿಗೆ ಬದಲು ಅಂಡರ್‍ಗ್ರೌಂಡ್‍ನಲ್ಲಿ ಕೇಬಲ್ ಅಳವಡಿಕೆ
ಮೈಸೂರು

ಇನ್ನು ಮುಂದೆ ಕಂಬಗಳಿಗೆ ಬದಲು ಅಂಡರ್‍ಗ್ರೌಂಡ್‍ನಲ್ಲಿ ಕೇಬಲ್ ಅಳವಡಿಕೆ

December 16, 2022

ಮೈಸೂರು, ಡಿ.15(ಎಸ್‍ಬಿಡಿ)- ಮೈಸೂರು ನಗರದ ಅಂದಗೆಡಿಸುವುದರ ಜೊತೆಗೆ ಸಾರ್ವಜನಿಕರಿಗೆ ಕಂಟಕವಾಗು ತ್ತಿರುವ ಕೇಬಲ್‍ಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಗಡುವು ವಿಧಿಸಿದೆ.

ನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.

ಅಕ್ರಮವಾಗಿ ವಿದ್ಯುತ್ ಕಂಬಗಳಲ್ಲಿ ಅಳ ವಡಿಸಲಾಗಿರುವ ಟಿವಿ, ಇಂಟರ್‍ನೆಟ್ ಇನ್ನಿತರ ಕೇಬಲ್‍ಗಳನ್ನು ಭೂಮಿ ಒಳಗೆಯೇ (ಅಂಡರ್‍ಗ್ರೌಂಡ್-ಯುಜಿ) ಅಳವಡಿ ಸಲು ಮುಂದಿನ ಜನವರಿ 15ರೊಳಗೆ ಪಾಲಿಕೆಯಿಂದ ಅನುಮತಿ ಪಡೆದು, ನಂತರದ 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸ ಬೇಕು. ಇಲ್ಲವಾದರೆ ಮುಲಾಜಿಲ್ಲದೆ ಕೇಬಲ್ ಗಳನ್ನು ತೆರವುಗೊಳಿಸಲು ನಿರ್ಧರಿಸಲಾ ಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು. ವಿದ್ಯುತ್ ಕಂಬಗಳಲ್ಲಿ ಅನಧಿ ಕೃತವಾಗಿ ಅಳವಡಿಸಲಾಗಿರುವ ಓವರ್ ಹೆಡ್ ಕೇಬಲ್‍ಗಳಿಗೆ ಮೀಟರ್‍ಗೆ 150 ರೂ.ಗಳಂತೆ ದಂಡ ವಿಧಿಸಿ ಸಕ್ರಮಗೊಳಿ ಸುವುದರ ಜೊತೆಗೆ 50 ರೂ. ವಾರ್ಷಿಕ ಶುಲ್ಕ ನಿಗದಿಪಡಿಸುವುದು ಹಾಗೂ ಹೊಸದಾಗಿ ಕೇಬಲ್ ಅಳವಡಿಸುವ ಕಂಪನಿ ಗಳು ಕಡ್ಡಾಯವಾಗಿ ಪಾಲಿಕೆ ಅನುಮತಿ ಪಡೆದು ನಿಯಮಾನುಸಾರ ವಾರ್ಷಿಕ ಶುಲ್ಕ ಪಾವತಿಸುವ ಸಂಬಂಧ ಇಂದಿನ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸ ಲಾಯಿತು. ಆದರೆ ಇದಕ್ಕೆ ಸರ್ವಪಕ್ಷಗಳ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಅಯೂಬ್ ಖಾನ್, ಕಂಬಗಳಲ್ಲಿ ವಿದ್ಯುತ್ ಲೈನ್ ಇರುವು ದನ್ನು ಸೆಸ್ಕ್ ಅಧಿಕಾರಿಗಳೇ ಮರೆತಿದ್ದಾರೆ. ಶಿಲ್ಪಾನಾಗ್ ಅವರು ಆಯುಕ್ತರಾಗಿದ್ದಾಗ ಸಭೆ ನಡೆಸಿ, ಕಂಬಗಳಲ್ಲಿ ಕೇಬಲ್ ಅಳ ವಡಿಕೆಗೆ ಅವಕಾಶ ನೀಡಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸೆಸ್ಕ್ ಅಧಿಕಾರಿ ಗಳಿಗೆ ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಮತ್ತೆ ಕೇಬಲ್‍ಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ವೆ ನಡೆಸುವುದು ಕಷ್ಟಸಾಧ್ಯ. ಹಾಗಾಗಿ ಎಲ್ಲವನ್ನೂ ತೆರವುಗೊಳಿಸಿ ನಂತರ ಮುಂದಿನ ಕ್ರಮ ವಹಿಸಿ ಎಂದರು. ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಮಾತನಾಡಿ, ವಿದ್ಯುತ್ ಕಂಬಗಳಲ್ಲಿ ಹಲವು ಕೇಬಲ್ ಗಳನ್ನು ಅಳವಡಿಸಲಾಗಿದೆ. ಇದರಿಂದ ನಗರದ ಸೌಂದರ್ಯ ಹಾಳಾಗಿದೆ ಎಂದರು. ಜೆಡಿಎಸ್ ಸದಸ್ಯ ರಮೇಶ್, ಓವರ್‍ಹೆಡ್ ಕೇಬಲ್‍ಗಳಿಂದ ನಗರದ ಸೌಂದರ್ಯ ಹಾಳಾಗುತ್ತದೆ. ಅಲ್ಲದೆ ಕೇಬಲ್ ಗಳು ತುಂಡಾಗಿ ಸಾರ್ವಜನಿಕರಿಗೂ ಅಪಾಯವಾಗುತ್ತದೆ ಎಂಬ ಕಾರಣದಿಂದ ವಿದ್ಯುತ್ ಸಂಪರ್ಕವನ್ನೂ ಯುಜಿ ಕೇಬಲ್ ಮೂಲಕ ನೀಡುವ ಕಾರ್ಯ ನಡೆದಿ ರುವಾಗ ಕಂಬಗಳಲ್ಲಿ ಕೇಬಲ್ ಅಳವಡಿ ಸಲು ಅನುಮತಿ ನೀಡುವ ಕಾರ್ಯ ಸೂಚಿಯನ್ನು ಏಕೆ ತಂದಿದ್ದೀರಿ ಎಂದು ಪ್ರಶ್ನಿಸಿದರು. ಆರಿಫ್ ಹುಸೇನ್, ಸತ್ಯ ರಾಜ್ ಸೇರಿದಂತೆ ಹಲವು ಸದಸ್ಯರು ಮೊದಲು ಅನಧಿಕೃತ ಕೇಬಲ್‍ಗಳನ್ನು ತೆರವು ಮಾಡಿಸಿ ಎಂದರೆ, ಏಕಾಏಕಿ ತೆರವು ಮಾಡಿದರೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವು ದರಿಂದ ಗಡುವು ನೀಡುವಂತೆ ಸದಸ್ಯ ಎಂ.ಸಿ.ರಮೇಶ್, ಪ್ರೇಮಾ ಶಂಕರೇ ಗೌಡ, ಎಸ್‍ಬಿಎಂ ಮಂಜು ಮತ್ತಿತ ರರು ಅಭಿಪ್ರಾಯಿಸಿದರು.

ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ತಕ್ಷಣದಲ್ಲೇ ಕೇಬಲ್ ತೆರವು ಮಾಡಲು ಆಗುವುದಿಲ್ಲ. ಯುಜಿ ಕೇಬಲ್ ಆಗಿ
ಬದಲಾಯಿಸಲು ಪಾಲಿಕೆಯಿಂದ ಅನುಮತಿ ಪಡೆದು ಕಾಮಗಾರಿ ಪೂರ್ಣಗೊಳಿ ಸಲು 3 ತಿಂಗಳು ಕಾಲಾವಕಾಶ ನೀಡಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಮೇಯರ್ ಅಯೂಬ್ ಖಾನ್, ಶ್ರೀಮಂತ ಉದ್ಯಮಿಗಳಿಗೆ ಕಾಲಾವಕಾಶ ನೀಡುತ್ತೀರಿ, ಬಡವರ ಮೇಲೆ ತಕ್ಷಣ ಕ್ರಮ ವಹಿಸುತ್ತೀರಿ ಎಂದು ಕಿರಿಕಾರಿದರು. ಕಡೆಗೆ ಮೇಯರ್ ಶಿವಕುಮಾರ್, ಏಕಾಏಕಿ ಕೇಬಲ್ ತುಂಡರಿಸಿದರೆ ಇಂಟರ್‍ನೆಟ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾ ಗುತ್ತದೆ. ಹಾಗಾಗಿ ಅಂಡರ್‍ಗ್ರೌಂಡ್(ಭೂಮಿಯೊಳಗೆ)ನಲ್ಲಿ ಕೇಬಲ್ ಅಳವಡಿಸಲು ಜ.15ರೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು, ನಂತರದ 2 ತಿಂಗಳಲ್ಲಿ ಕಾಮಗಾರಿ ಯನ್ನು ಸಂಪೂರ್ಣವಾಗಿ ಮುಗಿಸಲು ಗಡುವು ನೀಡಿ, ನಂತರದಲ್ಲೂ ಕಂಬದಲ್ಲೇ ಬಿಟ್ಟಿದ್ದರೆ ಅವುಗಳನ್ನು ತೆರವುಗೊಳಿಸುವ ನಿರ್ಣಯ ಪ್ರಕಟಿಸಿದರು.

ಸಾವಿರಾರು ಕಂಬ: ಮೈಸೂರು ನಗರದಲ್ಲಿ ಅನಧಿಕೃತವಾಗಿ ಸುಮಾರು 3-4 ಸಾವಿರ ಕಂಬಗಳನ್ನು ನೆಡಲಾಗಿದೆ. ಅವುಗಳನ್ನು ಯಾವ ಕಂಪನಿಗಳು ಅಳವಡಿಸಿವೆ, ಇದಕ್ಕೆ ಪಾಲಿಕೆ ಅನುಮತಿ ಪಡೆದಿದ್ದಾರಾ ಎಂದು ವಿವರಣೆ ಕೇಳಿ ಪತ್ರ ಬರೆದು ನಾಲ್ಕೈದು ತಿಂಗಳಾದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಆ ಕಂಬಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಎಸ್‍ಬಿಎಂ ಮಂಜು, ಇದು ಅಕ್ಷರಷಃ ಸತ್ಯ. ಪಾರಂಪರಿಕ ಹಿನ್ನೆಲೆಯುಳ್ಳ ವೃತ್ತ, ಕಟ್ಟಡ, ಆಸ್ಪತ್ರೆ, ಶಾಲೆ-ಕಾಲೇಜುಗಳ ಬಳಿಯೂ ರೇಡಿಯೇಷನ್ ಹೊರಹೊಮ್ಮಿಸುವ ಕಂಬಗಳನ್ನು ಅಳವಡಿಸಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆದವನು ವಾರ್ಷಿಕ ಮೂರೂವರೆ ಲಕ್ಷ ರೂ. ಶುಲ್ಕ ಪಾವತಿಸಿ, ಕಂಪನಿಗಳಿಂದ ಕೋಟ್ಯಾಂತರ ರೂ. ಹಣ ಮಾಡುತ್ತಿದ್ದಾನೆ. ಈ ಬಗ್ಗೆ ಸಂಪೂರ್ಣ ವಿವರ ಕೊಡಿಸಿ ಎಂದು ಒತ್ತಾಯಿಸಿದರು.

ಟ್ರೆಂಚ್‍ಗಳಿಗೆ ಶುಲ್ಕ: ಎಚ್‍ಡಿಡಿ ಮೂಲಕ ಕೇಬಲ್ ಅಳವಡಿಸಲು ನಗರ ಪಾಲಿಕೆಯಲ್ಲಿ ದರ ನಿಗದಿಯಾಗಿತ್ತು. ಆದರೆ ಆ ವೇಳೆ ಪ್ರತಿ ಕಿ.ಮೀ.ಗೆ ಸುಮಾರು 6 ಓಪನ್ ಟ್ರೆಂಚ್‍ಗಳನ್ನು ತೆಗೆಯುವುದರಿಂದ ತಲಾ 10 ಸಾವಿರದಂತೆ ಪ್ರತಿ ಕಿ.ಮೀ.ಗೆ 60 ಸಾವಿರ ದರ ನಿಗದಿಪಡಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪ ಮೇಯರ್ ಡಾ.ಜಿ.ರೂಪಾ ಉಪಸ್ಥಿತರಿದ್ದರು.

ಸೆಸ್ಕ್ ಅಧಿಕಾರಿಗಳ ಸಭೆ: ಯುಜಿ ಕೇಬಲ್ ಅಳವಡಿಸುವಲ್ಲಿ ಮಾರ್ಗಸೂಚಿ ಪಾಲಿಸದಿ ರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.

ಕರ ಪರಿಷ್ಕರಣೆ: ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ನಾಲ್ಕು ಯೂನಿಟ್ ಸಂಪರ್ಕ ಹೊಂದಿರುವ ಕಟ್ಟಡಗಳ ಕರ ಪರಿಷ್ಕರಣೆಗೆ ಕೌನ್ಸಿಲ್‍ನಲ್ಲಿ ನಿರ್ಣಯಿಸಲಾಗಿದೆ. ಬಹುಮಹಡಿ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಕಟ್ಟಡಗಳಿಗೆ ಪಾಲಿಕೆಗೆ ಹೆಚ್ಚಿನ ಹೊರೆಯಾಗುತ್ತಿರುವ ಕಾರಣ ಪ್ರತಿ ಯೂನಿಟ್‍ಗೆ ಐವರಂತೆ ಲೆಕ್ಕಚಾರ ಮಾಡಿ ಪೆÇ್ರೀರೇಟಾ ವೆಚ್ಚವನ್ನು ಹೆಚ್ಚಿಸಲು ಅಂದಾಜಿಸಿ, ಪ್ರಸ್ತುತ ದರದ ಶೇ.80ರಷ್ಟು ಹೆಚ್ಚಿಸಿ, ಪರಿಷ್ಕರಿಸಲು ನಿರ್ಧರಿಸಲಾಗಿದೆ.

Translate »