ಹನೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಚಾಮರಾಜನಗರ

ಹನೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

July 13, 2021

ಹನೂರು, ಜು.12(ಸೋಮು)- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮ ವಾರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ್ ರವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೋವಿಡ್ ಸಂಕಷ್ಟದ ಕಾಲ ದಲ್ಲಿ ಜೀವ ಭಯದ ಹಂಗನ್ನು ತೊರೆದು ಸೇವೆ ಸಲ್ಲಿಸಲಾಗಿದೆ. ಹಾಗಾಗಿ, ಸರ್ಕಾರ ಈ ಬಗ್ಗೆ ಮನ ಗಂಡು ನಮಗೆ ಹಲವು ಸೌಕರ್ಯ ಗಳನ್ನು ಒದಗಿಸಿಕೊಡಬೇಕು. ಈ ದಿಸೆಯಲ್ಲಿ ಕೋವಿಡ್ ಕರ್ತವ್ಯನಿರತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸುರಕ್ಷತೆಗೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೇ ಪರಿಹಾರವನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಐಸಿಡಿಎಸ್ ದುರ್ಬಲಗೊಳಿಸುವ ನಡೆಗಳನ್ನು ಕೈಬಿಡಬೇಕು. ರಾಜ್ಯದಲ್ಲಿ ಇಲಾಖಾ ಶಿಫಾರಸ್ಸಿನ 339.48 ಲಕ್ಷ ರೂ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಕಾರ್ಯಕರ್ತೆ ಯರಿಗೆ ಪಿಪಿಇ ಕಿಟ್, ಮಾಸ್ಕ್, ಕೈ ಗವಸು ಹಾಗೂ ಸ್ಯಾನಿಟೈಸರ್ ನೀಡಬೇಕು. ಕುಟುಂಬದ ಸದಸ್ಯರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಸೇರಿದಂತೆ ಇನ್ನಿತರೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಶಿರಸ್ತೆದಾರ್ ರವಿ ಮಾತನಾಡಿ, ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದು ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮರಿಯಮ್ಮ, ಸುಂದ್ರಮ್ಮ, ನಳಿನಿ, ಸೆಲ್ವಿ, ಮಾದೇವಮ್ಮ, ಚಿಕ್ಕಮಾರಮ್ಮ, ಭಾಗ್ಯ ಹಾಗೂ ಇನ್ನಿತರರು ಹಾಜರಿದ್ದರು.

Translate »